ADVERTISEMENT

ಹಿರಿಯಡಕ: ಬೇಲಿಯಲ್ಲಿ ಸಿಲುಕಿದ್ದ ಚಿರತೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:04 IST
Last Updated 23 ಜೂನ್ 2024, 5:04 IST
ತಂತಿ ಬೇಲಿಯಲ್ಲಿ ಸಿಲುಕಿದ್ದ ಚಿರತೆ
ತಂತಿ ಬೇಲಿಯಲ್ಲಿ ಸಿಲುಕಿದ್ದ ಚಿರತೆ   

ಹಿರಿಯಡಕ: ಕುಕ್ಕೆಹಳ್ಳಿ–ಹಿರಿಯಡಕ ರಸ್ತೆಯ ಬಕ್ಕಾರೆ ಎಂಬಲ್ಲಿ ಶನಿವಾರ ಸಂಜೆ ತಂತಿ ಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಅಳವಡಿಸಿದ್ದ ತಂತಿ ಬೇಲಿಯಲ್ಲಿ ಸಿಲುಕಿಕೊಂಡಿದ್ದ 4 ವರ್ಷ ಪ್ರಾಯದ ಚಿರತೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಕಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಅರಿವಳಿಕೆ ತಜ್ಞರು ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ, ರಕ್ಷಿಸಿದರು. ನಂತರ ಬೋನಿನಲ್ಲಿ ಬಂಧಿಸಿ ಪಶು ವೈದ್ಯಕೀಯ ತಜ್ಞರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಚಿರತೆಯನ್ನು ವಲಯ ಅರಣ್ಯ ಇಲಾಖೆಯಲ್ಲಿ ಇರಿಸಲಾಗಿದ್ದು, ಚೇತರಿಸಿಕೊಂಡ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಿವಳಿಕೆ ತಜ್ಞರಾದ ಯಶಸ್ವಿ ನಾರಾವಿ, ಅಕ್ಷಯ್ ಶೇಟ್, ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ಧೇಶ್ವರ ಕುಂಬಾರ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್, ನವೀನ್ ಡಿ.ಎನ್, ಗಸ್ತು ಅರಣ್ಯ ಪಾಲಕರಾದ ಅರುಣ್, ಶ್ರೀಕಾಂತ್, ಪ್ರವೀಣ್, ಅರಣ್ಯ ವೀಕ್ಷಕರಾದ ಸಂಕ, ಸುದರ್ಶನ್, ಹಿರಿಯಡಕ ಠಾಣಾಧಿಕಾರಿ ಮಂಜುನಾಥ್ ಪಾಲ್ಗೊಂಡಿದ್ದರು‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.