ADVERTISEMENT

ಮನೆ ಆರೈಕೆ ಸೇವೆ ಇಂದಿನ ಅಗತ್ಯ: ಹೇಮಚಂದ್ರ ಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 5:31 IST
Last Updated 22 ಜೂನ್ 2024, 5:31 IST
ಲೊಂಬಾರ್ಡ್‌ ಸ್ಮಾರಕ ಆಸ್ಪತ್ರೆಯ ಮನೆ ಆರೈಕೆ ಸೇವೆಯನ್ನು ಮತ್ತು ನೇತ್ರಶಾಸ್ತ್ರ ವಿಭಾಗವನ್ನು ಶುಕ್ರವಾರ ಉದ್ಘಾಟಿಸಲಾಯಿತು
ಲೊಂಬಾರ್ಡ್‌ ಸ್ಮಾರಕ ಆಸ್ಪತ್ರೆಯ ಮನೆ ಆರೈಕೆ ಸೇವೆಯನ್ನು ಮತ್ತು ನೇತ್ರಶಾಸ್ತ್ರ ವಿಭಾಗವನ್ನು ಶುಕ್ರವಾರ ಉದ್ಘಾಟಿಸಲಾಯಿತು   

ಉಡುಪಿ: ಅನಿವಾರ್ಯ ಕಾರಣಗಳಿಂದಾಗಿ ಆಸ್ಪತ್ರೆಗಳಿಗೆ ಬರಲಾರದೆ ನೊಂದಿರುವ ಜನರಿಗೆ ಮನೆ ಆರೈಕೆ ಸೇವೆ (ಹೋಮ್‌ ಕೇರ್‌) ಆರಂಭಿಸುವ ಮೂಲಕ ಮಿಷನ್‌ ಆಸ್ಪತ್ರೆಯು ಹೊಸ ಹೆಜ್ಜೆ ಇಟ್ಟಿದೆ ಎಂದು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಬಿಷಪ್‌ ಹೇಮಚಂದ್ರ ಕುಮಾರ್‌ ಹೇಳಿದರು.

ಲೊಂಬಾರ್ಡ್‌ ಸ್ಮಾರಕ (ಮಿಷನ್‌) ಆಸ್ಪತ್ರೆಯಲ್ಲಿ ಮನೆ ಆರೈಕೆ ಸೇವೆ ಮತ್ತು ನೇತ್ರಶಾಸ್ತ್ರ ವಿಭಾಗವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮನೆ ಆರೈಕೆ ಸೇವೆಯ ಮೂಲಕ ಮನೆ ಮನೆಗೆ ಆರೋಗ್ಯ ಸೇವೆ ತಲುಪಿ, ಆಸ್ಪತ್ರೆಯು ಜಿಲ್ಲೆಗೆ ಮಾದರಿಯಾಗಲಿ ಎಂದರು.

ಮಿಷನ್‌ ಆಸ್ಪತ್ರೆಯು ಉಡುಪಿಯಲ್ಲಿ ಆರಂಭಗೊಳ್ಳುವುದಕ್ಕೆ ನಿಯೋಗವಿದೆ. ಇಲ್ಲಿನ ಜನರಿಗೆ ಆರೋಗ್ಯ ಸೇವೆ ನೀಡಬೇಕೆನ್ನುವುದು ಆ ನಿಯೋಗವಾಗಿದೆ. ಆಸ್ಪತ್ರೆಯು ಸಮಾಜಮುಖಿ ಸೇವೆಗಳನ್ನು ದಿಟ್ಟತನದಿಂದ ಜಾರಿಗೊಳಿಸುತ್ತಿದೆ. ಒಬ್ಬ ವ್ಯಕ್ತಿಗೆ ದೃಷ್ಟಿ ನೀಡುವುದೆಂದರೆ ಆತನಿಗೆ ಜೀವ ನೀಡಿದಂತೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ವಿಭಾಗ ಆರಂಭಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ADVERTISEMENT

ನೇತ್ರತಜ್ಞ ಡಾ.ನರೇಂದ್ರ ಶೆಣೈ ಮಾತನಾಡಿ, ಮನೆ ಮನೆಗೆ ತೆರಳಿ ಅಸಹಾಯಕರಿಗೆ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಆರಂಭಿಸಿರುವುದು ಶ್ಲಾಘನೀಯ. ಈ ಯೋಜನೆಯು ಇಂದು ಸಮಾಜಕ್ಕೆ ಅಗತ್ಯವಾಗಿದೆ ಎಂದರು.

ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್‌ ಜತನ್ನ ಮಾತನಾಡಿ, ರಕ್ತ ತಪಾಸಣೆ, ನರ್ಸಿಂಗ್‌ ಕೇರ್, ಪಿಸಿಯೋಥೆರಪಿ ಮೊದಲಾದವುಗಳು ಮನೆ ಆರೈಕೆ ಯೋಜನೆಯಲ್ಲಿ ಒಳಗೊಂಡಿವೆ. ಇದರಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.

ಆಸ್ಪತ್ರೆಯ ವೈದ್ಯ ಡಾ. ಗಣೇಶ್ ಕಾಮತ್‌ ಅವರು ಮನೆ ಮನೆಗೆ ತೆರಳಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ ಎಂದು ವಿವರಿಸಿದರು.

ಸಿಎಸ್‌ಐ ವಲಯ ಅಧ್ಯಕ್ಷ ಐವನ್‌ ಡಿ. ಸೋನ್ಸ್‌ , ಡಾ.ಆರ್ಥುರ್‌ ರೊಡ್ರಿಗಸ್‌, ಸಿಎಸ್‌ಐ ಸಭಾ ಮಹಿಳಾ ಅನ್ಯೋನ್ಯ ಕೂಟದ ಅಧ್ಯಕ್ಷೆ ಭಾರತಿ ಹೇಮಚಂದ್ರ ಇದ್ದರು.

ಮನೆ ಬಾಗಿಲಿಗೆ ಆರೋಗ್ಯ ಸೇವೆ ಮಿಷನ್‌ ಆಸ್ಪತ್ರೆಯಿಂದ ವಿನೂತನ ಯೋಜನೆ ಜಾರಿ ಹಿರಿಯ ನಾಗರಿಕರಿಗೆ ಅನುಕೂಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.