ADVERTISEMENT

ಉಡುಪಿ | ಜಿಲ್ಲೆಯಾದ್ಯಂತ ಮುಂದುವರಿದ ಧಾರಾಕಾರ ಮಳೆ

ವಿವಿಧೆಡೆ ಧರೆಗುರಳಿದ ಮರ, ವಿದ್ಯುತ್‌ ಕಂಬಗಳು: ಮನೆಗಳಿಗೂ ಹಾನಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:40 IST
Last Updated 25 ಜುಲೈ 2024, 15:40 IST
ಉಡುಪಿಯ ಅಂಬಲಪಾಡಿ ದೇವಸ್ಥಾನ ರಸ್ತೆಯಲ್ಲಿ ಮಳೆಯಲ್ಲಿಯೇ ಸಂಚರಿಸಿದ ದ್ವಿಚಕ್ರ ವಾಹನ ಸವಾರ
ಉಡುಪಿಯ ಅಂಬಲಪಾಡಿ ದೇವಸ್ಥಾನ ರಸ್ತೆಯಲ್ಲಿ ಮಳೆಯಲ್ಲಿಯೇ ಸಂಚರಿಸಿದ ದ್ವಿಚಕ್ರ ವಾಹನ ಸವಾರ   

ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಮಳೆ ಬಿರುಸುಗೊಂಡಿದ್ದು, ವಿವಿಧೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಭಾರಿ ಮಳೆಯ ಕಾರಣ ಕುಂದಾಪುರ, ಬೈಂದೂರು, ಹೆಬ್ರಿ ಹಾಗೂ ಕಾರ್ಕಳ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಗುರುವಾರ ರಜೆ ನೀಡಲಾಗಿತ್ತು.

ಗುರುವಾರ ಬೆಳಿಗ್ಗೆ ಸುರಿದ ಬಿರುಸಿನ ಮಳೆಗೆ ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವೆಡೆ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ಪರದಾಡಿದರು.

ADVERTISEMENT

ಬೆಳಿಗ್ಗೆ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಕೆಲಸಕ್ಕೆ ಹೋಗುವವರಿಗೂ ತೊಂದರೆಯಾಯಿತು.

ಭಾರಿ ಮಳೆಗೆ ನಗರದ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದಲ್ಲಿ ಜನವಾಸವಿಲ್ಲದ ಮನೆಯ ಗೋಡೆಯ ಒಂದು ಬದಿ ರಸ್ತೆಗೆ ಕುಸಿದಿದೆ. ಇಡೀ ಕಟ್ಟಡವೇ ಕುಸಿದು ಬೀಳುವ ಅಪಾಯ ಎದುರಾಗಿದೆ.

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಾರ್ಕಳದಲ್ಲಿ 6 ಸೆಂ.ಮೀ., ಕುಂದಾಪುರದಲ್ಲಿ 10 ಸೆಂ.ಮೀ., ಉಡುಪಿಯಲ್ಲಿ 5 ಸೆಂ.ಮೀ.,ಬೈಂದೂರಿನಲ್ಲಿ 9 ಸೆಂ.ಮೀ., ಬ್ರಹ್ಮಾವರದಲ್ಲಿ 6 ಸೆಂ.ಮೀ., ಕಾಪುವಿನಲ್ಲಿ 4 ಸೆಂ.ಮೀ., ಹೆಬ್ರಿಯಲ್ಲಿ 7 ಸೆಂ.ಮೀ.ಮಳೆಯಾಗಿದೆ.

ಮನೆಗಳಿಗೆ ಹಾನಿ: ಉಡುಪಿಯ ಬೈರಂಪಳ್ಳಿಯ ಕೇಶವ ಆಚಾರ್ಯ, ಬೊಮ್ಮರಬೆಟ್ಟುವಿನ ಪ್ರೇಮಾ, ಶಿವಳ್ಳಿಯ ಆಶಾ ಎಂಬುವವರ ಮನೆಗಳ ಮೇಲೆ ಮರ ಬಿದ್ದು, ಭಾಗಶ ಹಾನಿಗೀಡಾಗಿವೆ.

ಬೈಂದೂರಿನ ನಾಡ, ಗೋಳಿ ಹೊಳೆ, ಕಾಲ್ತೋಡು ಮೊದಲಾದೆಡೆಗಳಲ್ಲೂ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಗಾಳಿ ಮಳೆಗೆ ಅಪಾರ ಹಾನಿ (ಬೈಂದೂರು ವರದಿ): ಗುರುವಾರ ಬೆಳಗ್ಗಿನ ಭಾರಿ ಗಾಳಿ ಹಾಗೂ ಮಳೆಗೆ ತಗ್ಗರ್ಸೆ ಪೆಟ್ರೋಲ್ ಬಂಕ್ ಸಮೀಪ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದು ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಯಡ್ತರೆ ಗರ್ಜಿನಹಿತ್ಲು ಸಮೀಪ ಬುಡ್ಕುಮನೆ ಮಹಾಲಕ್ಷ್ಮಿ ಎಂಬುವವರ ಮನೆಯ ಮೇಲೆ ಮರವೊಂದು ಬಿದ್ದು ಹಾನಿಯಾಗಿದೆ ಹಾಗೂ ದಾರ ನಾಯ್ಕರ ಎಂಬುವವರ ಮನೆಯ ಹೆಂಚುಗಳು ಗಾಳಿಯಿಂದಾಗಿ ಹಾರಿ ಹೋಗಿದೆ.

ಕಂಬದಕೋಣೆ ಗ್ರಾಮದ ಹಳೆಗೇರಿ ಕುಕ್ಕೇಶ್ವರ ದೇವಸ್ಥಾನದ ಮೇಲೆ ಬೃಹತ್ ಗಾತ್ರದ ಅರಳಿ ಮರ ಬಿದ್ದಿದೆ. ಪರಿಣಾಮ ದೇವಸ್ಥಾನದ ಪೌಳಿ ಮತ್ತು ಹಾಗೂ ಎದುರುಗಡೆಯ ಶೀಟ್ ಮೇಲ್ಚಾವಣಿ, ನಾಗ ಬನಕ್ಕೆ ಹಾನಿಯಾಗಿದ್ದು ಅಂದಾಜು ₹ 3 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.

ಕಿರಿಮಂಜೇಶ್ವರ ಗ್ರಾಮದ ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮೇಲ್ಚಾವಣಿಯ ಹೆಂಚುಗಳು ಹಾರಿಹೋಗಿದ್ದು, ಶಾಲೆಗೆ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಮೇಲ್ಚಾವಣಿ ದುರಸ್ತಿಗಾಗಿ ಶಿಕ್ಷಣಾಧಿಕಾರಿಗಳ ಅನುಮತಿಯ ಮೇರೆಗೆ ಇದೇ 26 ಮತ್ತು 27ರಂದು ಎಲ್.ಕೆ.ಜಿ.ಯಿಂದ 9ನೇ ತರಗತಿಯವರೆಗಿನ ಎಲ್ಲ ಮಕ್ಕಳಿಗೆ ರಜೆ ನೀಡಲಾಗಿದೆ.

ಕುದ್ರುಕೊಡು ಕಂತಿಹೋಡದ ಲಕ್ಷ್ಮಣ್ ಎಂ. ದೇವಾಡಿಗ ಮಾಲಿಕತ್ವದ ಶ್ರೀ ಲಕ್ಷ್ಮಿ ಇಂಟರ್‌ಲಾಕ್ಸ್‌ನ ತಗಡಿನ ಮೇಲ್ಚಾವಣಿ ಗಾಳಿಯ ಹೊಡತಕ್ಕೆ ನುಚ್ಚು ನೂರಾಗಿದ್ದು ಶಾರ್ಟ್ ಸರ್ಕಿಟ್‌ನಿಂದಾಗಿ ವಿದ್ಯುತ್ ಉಪಕರಣ,ಯಂತ್ರೋಪಕರಣಗಳು ಹಾಳಾಗಿದೆ.

ಕಾರ್ಕಳ: ಭಾರಿ ಗಾಳಿ ಮಳೆಗೆ ತಾಲ್ಲೂಕಿನ ಇನ್ನಾ ಗ್ರಾಮದ ಶಿವಾನಂದ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ.

ನೀರೆ ಗ್ರಾಮದ ರಘುಪತಿ ಶೆಟ್ಟಿಗಾರ್ ಅವರ ಮನೆಯ ಹೆಂಚುಗಳು ಹಾರಿಹೋಗಿವೆ. ಕಣಜಾರು ಗ್ರಾಮದ ಬೇಬಿ ಮೂಲ್ಯ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಕೆರ್ವಾಶೆ ಗ್ರಾಮ‌ದ ಬಸದಿ ಬಳಿ ನಿವಾಸಿ ಅಜಿತ್ ಇಂದ್ರ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದೆ.

ಕುಂದಾಪುರ: ಭಾರಿ ಗಾತ್ರದ ಮರಗಳು ಧರಶಾಯಿ

ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ಪರಿಸರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಹಲವೆಡೆ ಹಾನಿ ಉಂಟಾಗಿದೆ.

ಭಾರಿ ಗಾಳಿಗೆ ಬೃಹತ್‌ ಗಾತ್ರದ ಮರಗಳು ಧರಾಶಾಯಿಯಾಗಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ತಂತಿಗಳು ತುಂಡಾಗಿವೆ. ಮನೆಯ ಚಾವಣಿಯ ಪಕಾಸು, ರೀಪು ಮುರಿದು ಬಿದ್ದು, ಹೆಂಚುಗಳು, ತಗಡುಗಳು ಹಾರಿ ಬಿದ್ದಿವೆ. 

ಹೆಮ್ಮಾಡಿ‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಕೊಡ್ಲು ಸೀತಾ ದೇವಾಡಿಗ ಅವರ ಮನೆ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯೊಳಗೆ ಮಲಗಿದ್ದ ಸೀತಾ ಅವರ ಪತಿ ಶಂಕರ ದೇವಾಡಿಗ ಅವರು ಗಾಯಗೊಂಡಿದ್ದಾರೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಟಿ.ವಿ ಇನ್ನಿತರ ಎಲೆಕ್ಟ್ರಾನಿಕ್ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ.

ಸಂಚಾರಕ್ಕೆ ಅಡಚಣೆ: ಹೆಮ್ಮಾಡಿಯಿಂದ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ಸೆ ತಿರುವಿನಲ್ಲಿ ಬೃಹತ್ ಗಾತ್ರದ 2 ಮರಗಳು ರಸ್ತೆಗೆ ಬಿದ್ದು, ಬುಧವಾರ ರಾತ್ರಿ ಸುಮಾರು 2 ಗಂಟೆ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಸ್ಥಳೀಯ ಯುವಕರು, ಯಂತ್ರಗಳ ಮೂಲಕ ಮರಗಳನ್ನು ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮ ಪಂಚಾಯಿತಿ ಸದಸ್ಯ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಗ್ರಾಮ ಕರಣಿಕ‌ರ ಕಚೇರಿ ಸಿಬ್ಬಂದಿ ದಿನೇಶ್ ಗಾಣಿಗ, ಅರಣ್ಯ ಇಲಾಖೆ ಸಿಬ್ಬಂದಿ ತೆರವು ಕಾರ್ಯಾಚರಣೆಗೆ ಸಹಕರಿಸಿದರು.

ಹೆಬ್ರಿ: ಭಾರಿ ಗಾಳಿಮಳೆ, ವಿದ್ಯುತ್‌ ವ್ಯತ್ಯಯ

ಹೆಬ್ರಿ: ತಾಲ್ಲೂಕಿನಾದ್ಯಂತ ಗುರುವಾರ ಭಾರಿ ಗಾಳಿ ಮಳೆಯಾಗಿದ್ದು, ವಿದ್ಯುತ್‌ ಲೈನ್‌ ಮೇಲೆ ಮರ ಬಿದ್ದು ಹಲವೆಡೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಮುನಿಯಾಲು ರೈತ ಸಂಘದ ಕಚೇರಿ ಬಳಿ ಮರ ಬಿದ್ದು 7 ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಅಮೃತಭಾರತಿ ವಿದ್ಯಾಲಯ ಬಳಿ ವಿದ್ಯುತ್‌ ಮೇನ್‌ ಲೈನ್‌ ಮೇಲೆ ಮರ ಬಿದ್ದು ಹಾನಿಯಾಗಿದೆ. ಶಿವಪುರ ಗ್ರಾಮದ ಮುಕ್ಕಾಣಿಯಲ್ಲಿ ಹಲವು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಚಾರ ಗ್ರಾಮದ ಕ್ಯಾಕಂಜೆ ಕೊಡ್ಲು ನಿವಾಸಿ ಶೀನ ನಾಯ್ಕ್ ಅವರ ಮನೆ ಮೇಲೆ ಮರ ಬಿದ್ದು ನಷ್ಟವಾಗಿದ.

ಉಡುಪಿಯ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದಲ್ಲಿ ಜನವಾಸವಿಲ್ಲದ ಮನೆಯ ಗೋಡೆಯ ಭಾಗವೊಂದು ಮಳೆಗೆ ಕುಸಿದಿದೆ
ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮೇಲ್ಚಾವಣಿಯ ಹಂಚುಗಳು ಹಾರಿ ಹೋಗಿವೆ
ಹಳಗೇರಿ ಕುಕ್ಕೇಶ್ವರ ದೇವಸ್ಥಾನದ ಮೇಲೆ ಬೃಹತ್ ಗಾತ್ರದ ಅರಳಿ ಮರ ಬಿದ್ದು ಹಾನಿ ಸಂಭವಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.