ಉಡುಪಿ: ರೋಗ ವಾಸಿಯಾಗುವವರೆಗೆ ಮಾತ್ರ ವೈದ್ಯರಿಗೆ ಗೌರವ ನೀಡುತ್ತೇವೆ. ಹಾಗೆಯೇ ಮನೆ ಕಟ್ಟುವವರೆಗೆ ಮಾತ್ರ ಎಂಜಿನಿಯರ್‌ಗೆ ಗೌರವ ಕೊಡುತ್ತೇವೆ. ಆದರೆ, ಅಧ್ಯಾಪಕನಿಗೆ ನಿವೃತ್ತಿ ಬಳಿಕವು ಗೌರವ ನೀಡಲಾಗುತ್ತದೆ ಎಂದು ಸಮಾಜದಲ್ಲಿ ಶಿಕ್ಷಕರಿಗೆ ಇರುವ ಸ್ಥಾನದ ಕುರಿತು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ತಿಳಿಸಿದರು.
ಪೂರ್ಣಪ್ರಜ್ಞ ಕಾಲೇಜಿನ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ಣ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಶಿಸ್ತು ಕೊನೆಯವರೆಗೆ ಕಾಪಾಡುತ್ತದೆ. ಮಕ್ಕಳು ಬಹಿರ್ಮುಖಿಗಳಾಗುವುದಕ್ಕಿಂತ ಅಂತರ್ಮುಖಿಗಳಾಗಬೇಕು. ಇದರಿಂದ ಅಂತಃಸತ್ವದ ಪರಿಚಯವಾಗುತ್ತದೆ. ಗುರುಗಳ ಪಾಠವನ್ನು ಅರ್ಥೈಸಿಕೊಂಡು ನಮ್ಮೊಳಗೆ ಉತ್ತರ ಹುಡುಕುವ ಕಾರ್ಯ ನಡೆಸಬೇಕು ಎಂದರು.
ಸರ್ಕಾರಿ ನೌಕರಿಗೆ ಕಾಯದೇ ಸ್ವಂತ ಪರಿಶ್ರಮದಿಂದ ಎತ್ತರಕ್ಕೇರಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಾಧನೆ ಹೊಸ ವಿದ್ಯಾರ್ಥಿ ವೃಂದಕ್ಕೆ ಸ್ಪೂರ್ತಿದಾಯಕ. ಅವರ ಆದರ್ಶವನ್ನು ಬದುಕಿನಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕು ಎಂದರು. ಪಿಪಿಸಿಯ ಹಳೆ ವಿದ್ಯಾರ್ಥಿಗಳು ಸಮಾಜಕ್ಕೆ ಸಂದೇಶ ನೀಡುವ ಕಾರ್ಯ ಮಾಡುತ್ತಿದ್ದಾರೆ. ಮುಂದೆಯೂ ಸಮಾಜ ಕಟ್ಟುವ ಕಾರ್ಯದಲ್ಲಿ ನಿರತರಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಕಾಲೇಜಿನ ಹಳೆಬ ವಿದ್ಯಾರ್ಥಿಗಳಾದ ಸುಧಾಕರ ಕಾಮತ್ ಮುಂಬೈ, ಮನೋಹರ್ ನಾಯಕ್ ಮುಂಬೈ, ವಿದುಷಿ ಲಕ್ಷ್ಮೀ ಗುರುರಾಜ್, ಅನಿತಾ ತಂತ್ರಿ, ಹರ್ಷಕುಮಾರ್ ಅವರಿಗೆ ಪ್ರೈಡ್ ಆಫ್ ಪಿ.ಪಿ.ಸಿ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.
ಕಾಲೇಜಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಎ.ವರದರಾಜ ಬಲ್ಲಾಳ್, ಪ್ರೊ.ಎಂ.ಆರ್.ಹೆಗಡೆ ಹಾಗೂ ಬಿ.ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳಿಗೆ ಎರಡು ಲಕ್ಷ ಸಹಾಯಧನ ವಿತರಿಸಲಾಯಿತು. ಉಡುಪಿ ನಗರಸಭೆಯ ಸದಸ್ಯರಾಗಿ ಆಯ್ಕೆಯಾದ ಹಳೆಯ ವಿದ್ಯಾರ್ಥಿ ಕೃಷ್ಣರಾವ್ ಕೊಡಂಚ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಎಸ್ ಚಂದ್ರಶೇಖರ, ಕೋಶಾಧಿಕಾರಿ ಪ್ರದೀಪ್ ಕುಮಾರ್, ಪ್ರಾಂಶುಪಾಲ ಡಾ.ಬಿ. ಜಗದೀಶ ಶೆಟ್ಟಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಬಿ.ಎಂ.ಸೋಮಯಾಜಿ ಸ್ವಾಗತಿಸಿದರು. ಮಂಜುನಾಥ ಕರಬರು, ವಿದ್ಯಾವಂತ ಆಚಾರ್ಯ, ಹಾಗೂ ವಿಮಲಾ ಚಂದ್ರಶೇಖರ್, ಕಾರ್ಯದರ್ಶಿ ಮುರಲಿ ಕಡೇಕಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಎಸ್.ಕೆ.ಆನಂದ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.