ADVERTISEMENT

ಹೆಬ್ರಿ | ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶದ ಹೆಬ್ಬಾಗಿಲು

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 6:26 IST
Last Updated 13 ಜುಲೈ 2024, 6:26 IST
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ   

ಹೆಬ್ರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪದವಿ ಪಡೆಯಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಅವಕಾಶಗಳಿವೆ.

ಹೆಬ್ರಿ ಪಟ್ಟಣಕ್ಕೆ ಹತ್ತಿರದಲ್ಲಿ ಹೆಬ್ರಿ ತಾಲ್ಲೂಕು ಆಡಳಿತ ಕೇಂದ್ರ ಮತ್ತು ರಾಷ್ಟ್ರೀಯ ಹೆದ್ದಾರಿಯ ಅತಿ ಸಮೀಪದಲ್ಲೇ ಕಾಲೇಜು ಇದೆ. ಸುಮಾರು 18 ಎಕರೆ ಜಮೀನನ್ನು ಸಂಸ್ಥೆಯು ಹೊಂದಿದೆ. ಮೂಲ ಸೌಕರ್ಯ ಜೊತೆಗೆ ಸಕಲ ಸುಸಜ್ಜಿತ ವ್ಯವಸ್ಥೆ ಹೊಂದಿರುವುದು ಸಂಸ್ಥೆಯ ಹೆಗ್ಗಳಿಕೆ. ವಿದ್ಯಾರ್ಥಿಗಳಿಗೆ ಇಲ್ಲಿ ಬಿ.ಎ., ಬಿ.ಕಾಂ. ಮತ್ತು ಎಂ.ಕಾಂ. ಕೋರ್ಸ್‌ಗಳಿಗೆ ಸೇರಬಹುದಾಗಿದೆ.

ಮಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ವಿ.ವಿ. ಅಧೀನದಲ್ಲಿ ಆರಂಭಗೊಂಡ ಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂಬ ಕೀರ್ತಿಯೂ ಈ ಸಂಸ್ಥೆಗಿದೆ.

ADVERTISEMENT

‌‘ಯು’ ಆಕಾರದಲ್ಲಿ ಸುಸಜ್ಜಿತವಾದ ವಿಶಾಲ ವಿಸ್ತೀರ್ಣದ ತರಗತಿ ಕೋಣೆಗಳಿರುವ ಕಾಲೇಜು ಕಟ್ಟಡ, ದಿ.ಹೆಬ್ರಿ ರಾಧಾಕೃಷ್ಣ ನಾಯಕ್‌ ಸಂಸ್ಮರಣಾ ಬೃಹತ್‌ ಸಭಾಂಗಣ, ವಿಶಾಲವಾದ ಕ್ರೀಡಾಂಗಣ, ಯೂನಿಯನ್‌ ಬ್ಯಾಂಕ್‌ ಸೋಷಿಯಲ್‌ ಪೌಂಡೇಷನ್‌ ಪ್ರಾಯೋಜಿಸಿದ ಹವಾನಿಯಂತ್ರಿತ ಸಭಾಭವನ ಸಹಿತ ಸಕಲ ವ್ಯವಸ್ಥೆಯನ್ನು ಕಾಲೇಜು ಹೊಂದಿದೆ. ಕಲಿಕೆಗೆ ಮುಕ್ತವಾದ ಪ್ರಶಾಂತ ವಾತಾವರಣವಿದೆ.

ಪ್ರಸ್ತುತ 43 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತು ಇತರ ಸೇವಾ ಸಂಸ್ಥೆಗಳು, ಕಾರ್ಪೋರೆಟ್‌ ಕಂಪನಿಗಳು ನೀಡುವ ವಿದ್ಯಾರ್ಥಿವೇತನ ಪಡೆಯಲು ಅವಕಾಶವಿದೆ.

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ‌‘ರೂಸ’ ಅನುದಾನಿತ ಕಾಲೇಜು ಆಗಿದ್ದು, ಸುಮಾರು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದೆ. ಕಾಲೇಜು ಕರ್ನಾಟಕ ಜರ್ಮನ್‌ ಟೆಕ್ನಿಕಲ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ಕಾರ್ಕಳ, ಮೈಟ್‌ ಮೂಡಬಿದರೆ, ಪಿಪಿಸಿ ಉಡುಪಿ ಸಹಿತ ಹಲವು ಖಾಸಗಿ ಶಿಕ್ಷಣ ಸಮೂಹ ಸಂಸ್ಥೆಗಳಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು ಬೌದ್ಧಿಕ ಸಾಮರ್ಥ್ಯ ವಿನಿಯಮ, ಶೈಕ್ಷಣಿಕ ಕಾರ್ಯಕ್ರಮ, ಸೇವಾ ಕಾರ್ಯಗಳನ್ನು ನಡೆಸುತ್ತಿದೆ.

ಪದವಿ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ ಕ್ರಾಸ್‌, ರೋವರ್ಸ್‌ ರೇಂಜರ್ಸ್‌ ಘಟಕಗಳಿವೆ. ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕೂಡ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕೌಶಲಾಧಾರಿತ ಮಾರ್ಗದರ್ಶನ ನೀಡಲಾಗುತ್ತದೆ.

ಅತ್ಯಂತ ಅನುಭವಿ ನುರಿತ ಬೋಧಕ ಮತ್ತು ಬೋಧಕೇತರ ವೃಂದವನ್ನು ಸಂಸ್ಥೆಯು ಹೊಂದಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯುತ್ತಮ ಘಟಕ ರಾಜ್ಯ ಪ್ರಶಸ್ತಿಯನ್ನು ಸಂಸ್ಥೆಯು ಪಡೆದಿದೆ.

ವಿದ್ಯಾರ್ಥಿಗಳು ಕ್ರೀಡೆಯಲ್ಲೂ ನಿರಂತರವಾಗಿ ಸಾಧನೆ ಮಾಡುತ್ತಿದ್ದಾರೆ. ಥ್ರೋಬಾಲ್‌ ಟೂರ್ನಿಯಲ್ಲಿ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಚಾಂಪಿಯನ್‌ ಪ್ರಶಸ್ತಿ ಕೂಡ ಕಾಲೇಜಿಗೆ ದೊರೆತಿದೆ. 25 ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಸುಸಜ್ಜಿತ ಗ್ರಂಥಾಲಯ ಇರುವುದು ಸಂಸ್ಥೆಯ ವಿಶೇಷತೆಯಾಗಿದೆ.

ವಿದ್ಯಾರ್ಥಿಗಳಿಗಾಗಿ ಎಫ್‌ಡಿಎ, ಎಸ್‌ಡಿಎ, ಬ್ಯಾಂಕಿಂಗ್‌, ಪೊಲೀಸ್‌, ಸಬ್‌ ಇನ್‌ಸ್ಪೆಕ್ಟರ್‌, ಕೆಎಎಸ್, ಐಎಎಸ್‌, ಐಎಫ್‌ಎಸ್, ಐಪಿಎಸ್‌ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.

ಬಿ.ಕಾಂ.ನಲ್ಲಿ ಶೇ 90ರಷ್ಟು, ಬಿ.ಎ.ಯಲ್ಲಿ ಶೇ 98ರಷ್ಟು ಹಾಗೂ ಎಂ.ಕಾಂ.ನಲ್ಲಿ ಸತತವಾಗಿ ಶೇ100ರಷ್ಟು ಪಲಿತಾಂಶ ಬರುತ್ತಿದೆ. ಗ್ರಂಥಾಲಯದ ಜೊತೆಗೆ ಮಾಹಿತಿ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಎಲ್ಲಾ ಅವಶ್ಯಕ ಮಾಹಿತಿಗಳು ದೊರೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಉದ್ಯೋಗ ಮೇಳಗಳ ಮೂಲಕ ಅರ್ಹರಿಗೆ ಉದ್ಯೋಗ ದೊರಕಿಸಿಕೊಡುವ ಕಾರ್ಯವನ್ನು ಕೂಡ ಸಂಸ್ಥೆಯು ಮಾಡುತ್ತಾ ಬಂದಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಜಿಮ್‌ಗಳಿವೆ.

ವಿದ್ಯಾರ್ಥಿ ನಿಲಯ ವ್ಯವಸ್ಥೆ: ಅತ್ಯಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಂಸ್ಥೆಗೆ ಬರುತ್ತಾರೆ. ಕಾಲೇಜು ಸಮೀಪದಲ್ಲೆ ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯ ಇರುವುದು ನಮಗೆ ವರದಾನವಾಗಿದೆ. ನಮ್ಮ ಸಂಸ್ಥೆಯಲ್ಲಿ ಬಾಲಕಿಯರೇ ಹೆಚ್ಚು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ವಿಷ್ಣುಮೂರ್ತಿ ಪ್ರಭು ಮಾಹಿತಿ ನೀಡಿದರು.

ವಿಶ್ರಾಂತಿ ಕೊಠಡಿ: ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಅನುಕೂಲ ಮತ್ತು ಆರೋಗ್ಯಕ್ಕಾಗಿ ಸರ್ಕಾರದ ಯೋಜನೆಯಲ್ಲಿ ‘ಸಖಿ’ ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಲಾಗಿದೆ. ಸುಸಜ್ಜಿತ ವ್ಯವಸ್ಥೆಯೊಂದಿಗೆ, ಶೌಚಾಲಯ, ಸ್ಯಾನಿಟರಿ ಪ್ಯಾಡ್‌ ಬರ್ನಿಂಗ್‌ ಯಂತ್ರ ಅಳವಡಿಸಿರುವುದು ವಿಶೇಷವಾಗಿದೆ.

ನಮ್ಮ ಕಾಲೇಜಿನಲ್ಲಿ ಸಕಲ ವ್ಯವಸ್ಥೆಯೂ ಇದೆ. ಬಿ.ಎ. ಪದವಿ ಪಡೆಯಲು ಹೆಚ್ಚು ಮಂದಿ ಸೇರುತ್ತಿದ್ದಾರೆ. ಕಲಿಕೆಗೆ ಮುಕ್ತ ವಾತಾವರಣವಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಡಾ.ವಿಷ್ಣುಮೂರ್ತಿ ಪ್ರಭು, ಪ್ರಾಂಶುಪಾಲ
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.