ಹೆಬ್ರಿ: ಭಾರಿ ಮಳೆಯಿಂದಾಗಿ ಬಹುತೇಕ ಅಡಿಕೆ ತೋಟಗಳಲ್ಲಿ ಅಡಿಕೆಗಳು ಉದುರಿವೆ. ಉದುರಿದ ಅಡಿಕೆಗಳನ್ನು ರೈತರು ತೋಟದಲ್ಲಿ ಬಿಟ್ಟಿರುವುದರಿಂದ ವ್ಯಾಪಕವಾಗಿ ಕೊಳೆ ರೋಗ ಇಡೀ ತೋಟಕ್ಕೆ ವ್ಯಾಪಿಸಿ ಸಮಸ್ಯೆ ಮತ್ತಷ್ಟು ಜಾಸ್ತಿಯಾಗಿದೆ.
ತಾಲ್ಲೂಕಿನಾದ್ಯಂತ ಮಳೆಯ ತೀವ್ರತೆ ಹೆಚ್ಚಾಗಿದೆ. ಬಹುತೇಕ ರೈತರ ತೋಟದಲ್ಲಿ ಅಡಿಕೆ ಉದುರಿ ಕೊಳೆಯುತ್ತಿದೆ. ಕೆಲವರು ತೋಟದಿಂದ ಬೇರ್ಪಡಿಸಿದರೆ, ಕೆಲವರು ಬೇರ್ಪಡಿಸದೆ ಬಿಟ್ಟಿದ್ದಾರೆ. ಇದರಿಂದಾಗಿ ಸಮಸ್ಯೆ ಉಂಟಾಗುತ್ತಿದೆ. ಕೆಲವು ಕಡೆ ಗೊನೆಯಲ್ಲಿ ಏನೂ ಉಳಿದಿಲ್ಲ. ಕೆಲವರಿಗೆ ಇನ್ನೂ ದ್ರಾವಣ ಸಿಂಪಡಿಸಲು ಸಾಧ್ಯವಾಗಿಲ್ಲ. ವ್ಯಾಪಕವಾಗಿ ಉದುರಿರುವ ಅಡಿಕೆ ನೋಡಿ ರೈತರು ಆತಂಕದಲ್ಲಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಅಡಿಕೆಗೆ 2 ಬಾರಿ ಔಷಧಿ ಸಿಂಪಡಿಸುವುದು ವಾಡಿಕೆ. ಈ ಬಾರಿ 3 ಸಲ ಸಿಂಪಡಿಸಿದರೂ ಅಡಿಕೆ ಉದುರುತ್ತಿದೆ. ಹಾಗಾಗಿ ಈ ಸಲ ಅಡಿಕೆಯಲ್ಲಿ ಇಳುವರಿ ಇಲ್ಲದೆ ಸಂಕಷ್ಟ ಎದುರಿಸಬೇಕಾಗಿದೆ. ಅಡಿಕೆ ಮಾತ್ರವಲ್ಲದೆ ತೆಂಗು ಬೆಳೆಗೂ ಸಮಸ್ಯೆಯಾಗುತ್ತಿದೆ. ಎಲ್ಲೆಡೆ ಸಣ್ಣ, ಎಳತು ಬೊಂಡಗಳು ಕೂಡ ಉದುರುತ್ತಿವೆ ಎಂದು ಪ್ರಗತಿಪರ ಕೃಷಿಕ ಮುನಿಯಾಲು ಗೋಪಾಲ ಕುಲಾಲ್ ಸಂಕಷ್ಟದ ಬೇಸರ ವ್ಯಕ್ತಪಡಿಸಿದರು.
ಆಗಸ್ಟ್ ತಿಂಗಳಿನಲ್ಲಿ ಕೊಳೆರೋಗ ನಿಯಂತ್ರಣಕ್ಕೆ ತರಬೇಕಾದರೆ ಅತಿ ಅಗತ್ಯವಾಗಿ ಮಣ್ಣು ಪರೀಕ್ಷೆ ಮಾಡಬೇಕು. ಕೆಲವು ಸಮಯದಿಂದ ಬಿಸಿಲು ಮಳೆ ಕೂಡಿದ ವಾತಾವರಣವಿದೆ. ಕೊಳೆರೋಗ ಬರಲು ಇದು ಪ್ರಮುಖ ಕಾರಣ. ಕಳೆದ ವರ್ಷ ಕೊಳೆ ಬಂದಂತಹ ಉಳುಕೆಗಳನ್ನು ತೆಗೆದು ಸುಟ್ಟು ಹಾಕಬೇಕು. ತೋಟದಲ್ಲಿ ಇಟ್ಟರೆ ಅದು ಕೂಡ ವ್ಯಾಪಕವಾಗಿ ರೋಗ ಹರಡಲು ಕಾರಣವಾಗುತ್ತದೆ. ಬಿದ್ದ ಕಾಯಿಗಳನ್ನು ಸಂಗ್ರಹಿಸಿ ತೋಟದಿಂದ ಹೊರಕ್ಕೆ ಸಾಗಿಸಬೇಕು. ಬೋರ್ಡೊ ದ್ರಾವಣ ಸಿಂಪರಣೆ ಮಾಡಬೇಕು.
ಆಗಸ್ಟ್ ತಿಂಗಳಲ್ಲಿ ಮಣ್ಣು ಪರೀಕ್ಷೆ ಆಧಾರದಲ್ಲಿ ಸುಣ್ಣ ನೀಡಿ 15– 20 ತಿಂಗಳ ನಂತರ ಶಿಫಾರಸು ಮಾಡಿದ ರಸಗೊಬ್ಬರ ನೀಡಬೇಕು. ಬೋರ್ಡೊ ದ್ರಾವಣಕ್ಕೆ ಪರ್ಯಾಯವಾಗಿ ಮಂಡಿಪ್ರೊಪಿಮಿಡ್ ಶಿಲೀಂಧ್ರ ನಾಶಕ ಬಳಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಹೆಚ್ಚು ಕೊಳೆ ಭಾದೆ ಇರುವ ತೋಟಗಳಲ್ಲಿ ಬಳಸಬಹುದು. ಸಮಗ್ರವಾಗಿ ಕ್ರಮ ಕೈಗೊಂಡಿದ್ದರೆ ಇಂತಹ ಸಮಸ್ಯೆಗಳು ಬರುತ್ತಿರಲಿಲ್ಲ ಎಂದು ಕಾರ್ಕಳ ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಶ್ರೀನಿವಾಸ್ ಬಿ.ವಿ ಮಾಹಿತಿ ನೀಡಿದರು.
ಸಾಲ ಕಟ್ಟುವ ಚಿಂತಿಯಲ್ಲಿ ರೈತರು
ಒಂದು ಕಡೆ ಕೃಷಿಗೆ ಕಾಡು ಪ್ರಾಣಿ ಮಂಗಗಳ ಕಾಟ. ಈ ಸಲ ಅಡಿಕೆ ಬೆಳೆಯಲ್ಲಿ ರೈತರಿಗೆ ಏನೂ ಆದಾಯ ಸಿಗಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅಡಿಕೆ ಉದುರಿದೆ. ಭಾರಿ ಮಳೆಯಿಂದಾಗಿ ಭತ್ತ ಕೃಷಿಗೂ ಹಾನಿಯಾಗಿ ನಷ್ಟವಾಗಿದೆ. ರೈತರಿಗೆ ಬ್ಯಾಂಕ್ ಸಾಲಗಳು ಹೊರೆಯಾಗುತ್ತಿದೆ. ಈ ಸಲ ಅಕಾಲಿಕ ಮಳೆಯಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮುಂದಿನ ವರ್ಷ ಬಡ್ಡಿ ರಹಿತವಾಗಿ ಸಾಲ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಗತಿಪರ ಕೃಷಿಕ ಗೋಪಾಲ ಕುಲಾಲ್ ಮುನಿಯಾಲು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.