ADVERTISEMENT

ಶರಣ, ದಾಸ ಸಾಹಿತ್ಯಗಳ ಆಶಯ ಒಂದೇ: ಸುಗುಣೇಂದ್ರತೀರ್ಥ ಸ್ವಾಮೀಜಿ

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 6:45 IST
Last Updated 10 ನವೆಂಬರ್ 2024, 6:45 IST
ಹರಿದಾಸ ಸಾಹಿತ್ಯ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು
ಹರಿದಾಸ ಸಾಹಿತ್ಯ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು   

ಉಡುಪಿ: ದಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯದ ಆಶಯಗಳು ಸಮಾನವಾಗಿವೆ ಎಂದು ಪರ್ಯಾಯ ಪುತ್ತಿಗೆ ಪಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪರ್ಯಾಯ ಪುತ್ತಿಗೆ ಮಠ, ವಾದಿರಾಜ ಸಂಶೋಧನಾ ಪ್ರತಿಷ್ಠಾನ ಮತ್ತು ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ವಿಜಯ ದಾಸರ ಆರಾಧನೆಯ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹರಿದಾಸ ಸಾಹಿತ್ಯ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ದಾಸ ಸಾಹಿತ್ಯವು ಭಗವಂತನ ದಾಸ್ಯವನ್ನು ಸ್ವೀಕರಿಸಲು ಹೇಳಿದರೆ, ಶರಣ ಸಾಹಿತ್ಯವು ಗೀತೆಯಲ್ಲಿ ಹೇಳಿದಂತೆ ನಾವೆಲ್ಲರೂ ಶರಣು ಶರಣಾರ್ಥಿಗಳಾಗಿ ವಿನಯದಿಂದ ಜೀವನ ನಡೆಸಬೇಕೆಂಬ ಆಶಯವನ್ನು ಹೊಂದಿದೆ ಎಂದು ಹೇಳಿದರು.

ADVERTISEMENT

ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕೆಂದು ನಮ್ಮ ಸನಾತನ ಧರ್ಮ ಹೇಳಿದೆ. ಯಾವುದೇ ಸಮಾಜ ಸುಸ್ಥಿತಿಯಲ್ಲಿರಬೇಕಾದರೆ ಅಲ್ಲಿ ಸೇವಾ ಮನೋಭಾವ ಮುಖ್ಯವಾಗುತ್ತದೆ ಎಂದರು.

ದೇವರ, ದೇಶದ ಸೇವೆಗಾಗಿ ಹಾಗೂ ಇನ್ನೊಬ್ಬರ ಸೇವೆಗಾಗಿ ಬದುಕನ್ನು ಮುಡಿಪಾಗಿಟ್ಟು , ವಿನಯಶೀಲರಾಗಿ ಜೀವನ ನಡೆಸಿದರೆ ಸಮಾಜದ ಉನ್ನತಿ ಸಾಧ್ಯ ಎಂದೂ ಪ್ರತಿಪಾದಿಸಿದರು.

ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳಿಗೆ ಯಾರಿಗೂ ಬಗ್ಗಬೇಡಿ ಎಂಬುದನ್ನು ಕಲಿಸಲಾಗುತ್ತಿದೆ. ಅದರ ಪರಿಣಾಮವಾಗಿ ಅಲ್ಲಿ ಕೌಟುಂಬಿಕ ಮನಃಶಾಂತಿ ಇಲ್ಲವಾಗಿದೆ. ನಮ್ಮ ದೇಶದಲ್ಲಿ ಮಕ್ಕಳಿಗೆ ತಂದೆ–ತಾಯಿ, ಗುರು, ಹಿರಿಯರಿಗೆ ಗೌರವ ನೀಡಲು ಕಲಿಸಲಾಗುತ್ತದೆ. ಇದು ನಮ್ಮ ಉದಾತ್ತ ಸಂಸ್ಕೃತಿ. ಪ್ರಾಚೀನರು ದಾಸ, ಶರಣ ಸಾಹಿತ್ಯಗಳ ಮೂಲಕ ನಮ್ಮ ಬದುಕಿಗೆ ಉತ್ತಮ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.

ನಮ್ಮ ದೇಶದ ಅವಿಭಕ್ತ ಕುಟುಂಬಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿವೆ. ಆದರೆ ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಹೇಳಿದರು.

ಬೆಂಗಳೂರಿನ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಮಾತನಾಡಿ, ದಾಸ, ಶರಣ ಮತ್ತು ಸಂತ ಸಾಹಿತ್ಯಗಳು ಜನಸಾಮಾನ್ಯರಿಗೆ ಧಾರ್ಮಿಕ ಸಂಪತ್ತನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು.

ದಾಸರು ಜನರನ್ನು ಜಾಗೃತಗೊಳಿಸುವ ಜೊತೆಗೆ, ಜನರ ಮೇಲೆ ಆಗುತ್ತಿದ್ದ ಮೋಸವನ್ನೂ ಎತ್ತಿ ತೋರಿಸುತ್ತಿದ್ದರು ಎಂದು ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ, ಡಾ. ಗುರುರಾಜ ಪೊಶೆಟ್ಟಿಹಳ್ಳಿ, ಡಾ. ವೇಣುಗೋಪಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.