ADVERTISEMENT

ಉಡುಪಿ | 6ರಿಂದ ಕಾಮಗಾರಿ ಮರು ಆರಂಭ: ಶಾಸಕ ಯಶ್‌ಪಾಲ್‌

ಹೆದ್ದಾರಿ ಕಾಮಗಾರಿ: ಅಧಿಕಾರಿಗಳೊಂದಿಗೆ ಸಂಸದ, ಶಾಸಕರ ಸಭೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 4:17 IST
Last Updated 5 ನವೆಂಬರ್ 2024, 4:17 IST
ರಾಷ್ಟೀಯ ಹೆದ್ದಾರಿ ಕಾಮಗಾರಿಗಳ ಕುರಿತು  ಸೋಮವಾರ ನಡೆದ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ ಪಾಲ್ಗೊಂಡಿದ್ದರು
ರಾಷ್ಟೀಯ ಹೆದ್ದಾರಿ ಕಾಮಗಾರಿಗಳ ಕುರಿತು  ಸೋಮವಾರ ನಡೆದ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ ಪಾಲ್ಗೊಂಡಿದ್ದರು   

ಉಡುಪಿ: ಮಲ್ಪೆ–ಅದಿ ಉಡುಪಿ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿ ಇದೇ 6ರಿಂದ ಆರಂಭಗೊಳ್ಳಲಿದೆ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು.

ರಾಷ್ಟ್ರೀಯ ಹೆದ್ದಾರಿ 169 ಎ ಸೇರಿದಂತೆ ಹಿರಿಯಡ್ಕ, ಪರ್ಕಳ ಹಾಗೂ ಪೆರ್ಡೂರು ಭಾಗದ ರಾಷ್ಟೀಯ ಹೆದ್ದಾರಿ ಕಾಮಗಾರಿಗಳ ಕುರಿತು ಅಧಿಕಾರಿಗಳ ಜೊತೆ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮಲ್ಪೆ – ಆದಿ ಉಡುಪಿ ರಸ್ತೆಯ ಕಾಮಗಾರಿಯು ಭೂ ಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದ ಕುಂಠಿತವಾಗಿದ್ದು ಈಗಾಗಲೇ ಭೂ ಮಾಲೀಕರಿಗೆ ಪರಿಹಾರ ಪಾವತಿಯ ಮೊತ್ತದ ಬಗ್ಗೆ ನೋಟಿಸ್ ನೀಡಲಾಗಿದೆ ಎಂದರು.

ADVERTISEMENT

ಭೂ ಸ್ವಾಧೀನ ಪ್ರಕ್ರಿಯೆಯ 214 ಕಡತಗಳ ಪೈಕಿ 19 ಸರ್ಕಾರಿ ಜಮೀನು ಹೊರತುಪಡಿಸಿ 195 ಖಾಸಗಿ ಜಮೀನು ಮಾಲೀಕರ ಪೈಕಿ 51 ಮಂದಿ ನೋಟಿಸ್ ಸ್ವೀಕರಿಸಿದ್ದು, 48 ಮಂದಿ ಪರಿಹಾರ ಮೊತ್ತ ಪಡೆಯಲು ತಮ್ಮ ದಾಖಲಾತಿಗಳನ್ನು ಒದಗಿಸಿದ್ದಾರೆ. ಬಾಕಿ ಇರುವ 144 ಜಮೀನು ಮಾಲಕರನ್ನು ಸಂಪರ್ಕಿಸಿ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕಾಮಗಾರಿ ಮರು ಆರಂಭ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪೆರ್ಡೂರಿನ ದೇವಸ್ಥಾನ ಸಮೀಪದ 600 ಮೀ. ವ್ಯಾಪ್ತಿಯಲ್ಲಿ ಕಾಮಗಾರಿಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಅದನ್ನು ಬಿಟ್ಟು ಉಳಿದ ಕಡೆ ಕಾಮಗಾರಿ ಕೈಗೊಳ್ಳಬೇಕು. ದೇವಸ್ಥಾನ, ಕಲ್ಯಾಣಿಯ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದೆಂಬುದು ಭಕ್ತರ ಬೇಡಿಕೆಯಾಗಿದೆ. ಅದನ್ನು ಮನಗಂಡು ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ ಚಂದ್ರ, ರಾಷ್ಟೀಯ ಹೆದ್ದಾರಿ 169 ಎ ಅಧಿಕಾರಿಗಳಾದ ಮಂಜುನಾಥ ಗೌಡ, ನವೀನ್ ರಾಜ್, ಮಂಜುನಾಥ ನಾಯಕ್, ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪರ್ಕಳದಲ್ಲಿ ಹೆದ್ದಾರಿ ಕಾಮಗಾರಿಗೆ ನೀಡಿದ್ದ ತಡೆಯಾಜ್ಞೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವು ಸರ್ಕಾರದ ಪರವಾಗಿ ಬಂದಿದ್ದು ಭೂ ಮಾಲೀಕರಿಗೆ ಕೂಡಲೇ ಪರಿಹಾರದ ಹಣ ನೀಡಬೇಕು ಮತ್ತು ಕಾಮಗಾರಿ ಪ್ರಾರಂಭಿಸಬೇಕು
ಕೋಟ ಶ್ರೀನಿವಾಸ ಪೂಜಾರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.