ADVERTISEMENT

ಉಡುಪಿ| ಅದಮಾರು ಪರ್ಯಾಯದಲ್ಲಿ ಸರದಿ ಹೊರೆಕಾಣಿಕೆ

ಅಹಾರ ಪದಾರ್ಥಗಳ ಸದ್ಭಳಕೆಗೆ ಒತ್ತು, ಮಳೆ ನೀರು ಸಂಗ್ರಹಕ್ಕೂ ಆದ್ಯತೆ

ಬಾಲಚಂದ್ರ ಎಚ್.
Published 17 ಜನವರಿ 2020, 9:49 IST
Last Updated 17 ಜನವರಿ 2020, 9:49 IST
ಅದಮಾರು ಮಠದಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ
ಅದಮಾರು ಮಠದಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ   

ಉಡುಪಿ: ಅದಮಾರು ಪರ್ಯಾಯ ಮಹೋತ್ಸವ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಪರ್ಯಾಯ ಸಂದರ್ಭ ಸಲ್ಲಿಕೆಯಾಗುವ ಹೊರೆಕಾಣಿಕೆಯ ಸಂಪೂರ್ಣ ಸದ್ಬಳಕೆಗೆ ಅದಮಾರು ಶ್ರೀಗಳು ಆದ್ಯತೆ ನೀಡಿದ್ದಾರೆ. ಜತೆಗೆ, ಮೈದಾ, ಸಕ್ಕರೆ ಬಳಕೆಗೆ ಪರ್ಯಾಯವಾಗಿ ಬೆಲ್ಲ ಬಳಸಲು ನಿರ್ಧರಿಸಲಾಗಿದೆ.

15 ದಿನಗಳಿಗೊಮ್ಮೆ ಹೊರೆಕಾಣಿಕೆ:

ಪರ್ಯಾಯ ಮಹೋತ್ಸವದ ಸಂದರ್ಭ ಕೃಷ್ಣನಿಗೆ ಭಕ್ತಿಯ ರೂಪದಲ್ಲಿ ಹೊರೆಕಾಣಿಕೆ ಸಲ್ಲಿಸುವುದು ಸಂಪ್ರದಾಯ. ಭಕ್ತರು, ಸಂಘ ಸಂಸ್ಥೆಗಳಿಂದ ಪರ್ಯಾಯದ ದಿನ ಮಠಕ್ಕೆ ದಂಡಿಯಾಗಿ ಹೊರೆಕಾಣಿಕೆ ಹರಿದುಬರುತ್ತಿತ್ತು. ಹೀಗೆ ಬಂದ ಹೊರೆ ಕಾಣಿಕೆಯಲ್ಲಿ ತರಕಾರಿ ಹಾಗೂ ಆಹಾರ ಪದಾರ್ಥಗಳೇ ಹೆಚ್ಚಾಗಿರುತ್ತಿದ್ದರಿಂದ ಬಹುಪಾಲು ಹಾಳಾಗುತ್ತಿತ್ತು.

ADVERTISEMENT

ಭಕ್ತರು ಪ್ರೀತಿಯಿಂದ ದೇವರಿಗೆ ಅರ್ಪಿಸಿದ ಹೊರೆಕಾಣಿಕೆ ಸದ್ವಿನಿಯೋಗವಾಗಬೇಕು. ಭಕ್ತರಿಗೆ ಅನ್ನ ಪ್ರಸಾದದ ರೂಪದಲ್ಲಿ ಸಿಗಬೇಕು. ಮಠ ಹಾಗೂ ಭಕ್ತರ ನಡುವೆ ಬಾಂಧವ್ಯ ವೃದ್ಧಿಯಾಗಬೇಕು ಎಂದು ಅದಮಾರು ಮಠದ ಈಶಪ್ರಿಯ ತೀರ್ಥರು 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸಲ್ಲಿಸುವ ಕ್ರಮವನ್ನು ಆರಂಭಿಸಿದ್ದಾರೆ.

ಹೊರೆಕಾಣಿಕೆಯನ್ನು ಸಂಗ್ರಹಿಸಲು ಹಾಗೂ ನಿರ್ವಹಣೆಗೆ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌, ದೈವಜ್ಞ ಯುವಕ ಮಂಡಲ ಹಾಗೂ ಶ್ರೀಕೃಷ್ಣ ಸೇವಾ ಬಳಗಕ್ಕೆ ಜವಾಬ್ದಾರಿ ವಹಿಸಲಾಗಿದೆ. ಹೊರೆಕಾಣಿಕೆ ಸಂಗ್ರಹಕ್ಕೆ ದೊಡ್ಡ ಉಗ್ರಾಣ ತೆರೆಯಲಾಗಿದೆ ಎಂದು ಹೊರೆಕಾಣಿಕೆ ಸಮಿತಿಯ ಉಸ್ತುವಾರಿ ಯಶ್‌ಪಾಲ್‌ ಸುವರ್ಣ ಮಾಹಿತಿ ನೀಡಿದರು.

ಅದಮಾರು ಪರ್ಯಾಯಕ್ಕೆ ಬುಧವಾರ ಮಲ್ಪೆಯಿಂದ ಮೊದಲ ಹೊರೆ ಕಾಣಿಕೆ ಸಲ್ಲಿಕೆಯಾಗಲಿದೆ. ಬಳಿಕ ಪ್ರತಿ 15 ದಿನಗಳಿಗೊಮ್ಮೆ ಬೇರೆ ಕಡೆಗಳಿಂದ ಬರಲಿದೆ. ಈ ಪದ್ಧತಿಯಿಂದ ಆಹಾರ ಪದಾರ್ಥ ವ್ಯರ್ಥವಾಗುವುದಿಲ್ಲ. ಜತೆಗೆ 2 ವರ್ಷಗಳ ಪರ್ಯಾಯ ಅವಧಿಯಲ್ಲಿ ನಿರಂತರ ಹೊರೆಕಾಣಿಕೆ ಮಠಕ್ಕೆ ಹರಿದುಬರಲಿದೆ ಎನ್ನುತ್ತಾರೆ ಅವರು.

ಭಕ್ತರು ಹೊರೆಕಾಣಿಕೆ ಸಲ್ಲಿಕೆಯ ದಿನಾಂಕವನ್ನು ಈಗಾಗಲೇ ನೋಂದಣಿ ಮಾಡಿಸುತ್ತಿದ್ದಾರೆ. ಹೊರೆಕಾಣಿಕೆ ಸಲ್ಲಿಸುವ ಭಕ್ತರಿಗೆ ಅಂದು ಪರ್ಯಾಯ ಯತಿಗಳನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ. ಶ್ರೀಗಳ ಆಶೀರ್ವಾದ ಪಡೆದು ಮಠದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಮಠ ಹಾಗೂ ಭಕ್ತರ ಮಧ್ಯೆ ಬಾಂಧವ್ಯ ಗಟ್ಟಿಯಾಗುತ್ತದೆ ಎನ್ನುತ್ತಾರೆ ಯಶ್‌ಪಾಲ್‌ ಸುವರ್ಣ.

ಸಾವಯವ ಪದಾರ್ಥಗಳಿಗೆ ಒತ್ತು:

ಅದಮಾರು ಶ್ರೀಗಳು ಪರ್ಯಾಯದ ಅವಧಿಯಲ್ಲಿ ಸಾವಯವ ಆಹಾರ ಪದಾರ್ಥಗಳ ಬಳಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ಆರೋಗ್ಯಕ್ಕೆ ಹಾನಿಕಾರಕವಾದ ಮೈದಾ, ಸಕ್ಕರೆ ಬಳಕೆಯ ಬದಲಾಗಿ ಬೆಲ್ಲ ಉಪಯೋಗಿಸುವಂತೆ ಸೂಚನೆ ನೀಡಿದ್ದಾರೆ. ಸಾವಯವ ಕೃಷಿಗೂ ಒತ್ತು ನೀಡಿದ್ದು, ಸಾವಯವ ಕೃಷಿಕರ ಸಂಘ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ.

ಭತ್ತದ ತಳಿಗಳನ್ನು ಉಳಿಸುವ ಕಾರ್ಯವೂ ನಡೆಯುತ್ತಿದೆ. ಹೆಬ್ರಿಯ ಚಾರದಲ್ಲಿ 20 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದ್ದು, ಅಲ್ಲಿಂದ ಮಠದಲ್ಲಿ ಬಾಳೆ ಹಣ್ಣು ಹಾಗೂ ಊಟದ ಎಲೆ ಪೂರೈಕೆಯಾಗಲಿದೆ. ರೈತರ ಉತ್ಪನ್ನಗಳನ್ನೂ ನೇರವಾಗಿ ಖರೀದಿಸುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.