ADVERTISEMENT

ಉಡುಪಿ | ಜಿಲ್ಲೆಯಾದ್ಯಂತ ಬಿರುಸಿನ ಮಳೆ: ಮತ್ತೆ ನೆರೆ ಹಾವಳಿ ಭೀತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 6:16 IST
Last Updated 6 ಜುಲೈ 2024, 6:16 IST
ಉಡುಪಿ ನಗರದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಲ್ಲೇ ದ್ವಿಚಕ್ರ ಸವಾರರೊಬ್ಬರು ಸಂಚರಿಸಿದರು
ಉಡುಪಿ ನಗರದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಲ್ಲೇ ದ್ವಿಚಕ್ರ ಸವಾರರೊಬ್ಬರು ಸಂಚರಿಸಿದರು   

ಉಡುಪಿ: ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡ ಪರಿಣಾಮವಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ಬೈಂದೂರು, ಕುಂದಾಪುರ ವ್ಯಾಪ್ತಿಯಲ್ಲಿ ಗುರುವಾರ ಹಲವೆಡೆ ಮನೆ, ಕೃಷಿ ಪ್ರದೇಶಗಳಿಗೆ ನೆರೆನೀರು ನುಗ್ಗಿತ್ತು. ಶುಕ್ರವಾರವೂ ಮಳೆ ಕಡಿಮೆಯಾಗದ ಕಾರಣ ಪ್ರವಾಹದ ನೀರು ಇಳಿಕೆಯಾಗಿಲ್ಲ.

ಶಾಸಕರ ಭೇಟಿ (ಬೈಂದೂರು ವರದಿ): ಬೈಂದೂರು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದ ಪರಿಣಾಮವಾಗಿ ಕೆಲವೆಡೆ ಅಪಾರ ಹಾನಿ ಸಂಭವಿಸಿದೆ. ಬೈಂದೂರಿನ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೃಷಿಗೂ ಹಾನಿ ಸಂಭವಿಸಿದೆ.  ಶಾಸಕ ಗುರುರಾಜ್ ಗಂಟಿಹೊಳೆ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.

ADVERTISEMENT

ಬೈಂದೂರು ತಾಲೂಕಿನಲ್ಲಿ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಸೌಪರ್ಣಿಕಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯ ಅಕ್ಕ ಪಕ್ಕ ಪ್ರದೇಶಗಳಾದ ನಾವುಂದ, ಸಾಲ್ಬುಡ, ಬಡಾಕೆರೆ, ನಾಡ, ಕಡ್ಕೆ, ಮರವಂತೆ, ಪಡುಕೋಣೆ, ಚಿಕ್ಕಳ್ಳಿ, ಸಂಸಾಡಿ, ಹೆಮ್ಮುಂಜಿ, ಕೋಣ್ಕಿ ಪ್ರದೇಶಗಳಿಗೆ ಭೇಟಿ ನೀಡಿ ನೆರೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಶಾಸಕರು ಸ್ಥಳೀಯರು ಹಾಗೂ ಪಂಚಾಯಿತಿ ಪ್ರತಿನಿಧಿಯೊಂದಿಗೆ ಚರ್ಚಿಸಿದರು.

ಜನರ ಸ್ಥಳಾಂತರ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಚಿಂತನೆ ನಡೆಸಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಕ್ಕೆ ಅಗತ್ಯ ಸೂಚನೆ ನೀಡಿದರು.

ಎಡೆಬಿಡದೆ ಸುರಿಯುತ್ತಿರುವ ಮಳೆಯು ಇನ್ನಷ್ಟು ಅಪಾಯ ತಂದೊಡ್ಡುವ ಭೀತಿ ಇದ್ದು, ಕ್ಷೇತ್ರದ ಜನರು ಸಂಭಾವ್ಯ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಜನರಲ್ಲಿ ಅವರು ಮನವಿ ಮಾಡಿದ್ದಾರೆ.

ಸ್ವಯಂಸೇವಕರಿಗೆ ಊಟದ ವ್ಯವಸ್ಥೆ: ನಿರಂತರ ಮಳೆಯಿಂದಾಗಿ ನಾವುಂದ ಬಡಕೇರಿಯ ಸಾಲುಬುಡ ಸಂಪೂರ್ಣ ಜಲಾವೃತಗೊಂಡಿದ್ದು, ಸುಮಾರು 80 ಮನೆಗಳ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಸ್ವಯಂ ಸೇವಕರು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು 50ಕ್ಕೂ ಅಧಿಕ ಸ್ವಯಂಸೇವಕರು ನಿರಂತರ ಸೇವಾ ಪರಿಹಾರ ಕಾರ್ಯದಲ್ಲಿ ತೊಡಗಿದ್ದು ಅವರಿಗೆ ಬೈಂದೂರಿನ ಸಮೃದ್ಧ ಜ‌ನಸೇವಾ ಟ್ರಸ್ಟ್ ವತಿಂದ 80ಕ್ಕೂ ಹೆಚ್ಚು ಊಟದ ಪ್ಯಾಕೇಟ್ ಗಳನ್ನು ವಿರಿಸಲಾಯಿತು.

ನೆರೆ ಪೀಡಿತ ಪ್ರದೇಶಕ್ಕೆ ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಉದ್ಯಮಿ ಸುರೇಶ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಖಜಾಂಚಿ ಶ್ರೀಗಣೇಶ್ ಗಾಣಿಗ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಸೋಮಯ್ಯ, ಮಂಡಲ ಕಾರ್ಯದರ್ಶಿ ಪ್ರಸಾದ್ ಪಿ. ಬೈಂದೂರು ಸೇಹಿತ ಅನೇಕರು ಭೇಟಿ ನೀಡಿ, ಪರಿಹಾರ ಕಾರ್ಯಕ್ಕೆ ಸಹಕರಿಸಿದರು.

ನಾವುಂದ ಗ್ರಾಮದ ಸಾಲ್ಬುಡದಲ್ಲಿ ಜಲಾವೃತವಾಗಿರುವ ಕೃಷಿ ಗದ್ದೆಗಳು
ಜಲಾವೃತಗೊಳ್ಳುವ ಪ್ರದೇಶಗಳ‌ ಜನರಿಗೆ ಮುನ್ಸೂಚನೆ ನೀಡಲಾಗಿದೆ. ರಕ್ಷಣಾ ತಂಡಗಳನ್ನು‌ ಜಾಗೃತ ಸ್ಥಿತಿಯಲ್ಲಿ‌ ಇರಿಸಿಕೊಳ್ಳಲಾಗಿದ್ದು ಅಗತ್ಯಬಿದ್ದಲ್ಲಿ ಗಂಜಿ‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು
ರಶ್ಮಿ ಎಸ್.ಆರ್ ಉಪವಿಭಾಗಾಧಿಕಾರಿ
ಇಂದು ಜಿಲ್ಲೆಯಾದ್ಯಂತ ಶಾಲೆ ಪಿಯು ಕಾಲೇಜುಗಳಿಗೆ ರಜೆ
ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ ಪ್ರಾಥಮಿಕ ಶಾಲೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಇದೇ 6ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿಯವರು  ಆದೇಶಿಸಿದ್ದಾರೆ.
ಮತ್ತೆ ಬಿರುಸು ಪಡೆದ ವರ್ಷಧಾರೆ
ಕುಂದಾಪುರ: ಕಳೆದ ನಾಲ್ಕೈದು ದಿನಗಳಿಂದ‌ ಸುರಿಯುತ್ತಿರುವ ವರ್ಷಧಾರೆ ಶುಕ್ರವಾರ ಬೆಳಿಗ್ಗೆ ಕೊಂಚ‌ ಬಿಡುವು ಪಡೆದುಕೊಂಡು ಸಂಜೆಯ ಬಳಿಕ ಮತ್ತೆ ತನ್ನ ರೌದ್ರಾವತಾರವನ್ನು ತಾಳಿದೆ. ಘಟ್ಟ ಪ್ರದೇಶದಲ್ಲಿ ಬೀಳುತ್ತಿರುವ ಮಳೆ ಹಾಗೂ ಇಲ್ಲಿ ಸುರಿಯುತ್ತಿರುವ ನೀರಿನ‌‌ ಧಾರೆಯಿಂದಾಗಿ ಕುಂದಾಪುರ   ತಾಲ್ಲೂಕಿನಲ್ಲಿ ಹರಿಯುತ್ತಿರುವ ನದಿಗಳಲ್ಲಿ ನೀರಿನ‌ ಮಟ್ಟ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ಮಳೆ ಗಾಳಿಯಿಂದಾಗಿ ಅಮಾಸೆಬೈಲು ಶಂಕರನಾರಾಯಣ ಕೋಡಿ ಮುಂತಾದ‌ ಪ್ರದೇಶಗಳಲ್ಲಿ ಮನೆಗಳಿಗೆ ಹಾಗೂ ಜಾನುವಾರು‌ ಕೊಟ್ಟಿಗೆಗಳಿಗೆ ಹಾನಿಯುಂಟಾಗಿತ್ತು. ನೆಟ್‌ವರ್ಕ್‌ ಸಮಸ್ಯೆ: ಕುಂದಾಪುರ ಬೈಂದೂರು ತಾಲ್ಲೂಕುಗಳ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ದೂರವಾಣಿ ಬಳಕೆದಾರಿಗೆ ತೊಂದರೆಯಾಗಿದೆ. ವಿದ್ಯುತ್ ಲೈನ್‌ಗಳ ದುರಸ್ತಿ‌ ಕಾರ್ಯದಲ್ಲಿ ಮೆಸ್ಕಾಂ ಸಿಬ್ಬಂದಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ‌‌ ಮಾಡಿದ್ದರಿಂದ ಬಸ್ಸುಗಳಲ್ಲಿ ವಿದ್ಯಾರ್ಥಿಗಳ‌ ಸಂಖ್ಯೆ ಇಳಿಮುಖವಾಗಿತ್ತು. ಕೆಲಹೊತ್ತು ಬಿಸಿಲು: ಶುಕ್ರವಾರ ಬೆಳಿಗ್ಗೆ  ಬಾನಿನಲ್ಲಿ‌ ಮೋಡ‌ ಮಾಯವಾಗಿ ಒಂದಷ್ಟು ಹೊತ್ತು ಸೂರ್ಯನ ಬಿಸಿಲು ಕಾಣಿಸಿದ್ದರಿಂದ ವರುಣನ‌ ಆರ್ಭಟ ಕಡಿಮೆಯಾಯಿತು ಎನ್ನುವ ಸಂತೋಷದಲ್ಲಿದ್ದ  ಜನತೆಗೆ ಮಧ್ಯಾಹ್ನದ ವೇಳೆಯಲ್ಲಿ ಮತ್ತೆ ಪ್ರಾರಂಭವಾದ ಮಳೆ ನಿರಾಸೆಯನ್ನುಂಟು ಮಾಡಿದೆ. ರಾತ್ರಿ ವೇಳೆ‌ ಮಳೆ‌ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಮಳೆಯೊಂದಿಗೆ ಗಾಳಿಯೂ ಸೇರಿಕೊಂಡಲ್ಲಿ ನದಿತೀರ‌ ಪ್ರದೇಶಗಳು ಹಾಗೂ ತಗ್ಗು ಪ್ರದೇಶಗಳು ನೆರೆಯ ನೀರಿನಲ್ಲಿ ಜಲಾವೃತವಾಗುವ ಆತಂಕಗಳು ಇವೆ. ಕುಂದಾಪುರದ ಉಪವಿಭಾಗಾಧಿಕಾರಿ‌‌ ರಶ್ಮಿ ಎಸ್.ಆರ್ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ತಹಸೀಲ್ದಾರ್‌ಗಳಾದ‌ ಎಚ್.ಎಸ್ ಶೋಭಾಲಕ್ಷ್ಮಿ ಹಾಗೂ ಪ್ರದೀಪ್‌ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಗಳ ಮೇಲುಸ್ತುವಾರಿ‌‌ ನ‌ಡೆಸಲಾಗುತ್ತಿದೆ.
ಕೃಷಿ ಪ್ರದೇಶ ಜಲಾವೃತ
ಗುಲ್ವಾಡಿ ಗ್ರಾ.ಪಂ ವ್ಯಾಪ್ತಿಯ ಸೌಕೂರು ಪ್ರತೀ ವರ್ಷವೂ ಮುಳುಗಡೆಯಾಗುತ್ತಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಗುರುವಾರ ಸಂಪೂರ್ಣ ಜಲಾವೃತಗೊಂಡು ಜಲದಿಗ್ಭಂಧನದಲ್ಲಿದ್ದ ಜನತೆ ಶುಕ್ರವಾರ ನೆರೆ ನೀರು ಇಳಿದಿದ್ದರಿಂದ ಕೊಂಚ ಮಟ್ಟಿಗೆ ಸುಧಾರಿಸಿಕೊಂಡಿದ್ದಾರೆ. ಈ ಭಾಗದಲ್ಲಿ ರಸ್ತೆ ಸಂಚಾರ ಆರಂಭಗೊಂಡಿದೆಯಾದರೂ ಕೃಷಿಗದ್ದೆಯಲ್ಲಿ ತುಂಬಿಕೊಂಡಿರುವ ನೀರು ಇನ್ನೂ ಇಳಿದಿಲ್ಲ. ಕೆಲ ದಿನಗಳ ಹಿಂದಷ್ಟೇ ನಾಟಿ ಮಾಡಿರುವ ಭತ್ತದ ಸಸಿಗಳು ಕೊಳೆತು ಹೋಗುವ ಆತಂಕದಲ್ಲಿ ಇಲ್ಲಿನ ರೈತರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.