ADVERTISEMENT

ಹೆಬ್ರಿ | ರಸ್ತೆಗೆ ಬಾಗಿದ ಮರಗಳು: ಅಪಾಯ ಭೀತಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 7:10 IST
Last Updated 8 ಜುಲೈ 2024, 7:10 IST
ರಸ್ತೆಗೆ ವಾಲಿ ಕೊಂಡಿರುವ ಅಪಾಯಕಾರಿ ಮರಗಳು. 
ರಸ್ತೆಗೆ ವಾಲಿ ಕೊಂಡಿರುವ ಅಪಾಯಕಾರಿ ಮರಗಳು.    

ಹೆಬ್ರಿ: ತಾಲ್ಲೂಕಿನ ಬೇಳಂಜೆ ದೂಪದಕಟ್ಟೆ ಹೊನ್ಕಲ್ಲು ತನಕ ಮರಗಳು ರಸ್ತೆಗೆ ಬಾಗಿಕೊಂಡು ಮಳೆಗಾಲದಲ್ಲಿ ಸಂಚಾರ ಮಾಡಲು ಜೀವ ಭಯ ತಂದೊಡುತ್ತಿವೆ. ವಿಪರೀತ ಗಾಳಿ ಮಳೆಗೆ ಆಗಾಗ ಅನೇಕ ಮರಗಳು ರಸ್ತೆಗೆ ಬೀಳುತ್ತಿವೆ.

ಹೆಬ್ರಿ ಮತ್ತು ಕುಂದಾಪುರ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಸುಮಾರು 20ರಿಂದ 25 ಮರಗಳು ಅಪಾಯಕಾರಿಯಾಗಿ ವಾಲಿಕೊಂಡಿವೆ. ಸಂಚರಿಸುವವರು ಪ್ರಾಣಭೀತಿಯಿಂದ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ. ಅನಾಹುತ ಆಗುವ ಮೊದಲು ಕ್ರಮ ಕೈಗೊಳ್ಳಿ ಎಂದು ಜನರು ಒತ್ತಾಯಿಸಿದ್ದಾರೆ.

ಜೀವಕ್ಕೆ ಸಂಚಕಾರ: ಕೆಲವು ದಿನಗಳ ಹಿಂದೆ ಕುಂದಾಪುರ ಕಡೆಯಿಂದ ಬೈಕಿನಲ್ಲಿ ಬೇಳಂಜೆಗೆ ಬರುತ್ತಿದ್ದಾಗ ವಿಪರೀತ ಗಾಳಿ ಮಳೆಗೆ ಮರ ಬಿದ್ದು ಯುವಕ ಒಬ್ಬರು ಮೃತಪಟ್ಟಿದ್ದಾರೆ. ಸಳ್ಳೆಕಟ್ಟೆ ಶಾಸ್ತ್ರಿ ನಗರದಿಂದ ದೂಪದಕಟ್ಟೆ ತನಕ ಪ್ರಾಥಮಿಕ, ಪ್ರೌಢಶಾಲೆಗೆ ಅನೇಕ ವಿದ್ಯಾರ್ಥಿಗಳು ಈ ರಸ್ತೆ ಮೂಲಕ ನಡೆದು ಹೋಗುತ್ತಾರೆ.

ADVERTISEMENT

ಅಪಾಯಕಾರಿ ಮರಗಳ ತೆರವು ಬಗ್ಗೆ ಗ್ರಾಮ ಸಭೆ, ತಾಲ್ಲೂಕು ಪಂಚಾಯಿತಿ ಸಭೆ, ಜಿಲ್ಲಾಮಟ್ಟದ ಸಭೆಯಲ್ಲಿ ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗಿಲ್ಲ. ಅರಣ್ಯ ಇಲಾಖೆಯವರು ಒಂದೆರಡು ಬಾರಿ ನೋಡಿ ಹೋಗಿ ಯಾವುದೇ ಕ್ರಮ ಜರುಗಿಸಿಲ್ಲ. ಶೀಘ್ರ ಕ್ರಮ ಜರುಗಿಸದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಜನ ಎಚ್ಚರಿಸಿದ್ದಾರೆ. ಅರಣ್ಯ ಇಲಾಖೆಯವರು ಒಂದು ಮರ ಕಡಿದರೆ ನಾವು 10 ಗಿಡ ನೆಟ್ಟು ಪೋಷಣೆ ಮಾಡುತ್ತೇವೆ. ಸವಾಲಾಗಿ ಸ್ವೀಕರಿಸಿದ್ದು, ನಿಯಮ ಅನುಸರಿಸುತ್ತೇವೆ. ದಿನಂಪ್ರತಿ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಅಪಾಯ ತಪ್ಪಿಸಲು ಈ ಯೋಜನೆ ರೂಪಿಸಿದ್ದೇವೆ ಎನ್ನುತ್ತಾರೆ ಜನರು.

ಕುಚ್ಚೂರು–2 ಹಿರಿಯ ಪ್ರಾಥಮಿಕ ಶಾಲೆ ಬಳಿ ಬೃಹತ್ ಗಾತ್ರದ ದೂಪದ ಮರ ಒಂದರ ಬುಡ ಒಣಗಿದೆ. ವಾರಾಹಿ ಕಾಮಗಾರಿಯಿಂದ ಬೇರುಗಳು ಸಡಿಲಗೊಂಡು ಅಪಾಯದ ಸ್ಥಿತಿಯಲ್ಲಿದೆ. ಒಂದು ಕಡೆ ವಿದ್ಯಾರ್ಥಿಗಳು ಬಸ್ಸಿಗಾಗಿ ನಿಲ್ಲುವುದು, ಇನ್ನೊಂದು ಕಡೆ ಕೂಲಿ ಮಾಡಿ ಬದುಕುವ ಬಡವರ ಮನೆಗಳು. ಸಂಬಂಧಪಟ್ಟವರು ಮರ ತೆರವುಗೊಳಿಸಲು ಕೇಳಿಕೊಂಡಿದ್ದಾರೆ. ರಾತ್ರಿ ಹೊತ್ತಿನಲ್ಲಿ, ಜೋರು ಗಾಳಿ ಮಳೆ ಬಂದಾಗ ಮನೆಯೊಳಗೆ ಇರಲು ಹೆದರಿಕೆ ಆಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಬಹುತೇಕ ಅಕೇಶಿಯಾ ಮರಗಳಾಗಿವೆ.

ಏನಂತಾರೆ?...

ಬೇಳಂಜೆಯಿಂದ ಹೊನ್ಕಲ್ ತನಕ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಗೆ ವಾಲಿಕೊಂಡಿವೆ. ವಿದ್ಯಾರ್ಥಿಗಳು, ಮನೆ, ಅಂಗಡಿಗಳಿಗೆ ಅಪಾಯ  ಸಂಭವಿಸುವ ಸಾಧ್ಯತೆ ಇದೆ. ಸೂಕ್ತ ಕ್ರಮ ಜರುಗಿಸಬೇಕು. –ಸತೀಶ ಪೂಜಾರಿ ಬೈಲುಮನೆ, ಗ್ರಾ.ಪಂ. ಸದಸ್ಯ

ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ತೆರವಿನ ಬಗ್ಗೆ ಸ್ಥಳ ಪರಿಶೀಲಿಸಿ, ಕ್ರಮ ಜರುಗಿಸಲಾಗುವುದು. ಶಾಲೆ ಬಳಿ ಇರುವ ಅಪಾಯಕಾರಿ ಮರಗಳ ಬಗ್ಗೆಯೂ ವಿಶೇಷ ಮುತುವರ್ಜಿ ವಹಿಸಲಾಗುತ್ತದೆ –ಸಿದ್ದೇಶ್ವರ್, ಹೆಬ್ರಿ ವಲಯ ಅರಣ್ಯಾಧಿಕಾರಿ

ರಸ್ತೆಗೆ ವಾಲಿ ಕೊಂಡಿರುವ ಅಪಾಯಕಾರಿ ಮರಗಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.