ADVERTISEMENT

ಉಡುಪಿ: ಹಿಜಾಬ್ ಧರಿಸಿ ಬಂದವರಿಗೆ ಕಾಲೇಜು ಗೇಟ್ ಬಂದ್ ಮಾಡಿದ ಪ್ರಾಂಶುಪಾಲ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 12:23 IST
Last Updated 3 ಫೆಬ್ರುವರಿ 2022, 12:23 IST
ಕುಂದಾಪುರ ಸರ್ಕಾರಿ ಜ್ಯೂನಿಯರ್ ಕಾಲೇಜಿಗೆ ಗುರುವಾರ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ
ಕುಂದಾಪುರ ಸರ್ಕಾರಿ ಜ್ಯೂನಿಯರ್ ಕಾಲೇಜಿಗೆ ಗುರುವಾರ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ   

ಉಡುಪಿ: ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿಯೇ ತಡೆದು ಪ್ರವೇಶ ನಿರಾಕರಿಸಲಾಯಿತು.

ಗುರುವಾರ 26 ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ ಅವರನ್ನು ತಡೆದ ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ ಸಮವಸ್ತ್ರ ಮಾತ್ರ ಧರಿಸಿ ಒಳಬರುವಂತೆ ಸೂಚನೆ ನೀಡಿದರು ಈ ಸಂದರ್ಭ ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕಿಳಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶ ನೀಡುವಂತೆ ಪರಿ ಪರಿಯಾಗಿ ಬೇಡಿಕೊಂಡು ಕಣ್ಣೀರು ಹಾಕಿದರು.

ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಪಾಲಿಸುವಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಬುಧವಾರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಹಾಗೂ ಪೋಷಕರ ಸಭೆಯಲ್ಲೂ ಗುರುವಾರದಿಂದ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಸಮವಸ್ತ್ರ ಮಾತ್ರ ಹಾಕಿಕೊಂಡು ಬರಬೇಕು ಎಂಬ ನಿರ್ಣಯ ತೆಗೆದುಕೊಂಡಿದೆ. ನಿರ್ಣಯ ಪಾಲಿಸಿದರೆ ಮಾತ್ರ ಕಾಲೇಜಿನೊಳಗೆ ಪ್ರವೇಶ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಪ್ರಾಂಶುಪಾಲರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, 'ವಸ್ತ್ರ ಸಂಹಿತೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರ ನೀಡಿರುವ ಆದೇಶ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಮಾತ್ರ ಸೀಮಿತವಾಗಿದ್ದು, ಕುಂದಾಪುರ ಜೂನಿಯರ್ ಕಾಲೇಜಿನ ಉಲ್ಲೇಖ ಆದೇಶದಲ್ಲಿ ಇಲ್ಲ. ಹಿಜಾಬ್ ಧರಿಸಬಾರದು ಎಂಬ ಆದೇಶದ ಪ್ರತಿ ಇದ್ದರೆ ಕೊಡಿ ಎಂದು ಪಟ್ಟು ಹಿಡಿದರು.

ಪ್ರವೇಶಾತಿ ಸಂದರ್ಭ ಹಿಜಾಬ್ ಧರಿಸುವಂತಿಲ್ಲ ಎಂಬ ನಿಯಮ ಹಾಕಿದ್ದರೆ ಬೇರೆ ಕಾಲೇಜಿಗೆ ಸೇರುತ್ತಿದ್ದೆವು. ಪರೀಕ್ಷೆ ಎರಡು ತಿಂಗಳು ಇರುವಾಗ ಏಕಾಏಕಿ ಹಿಜಾಬ್ ಧರಿಸುವಂತಿಲ್ಲ ಎಂಬ ನಿಯಮ ಜಾರಿಗೊಳಿಸುವುದು ಸರಿಯಲ್ಲ. ನಮಗೆ ಶಿಕ್ಷಣವೂ ಬೇಕು, ಹಿಜಾಬ್ ಧರಿಸಲು ಅವಕಾಶವನ್ನೂ ನೀಡಬೇಕು ಎಂದು ಆಗ್ರಹಿಸಿದರು.

ಆದರೆ, ವಿದ್ಯಾರ್ಥಿನಿಯರ ಬೇಡಿಕೆಗೆ ಪ್ರಾಂಶುಪಾಲರು ಕಿವಿಗೊಡದೆ ಕಾಲೇಜು ಗೇಟ್ ಹಾಕಿದರು. ಕಾಲೇಜಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಮತ್ತೊಂದೆಡೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಕ್ಕೆ ಪ್ರತಿಯಾಗಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜೈಶ್ರೀರಾಮ್ ಘೋಷಣೆ ಕೂಗಿದರು.

ಕಾಲೇಜು ಗೇಟ್ ಎದುರು ಜಮಾಯಿಸಿದ ವಿದ್ಯಾರ್ಥಿಗಳನ್ನು ಕಾಲೇಜು ಆವರಣ ಪ್ರವೇಶಿಸಲು ಸಿಬ್ಬಂದಿ ಅನುಮತಿ ನೀಡಲಿಲ್ಲ. ಕೇಸರಿ ಶಾಲು ತೆಗೆದು ವಿದ್ಯಾರ್ಥಿಗಳು ಕಾಲೇಜು ಪ್ರವೇಶಿಸಿದರು. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಮಾನವ ಹಕ್ಕುಗಳ ಆಯೋಗಕ್ಕೆ ಶೀಘ್ರ ವರದಿ:ಹಿಜಾಬ್ ವಿವಾದ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್‌ ಜಾರಿಮಾಡಿದ್ದು, ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಾರುತಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು ವರದಿ ನೀಡುವಂತೆ ಸೂಚಿಸಲಾಗಿದೆ. ಈಗಾಗಲೇ ಸಮಿತಿ ಕಾಲೇಜಿಗೆ ಭೇಟಿನೀಡಿ ಪರಿಶೀಲಿಸಿದೆ. ಸಮಿತಿ ಸಲ್ಲಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಪ್ರತ್ಯೇಕ ನಿಯಮ ಜಾರಿ ಸಾಧ್ಯವಿಲ್ಲ: ಅಂಗಾರ
ವಸ್ತ್ರ ಸಂಹಿತೆ ವಿಚಾರವಾಗಿ ಒಂದೊಂದು ಕಾಲೇಜಿನಲ್ಲಿ ಒಂದೊಂದು ನಿಯಮ ಜಾರಿ ಮಾಡಲು ಸಾಧ್ಯವಿಲ್ಲ. ಕುಂದಾಪುರದ ಜೂನಿಯರ್ ಕಾಲೇಜಿನಲ್ಲೂ ಹಿಜಾಬ್ ಸಮಸ್ಯೆ ಸೃಷ್ಟಿಯಾಗಿರುವ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಕಾಲೇಜುಗಳಲ್ಲಿ ವಸ್ತ್ರ ಹಾಗೂ ಸಮವಸ್ತ್ರ ಸಂಹಿತೆ ಜಾರಿ ಸಂಬಂಧ ಸರ್ಕಾರ ಸಮಿತಿ ರಚಿಸುತ್ತಿದ್ದು, ಸಮಿತಿಯ ವರದಿ ಆಧರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

‘ಐದೇ ನಿಮಿಷದಲ್ಲಿ ವಿವಾದ ಬಗೆಹರಿಸುತ್ತೇನೆ’
ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೃಷ್ಟಿಯಾಗಿರುವ ಹಿಜಾಬ್ ವಿವಾದದಲ್ಲಿ ಇಲ್ಲಿಯವರೆಗೂ ಕಾಲೇಜು ಆಡಳಿತ ಮಂಡಳಿಯ ಭಾಗವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಕೆಲವು ಸಂಘಟನೆಗಳು ವಿವಾದವನ್ನು ಸವಾಲಾಗಿ ಸ್ವೀಕರಿಸಿರುವುದರಿಂದ ಹಿಂದೂ ಸಂಘಟನೆಯ ಮುಖಂಡನಾಗಿ ಮುಂದೆ ದಿಟ್ಟ ಉತ್ತರ ನೀಡಲಾಗುವುದು. ಸಂಘಟನಾತ್ಮಕವಾಗಿ ಹೋರಾಟ ಮಾಡಿದರೆ ಹಿಜಾಬ್ ವಿವಾದವನ್ನು ಕೇವಲ ಐದು ನಿಮಿಷದಲ್ಲಿ ಬಗೆಹರಿಸುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.