ಉಡುಪಿ: ರಾಜ್ಯಕ್ಕೆ ಹಿಂದಿನ ವರ್ಷಗಳ ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರದಿಂದ ಗ್ರಾಮೀಣ ವಸತಿ ಯೋಜನೆಗೆ ₹400 ಕೋಟಿ, ನಗರ ವಸತಿ ಯೋಜನೆಗೆ ₹75 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮಣಿಪಾಲದ ರಜತಾದ್ರಿಯಲ್ಲಿರುವ ಸಂಸದರ ಕಚೇರಿಯಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ನಗರಸಭೆ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ನಗರಾಡಳಿತ ಸಂಸ್ಥೆಗಳ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಕೋಟ ಅವರು, ವಸತಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಸೂಚಿಸಿದರು.
ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ, ಬೈಂದೂರು ಪಟ್ಟಣ ಪಂಚಾಯಿತಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆದ ಸಂಸದರು, ಶೇ 80ರಷ್ಟು ಮಾತ್ರ ವಸತಿ ಯೋಜನೆಯು ಅನುಷ್ಠಾನವಾಗಿದ್ದು, ಶೀಘ್ರ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕೆಂದು ತಾಕೀತು ಮಾಡಿದರು.
ಪಿ.ಎಂ ಸ್ವ–ನಿಧಿ ಅನುಷ್ಠಾನಕ್ಕೆ ಸೂಚನೆ: ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳನ್ನು ಪಿ.ಎಂ ಸ್ವ–ನಿಧಿ ಯೋಜನೆಯ ವ್ಯಾಪ್ತಿಗೆ ಗರಿಷ್ಠ ಪ್ರಮಾಣದಲ್ಲಿ ಸೇರಿಸಬೇಕು. ಈ ಬಗ್ಗೆ ಅರ್ಜಿ ಅಹ್ವಾನಿಸಿ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಲು ಶಿಫಾರಸು ಮಾಡುವಂತೆ ನಗರಾಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಕ್ಟೋಬರ್ ಮೊದಲ ವಾರದೊಳಗೆ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಬೇಕು ಎಂದೂ ತಿಳಿಸಿದರು.
ಉಡುಪಿ ನಗರಸಭೆ, ಕಾಪು, ಕಾರ್ಕಳ, ಕುಂದಾಪುರ ಪುರಸಭೆ, ಬೈಂದೂರು, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಸತಿ ಯೋಜನೆಯ ನೋಡಲ್ ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರವೀಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.