ADVERTISEMENT

ಮಲ್ಪೆ ಬಂದರು ಹೂಳೆತ್ತಲು ಗ್ರೀನ್‌ಸಿಗ್ನಲ್‌

7 ವರ್ಷಗಳಿಂದ ಹೂಳೆತ್ತದೆ ಮೀನುಗಾರಿಕೆಗೆ ಅಡ್ಡಿಯಾಗಿತ್ತು; ಹೂಳಿನಲ್ಲಿ ಸಿಲುಕಿ ಮೀನುಗಾರರು ಸಾವು

ಬಾಲಚಂದ್ರ ಎಚ್.
Published 24 ಜನವರಿ 2023, 15:00 IST
Last Updated 24 ಜನವರಿ 2023, 15:00 IST
ಮಲ್ಪೆ ಬಂದರು
ಮಲ್ಪೆ ಬಂದರು   

ಉಡುಪಿ: ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ತುಂಬಿರುವ ಹೂಳು ಎತ್ತಬೇಕು ಎಂಬ ಮೀನುಗಾರರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಮಲ್ಪೆ ಬಂದರಿನ ಮೂರು ಬೇಸಿನ್‌ಗಳಲ್ಲಿ ಹಾಗೂ ನ್ಯಾವಿಗೇಷನ್‌ ಚಾನೆಲ್‌ಗಳಲ್ಲಿ ತುಂಬಿಕೊಂಡಿರುವ ಹೂಳನ್ನು ಎತ್ತುವ ಕಾಮಗಾರಿಗೆ ಜ.25ರಂದು ಶಂಕುಸ್ಥಾಪನೆ ನೆರವೇರಲಿದೆ.

ಬಂದರು ಹಾಗೂ ಮೀನುಗಾರಿಕಾ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿ ಗುತ್ತಿಗೆಯನ್ನು ಗೋವಾದ ವೈಭವಿ ಡ್ರೆಜಿಂಗ್ ಕಂಪನಿಗೆ ವಹಿಸಲಾಗಿದೆ. ಗುತ್ತಿಗೆ ನಿಯಮಗಳ ಪ್ರಕಾರ ಬಂದರಿನ ಮೂರು ಬೇಸನ್‌ಗಳಲ್ಲಿ ತುಂಬಿರುವ 95,200 ಕ್ಯೂಬಿಕ್ ಮೀಟರ್‌ ಹೂಳನ್ನು ಮೇಲೆತ್ತಲಾಗುವುದು.

ADVERTISEMENT

ಬಂದರಿನ 950 ಮೀಟರ್ ಉದ್ದ ಹಾಗೂ 50 ಮೀಟರ್ ಅಗಲವಾದ ಪ್ರದೇಶದಲ್ಲಿ ಬೋಟ್‌ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಹೂಳನ್ನು ಎತ್ತಲಾಗುವುದು. ಇದೇ ವರ್ಷದ ಡಿ.15ರೊಳಗೆ ಕಾಮಗಾರಿ ಮುಕ್ತಾಯವಾಗಬೇಕು ಎಂಬ ಷರತ್ತು ಹಾಕಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮಲ್ಪೆ ಮೀನುಗಾರರ ಜೀವ ಹಾಗೂ ಜೀವನ ಉಳಿಯಲಿದೆ.

ಸಮಸ್ಯೆ ಏನಾಗಿತ್ತು:

ಮಲ್ಪೆಯ ಮೀನುಗಾರರ ಪಾಲಿಗೆ ಕಡಲಿಗಿಂತ ಬಂದರಿನಲ್ಲಿ ತುಂಬಿರುವ ಹೂಳು ಪ್ರಾಣಕ್ಕೆ ಸಂಚಕಾರವಾಗಿತ್ತು. ಆಳ ಸಮುದ್ರ ಮೀನುಗಾರಿಕೆಯಲ್ಲಿ ಸಂಭವಿಸುವ ಅವಘಡಗಳಲ್ಲಿ ಸಾವನ್ನಪ್ಪುವ ಮೀನುಗಾರರಿಗಿಂತ ಬಂದರಿನ ಹೂಳಿನಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿತ್ತು.

ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2017ರಿಂದ 2022ರವರೆಗೆ ಬಂದರಿನ ಹೂಳಿನಲ್ಲಿ ಸಿಲುಕಿ ಮೃತಪಟ್ಟವರು ಬರೋಬ್ಬರಿ 54 ಮಂದಿ ಮೀನುಗಾರರು ಹಾಗೂ ಕಾರ್ಮಿಕರು. ಇವು ಲೆಕ್ಕಕ್ಕೆ ಸಿಕ್ಕ ಪ್ರಕರಣಗಳಾದರೆ, ಗೊತ್ತು ಗುರಿ ಇಲ್ಲದೆ ಸತ್ತವರು ಹಲವರು.

7 ವರ್ಷಗಳಿಂದ ದಕ್ಕೆಯಲ್ಲಿ ಹೂಳು ತೆಗೆಯದ ಪರಿಣಾಮ ಮಲ್ಪೆಯ ಬಂದರು ಮೀನುಗಾರರ ಪಾಲಿಗೆ ಅಕ್ಷರಶಃ ಮೃತ್ಯು ಕೂಪವಾಗಿತ್ತು. ಬೋಟಿನಿಂದ ಮೀನು ಇಳಿಸುವಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದರೆ ನೇರವಾಗಿ ಹೂಳಿನಲ್ಲಿ ಹೂತು ಪ್ರಾಣಬಿಡಬೇಕಾಗಿತ್ತು.

ಹೀಗೆ ಹೂಳಿನಲ್ಲಿ ಸಿಲುಕಿ ಮೃತಪಟ್ಟ ನೂರಾರು ಶವಗಳನ್ನು ಮಲ್ಪೆಯ ಜೀವರಕ್ಷಕ ಈಶ್ವರ್ ಮಲ್ಪೆ ಮೇಲಕ್ಕೆತ್ತಿದ್ದಾರೆ.

ಮೀನುಗಾರಿಕೆಗೂ ಅಡ್ಡಿ:

ಹೂಳಿನಿಂದ ಮೀನುಗಾರಿಕಾ ಬೋಟ್‌ಗಳು ಸರಾಗವಾಗಿ ದಕ್ಕೆಗೆ ಬರಲು ಹಾಗೂ ಹೊರ ಹೋಗಲು ಅಡ್ಡಿಯಾಗಿತ್ತು. ಹೂಳು ಹೆಚ್ಚಾಗಿದ್ದ ಕಡೆಗಳಲ್ಲಿ ಬೋಟ್‌ಗಳು ಸಿಲುಕಿ ಹೊರ ತೆಗೆಯಲು ಹರಸಾಹಸ ಪಡಬೇಕಾಗಿತ್ತು. ಬೋಟ್‌ಗಳಿಗೆ ಹಾನಿಯಾಗಿ ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗಿತ್ತು. ಡ್ರೆಜ್ಜಿಂಗ್ ನಡೆದರೆ ಬಂದರಿಗೆ ಸರಾಗವಾಗಿ ಬೋಟ್‌ಗಳು ಬರಲು ಹಾಗೂ ಹೋಗಲು ಅನುಕೂಲವಾಗಲಿದೆ.

ಮಲ್ಪೆ ರಾಜ್ಯದ ಪ್ರಮುಖ ಬಂದರು

ರಾಜ್ಯದ ಪ್ರಮುಖ ಬಂದರಾಗಿ ಗುರುತಿಸಿಕೊಂಡಿರುವ ಮಲ್ಪೆ ಮೀನುಗಾರಿಕಾ ಬಂದರು ಭಟ್ಕಳ, ಕಾರವಾರ, ಬೈಂದೂರು, ಶಿರೂರು ಭಾಗಗಳಿಂದ ಬರುವ ಮೀನುಗಾರಿಕಾ ಬೋಟ್‌ಗಳಿಗೆ ತಂಗುದಾಣವಾಗಿದೆ. ಇಲ್ಲಿ 2400ಕ್ಕೂ ಹೆಚ್ಚು ಬೋಟ್‌ಗಳಿದ್ದು ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಮೀನು ರಫ್ತು ಮಾಡಲಾಗುತ್ತದೆ. ಹೂಳಿನ ಸಮಸ್ಯೆಯಿಂದ ಉದ್ಯಮಕ್ಕೆ ಪೆಟ್ಟು ಬಿದ್ದಿತ್ತು.

ಎರಡು ಜೆಟ್ಟಿ, ಸ್ಲಿಪ್‌ ವೇ ಉದ್ಘಾಟನೆ

ಮಲ್ಪೆ–ಉದ್ಯಾವರ ನದಿಯಲ್ಲಿ ₹ 10.90 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಎರಡು ಜೆಟ್ಟಿಗಳು ಹಾಗೂ ಮೀನುಗಾರಿಕೆ ಬಂದರಿನ ಯಾಂತ್ರಿಕ ಸ್ಲಿಪ್‌ವೇ ಕೂಡ ಉದ್ಘಾಟನೆಯಾಗುತ್ತಿದೆ. ಸ್ಲಿಪ್‌ವೇ ನಿರ್ಮಾಣದಿಂದ ಬೋಟ್‌ಗಳನ್ನು ಸುಲಭವಾಗಿ ಮೇಲಕ್ಕೆತ್ತಿ ದುರಸ್ಥಿಗೊಳಿಸಲು, ಪೇಂಟ್ ಮಾಡಲು ಸಾಧ್ಯವಾಗಲಿದೆ. ಜ.25ರಂದು ಸಂಜೆ 4.30ಕ್ಕೆ ಮಲ್ಪೆ ಬಂದರಿನ ಆವರಣದಲ್ಲಿ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಎಸ್‌.ಅಂಗಾರ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.