ಉಡುಪಿ: ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಕೈಮಗ್ಗ ಉತ್ಪನ್ನಗಳ ತಯಾರಿ, ಮಾರಾಟಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದ್ದು ನೇಕಾರ ಸಮುದಾಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಪದ್ಮಶಾಲಿ ನೇಕಾರರ ಪ್ರತಿಷ್ಠಾನ, ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಹಾಗೂ ಪ್ರಾಥಮಿಕ ನೇಕಾರರ ಸಹಕಾರ ಸಂಘಗಳ ಸಹಯೋಗದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಶನಿವಾರ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕೈಮಗ್ಗ ಸೀರೆಗಳ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇಕಾರರು ತಯಾರಿಸಿದ ಕೈಮಗ್ಗದ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮಾರಾಟ ಮಾಡುವ ಮೂಲಕ ಜಾಗತಿಕ ಮಾರುಕಟ್ಟೆ ಪ್ರವೇಶ ಮಾಡಬೇಕು. ನೇಕಾರರ ಕಲೆಗೆ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಎಂದರು.
ನಶಿಸುತ್ತಿರುವ ನೇಕಾರಿಕೆ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪದ್ಮಶಾಲಿ ನೇಕಾರರ ಪ್ರತಿಷ್ಠಾನವು ಆಸಕ್ತ 25 ಮಂದಿಗೆ ನೇಕಾರಿಕೆ ತರಬೇತಿಯನ್ನು ನೀಡಿ ಮತ್ತೆ ವೃತ್ತಿಯತ್ತ ಸೆಳೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕೈಮಗ್ಗ ಸೀರೆಗಳ ಉತ್ಸವದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಕುಲಕಸುಬುಗಳು ವಿನಾಶದ ಅಂಚಿನಲ್ಲಿವೆ. ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕುಲಕಸುಬುಗಳನ್ನು ಉಳಿಸುವ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ 'ಕೈಮಗ್ಗದ ಉತ್ಪನ್ನಗಳ ತಯಾರಿಕಾ ವೆಚ್ಚ ಹೆಚ್ಚಾಗಿರುವುದರಿಂದ ವೃತ್ತಿಯತ್ತ ಹೆಚ್ಚು ಆಕರ್ಷಿತರಾಗುತ್ತಿಲ್ಲ. ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ನೇಕಾರಿಕೆಗೆ ಪೆಟ್ಟುಕೊಟ್ಟಿದೆ. ನೇಕಾರಿಕೆ ತರಬೇತಿಯನ್ನು ಸರ್ಕಾರದ ಕೌಶಲ ತರಬೇತಿ ವೃತ್ತಿಗಳ ಪಟ್ಟಿಗೆ ಸೇರಿಸಬೇಕು. ಇದರಿಂದ ನೇಕಾರಿಕೆ ವೃತ್ತಿಯ ಪುನಶ್ಚೇತನ ಸಾಧ್ಯವಾಗಲಿದೆ. ಇಲ್ಲವಾದರೆ ಭವಿಷ್ಯದಲ್ಲಿ ನೇಕಾರಿಕೆ ಸಂಪೂರ್ಣ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೈಮಗ್ಗಗಳ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಖರೀದಿದಾರರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳ ತಯಾರಿಕೆ ಆಗಬೇಕು. ಯುವ ಸಮುದಾಯ ನೇಕಾರಿಕೆ ವೃತ್ತಿಯತ್ತ ಒಲವು ಬೆಳೆಸಿಕೊಳ್ಳಬೇಕು, ಕೈಮಗ್ಗ ಉಳಿಸಲು ಸರ್ಕಾರದ ಆರ್ಥಿಕ ನೆರವು ಅಗತ್ಯವಿದೆ ಎಂದರು.
ಪದ್ಮಶಾಲಿ ನೇಕಾರರು ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಹೋರಾಟ ಮಾಡುವುದರ ಜತೆಗೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಿ ಸೌಲಭ್ಯಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ ಎಂದರು.
ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಮಾತನಾಡಿದರು. ಉಡುಪಿ, ತಾಳಿಪಾಡಿ, ಶಿವಳ್ಳಿ, ಬ್ರಹ್ಮಾವರ, ಪಡುಪಣಂಬೂರು, ಮಂಗಳೂರು, ಬಸ್ರೂರು ಮತ್ತು ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳು ಭಾಗವಹಿಸಿದ್ದರು. 25 ಮಹಿಳೆಯರು ವೃತ್ತಿಪರ ನೇಕಾರರಾಗಿ ಉಡುಪಿ ಸೀರೆಗಳ ಉತ್ಪಾದನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.
ಕೈಮಗ್ಗದ ನೇಯ್ಗೆ ಅಂದು-ಇಂದು-ಮುಂದು' ವಿಷಯದ ಕುರಿತು ವಿಚಾರ ಸಂಕಿರಣ ನಡೆಯಿತು. ಪದ್ಮಶಾಲಿ ಕೂಡುಕಟ್ಟಿನ 16 ದೇವಸ್ಥಾನಗಳ ಅಧ್ಯಕ್ಷರು ಮತ್ತು ಮೊಕ್ತೇಸರರು ಹಾಗೂ ಕರಾವಳಿಯ ಎಂಟು ಪ್ರಾಥಮಿಕ ನೇಕಾರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳು ಭಾಗವಹಿಸಿದ್ದರು.
ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಆಯೋಜನಾ ಸಮಿತಿ ಅಧ್ಯಕ್ಷ ಮಂಜುನಾಥ್ ಮಣಿಪಾಲ್, ಕಾರ್ಯದರ್ಶಿ ಅವಿನಾಶ್ ಶೆಟ್ಟಿಗಾರ್, ಕೋಶಾಧಿಕಾರಿ ಶ್ರೀನಿವಾಸ್ ಶೆಟ್ಟಿಗಾರ್, ಜ್ಯೋತಿ ಪ್ರಸಾದ್ ಶೆಟ್ಟಿಗಾರ್, ಅಶೋಕ್ ಶೆಟ್ಟಿಗಾರ್ ಇದ್ದರು.
ಮೀಸಲಾತಿ ಪಟ್ಟಿಯಲ್ಲಿ ಪದ್ಮಶಾಲಿ ನೇಕಾರರನ್ನು ಶೆಟ್ಟಿಗಾರ್ ಎಂದು ಸೇರಿಸುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು ಆಯೋಗದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ
-ಕೆ.ಜಯಪ್ರಕಾಶ್ ಹೆಗ್ಡೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಕೈಮಗ್ಗ ಸೀರೆಗಳ ಉತ್ಸವದಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಇಳ್‌ಕಲ್ ಸೀರೆಗಳು ಗಮನ ಸೆಳೆದವು. ಬಾಗಲಕೋಟೆ ಜಿಲ್ಲೆಯ ಶಂಕರ ಕೈಮಗ್ಗ ನೇಕಾರ ಉತ್ಪಾದಕರ ಹಾಗೂ ಮಾರಾಟ ಸಹಕಾರಿ ಸಂಘ ಉಡುಪಿಯ ನಮ್ಮ ಶೈಲಿ ಕೈಮಗ್ಗ ಉತ್ಪನ್ನ ಮಾರಾಟ ಮಳಿಗೆ ಮಂಗಳೂರಿನ ಆರ್.ಆರ್ ಫ್ಯಾಷನ್ಸ್ ದೊಡ್ಡಬಳ್ಳಾಪುರದ ಮಹಿಳಾ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ ಶೈಲಿ ಸ್ವದೇಶಿ ಸಂಭ್ರಮ ಹಾಸನದ ನೀಲಕಂಠೇಶ್ವರ ನೇಕಾರರ ವಿವಿದೋದ್ಧೇಶ ಸಹಕಾರ ಸಂಘ ಶಿವಮೊಗ್ಗದ ಸ್ವದೇಶಿ ಖಾದಿ ಮಹಿಳಾ ಸ್ವಸಹಾಯ ಸಂಘ ತುಮ್ಮಿನಕಟ್ಟಿಯ ಮಾರ್ಕಂಡೇಶ್ವರ ಕೈಮಗ್ಗ ನೇಕಾರರ ಸಂಸ್ಥೆ ರಾಣೆಬೆನ್ನೂರಿನ ದಿ.ಬಣ್ಣ ಅಚ್ಚು ಹಾಕುವವರ ಮತ್ತು ನೇಕಾರ ಉತ್ಪಾದಕ ಸಹಕಾರಿ ಸಂಘ ಮೈಸೂರಿನ ಹತ್ತಿ ಕೈಮಗ್ಗ ನೇಕಾರರ ಸಹಕಾರ ಸಂಘ ಶಿವಮೊಗ್ಗದ ಚರಕ ಮಹಿಳಾ ವಿವಿದೋದ್ಧೇಶ ಕೈಗಾರಿಕಾ ಸಹಕಾರ ಸೊಸೈಟಿಯ ಕೈಮಗ್ಗ ಉತ್ಪನ್ನಗಳು ಪ್ರದರ್ಶನದಲ್ಲಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.