ಕುಂದಾಪುರ: ಸಂವಿಧಾನದಲ್ಲಿ ನೀಡಲಾಗಿರುವ ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಪೂರಕ
ವಾಗಿ ಸಮಾಜದ ಬಡ ವರ್ಗದವರ ಹಾಗೂ ಶೋಷಿತರ ವರ್ಗದ ಬಗ್ಗೆ ನ್ಯಾಯಪರ ಕಳಕಳಿಯನ್ನು ಹೊಂದಿದ್ದ ಹುಯ್ಯಾರು ಪಟೇಲರಲ್ಲಿ ‘ಸಾಮಾಜಿಕ ಎಂಜಿನಿಯರಿಂಗ್’ ಗುಣವಿತ್ತು ಎಂದು ಬೆಂಗಳೂರಿನ ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟಬಲ್ ಸೊಸೈಟಿಯ ಅಧ್ಯಕ್ಷ ಎಚ್.ಎಸ್.ಶೆಟ್ಟಿ ಹೇಳಿದರು.
ಹೈಕಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಹುಯ್ಯಾರು ಪಟೇಲ್ ಚಾರಿಟಬಲ್ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಸಹಭಾಗಿತ್ವದಲ್ಲಿ ನಡೆದ ಹುಯ್ಯಾರು ಪಟೇಲ್ ಚಾರಿಟಬಲ್ ಟ್ರಸ್ಟ್‌ನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಡೆ-ನುಡಿಯಲ್ಲಿ ಬದ್ಧತೆಯನ್ನು ಉಳಿಸಿಕೊಂಡಿದ್ದರು ಪಟೇಲರು. ಈ ಕಾಲಘಟ್ಟದಲ್ಲಿ ಇಂತಹ ವ್ಯಕ್ತಿತ್ವದವರು ಕಾಣಸಿಗುವುದು ಅಪರೂಪವಾಗಿದೆ. ಸಾಮಾಜಿಕ ಜೀವನಕ್ಕಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದ ಪಟೇಲರ ಪುತ್ರ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದೆ, ಶುಭ್ರತೆಯನ್ನು ಕಾಯ್ದುಕೊಂಡಿದ್ದಾರೆ. ಮನುಷ್ಯರ ಬದುಕಿಗೆ ಅಗತ್ಯವಾಗಿರುವ ಕೃಷಿ ಕ್ಷೇತ್ರವನ್ನು ಲಾಭದಾಯಕ ದೃಷ್ಟಿಯಿಂದ ನೋಡಬಾರದು. ಜಾಗತಿಕ ತಾಪಮಾನ ಏರಿಕೆಯಿಂದ ಜೀವಿಗಳ ಜೀವನ ಕ್ಷಣ ಕ್ಷಣಕ್ಕೂ ದುಸ್ತರವಾಗುತ್ತಿದೆ. ಇದರಿಂದಾಗಿ ಆಹಾರ ಉತ್ಪಾದನೆ ಕುಂಠಿತವಾಗುತ್ತದೆ. ಜನಸಂಖ್ಯೆ ಹೆಚ್ಚಾಗುತ್ತದೆ. ಪೌಷ್ಟಿಕ ಆಹಾರದ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದರು.
ಭಾರತೀಯ ಸಾವಯವ ಕೃಷಿ ಪದ್ಧತಿ ಹಾಗೂ ಪಾರಂಪರಿಕ ಗೋವಿನ ತಳಿಗಳನ್ನು ನಾಶಪಡಿಸುವಲ್ಲಿ ಬ್ರಿಟಿಷರ ಪ್ರಭಾವ ಇದೆ. ರಾಸಾಯನಿಕವಿಲ್ಲದ ಸಾವಯವ ಉತ್ಪನ್ನ ಸೇವಿಸುವುದರಿಂದ ಒಳ್ಳೆಯ ಆರೋಗ್ಯ ಹಾಗೂ ಆಯಸ್ಸು ಪಡೆದುಕೊಳ್ಳಲು ಸಾಧ್ಯ. ಕರಾವಳಿಯ ಪರಿಸರಕ್ಕೆ ಸಕ್ಕರೆ ಕಾರ್ಖಾನೆ ಪೂರಕವಲ್ಲ. ಮರಳು ಮಿಶ್ರಿತ ಮಣ್ಣನ್ನು
ಹೊಂದಿರುವ ಇಲ್ಲಿನ ಪ್ರದೇಶಗಳಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಇರುವಂತೆ ಸಕ್ಕರೆ ಬೀಟ್ಸ್ (ಶುಗರ್ ಬೀಟ್ಸ್) ಉತ್ಪಾದನೆಯ ಬಗ್ಗೆ ಚಿಂತನೆ ನಡೆಸಬೇಕು. 6 ತಿಂಗಳಲ್ಲಿ ಬೆಳೆಯನ್ನು ಪಡೆಯುವ ಹಾಗೂ ಕಡಿಮೆ ವೆಚ್ಚದಲ್ಲಿ ಸಣ್ಣ ಸಣ್ಣ ಉತ್ಪಾದನೆಯ ಕಾರ್ಖಾನೆಯನ್ನು ತೆರೆಯುವ ಈ ವಿಚಾರದ ಬಗ್ಗೆ ಅಧ್ಯಯನಗಳು ನಡೆಯಬೇಕು. ಈ ರೀತಿ ಉತ್ಪಾದನೆಯಾಗುವ ಸಕ್ಕರೆ ಒಳ್ಳೆಯ ಗುಣಮಟ್ಟವನ್ನು ಹೊಂದಿರುತ್ತದೆ ಹಾಗೂ ಇದಕ್ಕೆ ಬೇಡಿಕೆಯೂ ಇದೆ. ನಮ್ಮ ಪರಿಸರಕ್ಕೆ ಹೊಂದಿಕೊಳ್ಳುವ ಬೆಳೆಯನ್ನು ಬೆಳೆಯುವ ಬಗ್ಗೆ ಚಿಂತನೆಗಳಿರಬೇಕು. ಕೃಷಿ ಹಾಗೂ ಬೆಳೆಗಳಿಗೆ ಮಾರುಕಟ್ಟೆ ಒದಗಿಸಲು, ರೈತ ಸಂಘಟನೆಗಳು ಚಿಂತನೆ ನಡೆಸುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ವಕೀಲ ರವಿರಾಜ್ ಶೆಟ್ಟಿ ಮುಡುವಳ್ಳಿ ಸ್ವಾಗತಿಸಿದರು. ಹೈಕಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಎಚ್.ಎಂ ವಂದಿಸಿದರು. ಸೂರ್ಯಪ್ರಕಾಶ್ ದಾಮ್ಲೆ ಸಬ್ಬಾಗಿಲು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.