ADVERTISEMENT

ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು | ಕಡಿಮೆ ಶುಲ್ಕ: ಗುಣಮಟ್ಟದ ಶಿಕ್ಷಣ

ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 7:08 IST
Last Updated 8 ಜುಲೈ 2024, 7:08 IST
ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಹಿರಿಯಡಕ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆಶಾಕಿರಣವಾಗಿರುವ ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಲಿಕೆಗೆ ಅವಕಾಶವಿದ್ದು, ಈ ಸಾಲಿನ ಶೈಕ್ಷಣಿಕ ವರ್ಷದಿಂದ ಬಿ.ಸಿ.ಎ ಕೋರ್ಸ್ ಪ್ರಾರಂಭಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಕಾಲೇಜಿಗೆ ನ್ಯಾಕ್ ಸಮಿತಿಯಿಂದ ‘ಬಿ+’ ದರ್ಜೆಯ ಸ್ಥಾನ ದೊರಕಿದೆ. 2006ರಲ್ಲಿ ಪ್ರಾರಂಭಗೊಂಡ ಕಾಲೇಜಿನಲ್ಲಿ ಪದವಿಯಲ್ಲಿ ಬಿ.ಎ, ಬಿ.ಕಾಂ, ಬಿ.ಸಿ.ಎ ಕೋರ್ಸ್‌ ಲಭ್ಯ ಇವೆ. ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ ವಿಷಯದಲ್ಲಿ ಎಂ.ಎ, ಎಂ.ಕಾಂ ಕಲಿಕೆಗೆ ಅವಕಾಶ ಇದೆ.

ಹಿರಿಯಡಕ–ಹೆಬ್ರಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ವಿಶಾಲವಾದ ಸ್ಥಳದಲ್ಲಿ ಕಾಲೇಜಿನ ಸುಸಜ್ಜಿತ ಕಟ್ಟಡವಿದ್ದು, ವಿದ್ಯಾರ್ಥಿಗಳಿಗೆ ಅನುಗುಣವಾಗಿ ಅಗತ್ಯವಿದ್ದಷ್ಟು ತರಗತಿ ಕೊಠಡಿಗಳು, ಶೌಚಾಲಯಗಳು ಇವೆ. ಹಿರಿಯಡಕ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾಲೇಜಿನಲ್ಲಿ ಪ್ರಸ್ತುತ 7 ಜನ ಕಾಯಂ ಉಪನ್ಯಾಸಕರಿದ್ದು, 11 ಜನ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ವೈ–ಫೈ ಸೌಲಭ್ಯ, ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಕಂಪ್ಯೂಟರ್ ಸೌಲಭ್ಯದೊಂದಿಗೆ ಉತ್ತಮ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಂದ ಎನ್.ಎಸ್.ಎಸ್, ರೆಡ್ ಕ್ರಾಸ್ ಘಟಕದ ಮೂಲಕ ಒಂದಷ್ಟು ಸಮಾಜಮುಖಿ ಕೆಲಸಗಳು ನಡೆಯುತ್ತಿವೆ‌. ಇದರ ಜೊತೆಗೆ ಐಕ್ಯುಎಸಿ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ಮುಖಾಂತರ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ನುರಿತರಿಂದ ನಿರಂತರವಾಗಿ ಶಿಕ್ಷಣಕ್ಕೆ ಪೂರಕವಾಗಿರುವ ತರಬೇತಿ ಕಾರ್ಯಕ್ರಮಗಳ ಆಯೋಜನೆ, ಕ್ಯಾಂಪಸ್ ಸಂದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ತರಬೇತಿಗಳು, ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನೀಡಲಾಗುತ್ತಿದೆ.

ಕಳೆದ ಸಾಲಿನಲ್ಲಿ ಕನ್ನಡ ಭಾಷೆಯ ಎಂ.ಎ. ವಿಭಾಗದಲ್ಲಿ ಶ್ರಾವ್ಯಾ ಎಂಬ ವಿದ್ಯಾರ್ಥಿನಿ ಅತ್ಯಧಿಕ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ‌. ಕ್ರೀಡಾ ವಿಭಾಗದಲ್ಲಿಯೂ ಅನೇಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಸ್ಥಳೀಯ ಶಾಸಕರು, ಸಂಸದರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ.

ಪ್ರಥಮ ದರ್ಜೆ ಕಾಲೇಜಿಗೆ ಅನತಿ ದೂರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದು ಇಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಎಲ್.ಕೆ.ಜಿ ಯಿಂದ ಪಿ.ಯು.ಸಿ ವರೆಗೆ ಕಲಿಕೆಗೆ ಅವಕಾಶ ಇದೆ.

ಒಟ್ಟಾರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಎಲ್.ಕೆ.ಜಿ ಯಿಂದ ಸ್ನಾತಕೋತ್ತರ ಪದವಿಯವರೆಗೆ ಕಲಿಕೆಗೆ ಹಿರಿಯಡಕ ಪರಿಸರದಲ್ಲಿ ಅವಕಾಶವಿದ್ದು ಸಾವಿರಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಕಾಲೇಜು ಪ್ರವೇಶಕ್ಕೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ ತಿಂಗಳಿನಲ್ಲಿ ಪ್ರವೇಶಾತಿ ಆರಂಭವಾಗಲಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಾಯಂ ಉಪನ್ಯಾಸರ ನೇಮಕಾತಿ ಸಂಬಂಧ ಸರ್ಕಾರದಿಂದ ಈಗಾಗಲೇ ಪ್ರಕ್ರಿಯೆ ನಡೆಯುತ್ತಿದ್ದು ಇನ್ನೂ ಹೆಚ್ಚಿನ ಕಾಯಂ ಉಪನ್ಯಾಸಕರು ಸೇರ್ಪಡೆಯಾಗುವ ನಿರೀಕ್ಷೆಯಿದೆ.
ಸೀಮಾ ಜಿ.ಕೆ., ಪ್ರಾಂಶುಪಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.