ಹೆಬ್ರಿ: ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಮೇ 20ರ ನಂತರ ಬಸ್ ಹಾಗೂ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ನಿಗಧಿತ ಸಮಯಕ್ಕೆ ಘಾಟಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮೇ 15ರವರೆಗೂ ಸಂಚಾರ ನಿಷೇಧ ಅವಧಿಯನ್ನು ವಿಸ್ತರಿಸಿದ್ದರು. ಇದೀಗ ಮತ್ತೊಮ್ಮೆ ಅವಧಿ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ವಿಸ್ತರಣೆಗೆ ಕಾರಣ ಏನು ?
ಆಗುಂಬೆ ಘಾಟಿಯ ಸನ್‌ಸೆಟ್ (ಸೂರ್ಯಾಸ್ತಮಾನ) ಪಾಯಿಂಟ್‌ನಲ್ಲಿ ಈಗಷ್ಟೆ 25 ಮೀಟರ್ ಕಾಂಕ್ರೀಟ್ ಹಾಕಲಾಗಿದೆ. ಕ್ಯೂರಿಂಗ್‌ಗೆ (ಕಾಂಕ್ರಿಟ್ ರಸ್ತೆಗೆ ನೀರು ಹಾಕುವ ವಿಧಾನ) ಕನಿಷ್ಠ 21 ದಿನಗಳಾದರೂ ಬೇಕು. ಹಾಗಾಗಿ, ಮೇ 15ಕ್ಕೆ ಘಾಟಿಯನ್ನು ಸಂಚಾರ ಮುಕ್ತಗೊಳಿಸಿದರೆ ಸಮಸ್ಯೆಯಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಸನ್‌ಸೆಟ್ ಪಾಯಿಂಟ್ ಪ್ರವಾಸಿಗರ ಅಚ್ಚುಮೆಚ್ಚಿನ ಜಾಗ. ಕ್ಯೂರಿಂಗ್ ಆಗದೆ ಭಾರಿ ವಾಹನಗಳಿಗೆ ಈ ಭಾಗದಲ್ಲಿ ಸಂಚರಿಸಲು ಅನುಮತಿ ನೀಡಿದರೆ ರಸ್ತೆಗೆ ತೊಂದರೆಯಾಗುವ ಸಾಧ್ಯತೆಗಳು ಇವೆ. ಹಾಗಾಗಿ ಮೇ 20ರವರೆಗೂ ನಿಷೇಧ ಅವಧಿ ವಿಸ್ತರಿಸದರೆ ಅನುಕೂಲ. ಈಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ಅಂತಿಮ ನಿರ್ಧಾರವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಬೈಕ್ ಸಂಚಾರಕ್ಕಿಲ್ಲ ಅಡ್ಡಿ:
ಕಾಮಗಾರಿ ಬಹುತೇಕ ಮುಕ್ತಾಯವಾಗಿರುವುದರಿಂದ ಮೇ 7ರಿಂದ ಬೈಕ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಬಳಿಕ ಕಾರು ಸೇರಿದಂತೆಲಘು ವಾಹನಗಳ ಸಂಚಾರಕ್ಕೂ ಅನುಮತಿ ನೀಡಲಾಗುವುದು. ಮಾನವೀಯ ನೆಲೆಯಲ್ಲಿ ಆಂಬುಲೆನ್ಸ್ ಹಾಗೂ ತುರ್ತು ಸೇವೆಯ ವಾಹನಗಳ ಸಂಚಾರಕ್ಕೆ ಅಡ್ಡಿಮಾಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಆಗುಂಬೆ ಘಾಟಿ ರಸ್ತೆಯ ನಿರ್ವಹಣೆ ಹಿಂದೆ ಲೋಕೋಪಯೋಗಿ ಇಲಾಖೆಗೆ ಸೇರಿತ್ತು. ಮಲ್ಪೆ–ಹೆಬ್ರಿ–ತೀರ್ಥಹಳ್ಳಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 169 ‘ಎ’ ಆಗಿ ಮೇಲ್ದರ್ಜೆಗೇರಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಒಳಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.