ADVERTISEMENT

15 ದಿನದೊಳಗೆ ಮರಳು ತೆಗೆಯದಿದ್ದರೆ ಮತ್ತೆ ಹೋರಾಟ

ಜಿಲ್ಲಾಡಳಿತಕ್ಕೆ ಶಾಸಕ ರಘುಪತಿ ಭಟ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 14:33 IST
Last Updated 8 ಡಿಸೆಂಬರ್ 2018, 14:33 IST
ಮರಳಿನ ಸಮಸ್ಯೆ ಬಗ್ಗೆ ಶಾಸಕ ರಘುಪತಿ ಭಟ್‌ ಸುದ್ದಿಗೋಷ್ಠಿ ನಡೆಸಿದರು
ಮರಳಿನ ಸಮಸ್ಯೆ ಬಗ್ಗೆ ಶಾಸಕ ರಘುಪತಿ ಭಟ್‌ ಸುದ್ದಿಗೋಷ್ಠಿ ನಡೆಸಿದರು   

ಉಡುಪಿ: 15 ದಿವಸದೊಳಗೆ 170 ಗುತ್ತಿಗೆದಾರರಿಗೂ ಮರಳು ತೆಗೆಯಲು ಅನುಮತಿ ನೀಡದಿದ್ದರೆ ಮರಳು ಹೋರಾಟ ಸಮಿತಿ ನೇತೃತ್ವದಲ್ಲಿ ಮತ್ತೆ ಧರಣಿ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಶಾಸಕ ಕೆ.ರಘುಪತಿ ಭಟ್ ಎಚ್ಚರಿಕೆ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಮರಳುಗಾರಿಕೆ ಬಗ್ಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ. ಉದ್ದೇಶಪೂರ್ವಕವಾಗಿ ಮರಳು ತೆಗೆಯುವ ಪ್ರಕ್ರಿಯೆಗೆ ಅಡ್ಡಿಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಚೆಗೆ ಗಣಿ ಇಲಾಖೆ ಸಚಿವರು, ಕಾರ್ಯದರ್ಶಿ, ನಿರ್ದೇಶಕರನ್ನು ಭೇಟಿಯಾಗಿ ಚರ್ಚಿಸಿದ್ದೆವು. ಸಂಪುಟ ಉಪ ಸಮಿತಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಈ ನಿರ್ಧಾರ ಕಾರ್ಯಸಾಧುವಲ್ಲ ಎಂದು ಶಾಸಕರು ಟೀಕಿಸಿದರು.

ADVERTISEMENT

ಸಂಪುಟ ಉಪ ಸಮಿತಿಯು ಮರಳು ನೀತಿಯ ಪರಿಷ್ಕರಣೆಗೆ ರಚನೆಯಾಗಿರುವಂಥದ್ದು. ಈ ಸಮಿತಿ ಇದುವರೆಗೂ ಒಂದೂ ಸಭೆಯನ್ನು ನಡೆಸಿಲ್ಲ. ಹೀಗಿರುವಾಗ ಸಮಿತಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ವಿಶ್ವಾಸವಿಲ್ಲ. ಅಧಿಕಾರಿಗಳ ಮಟ್ಟದಲ್ಲೇ ಮರಳಿನ ಸಮಸ್ಯೆ ಇತ್ಯರ್ಥವಾಗಬೇಕು ಎಂಬುದು ನಮ್ಮ ಆಗ್ರಹ ಎಂದು ತಿಳಿಸಿದರು.

ಉಡುಪಿ ವ್ಯಾಪ್ತಿಯ ನದಿಗಳಲ್ಲಿ 25 ಲಕ್ಷ ಟನ್‌ ಮರಳು ಲಭ್ಯವಿದೆ ಎಂಬ ಅಂಶ ಬೆಥಮೆಟ್ರಿಕ್‌ ಸರ್ವೆಯ ವರದಿಯಲ್ಲಿದೆ. ಅದನ್ನು ತೆಗೆಯಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಯಾವುದೇ ಸಮುದಾಯ, ಜಾತಿಯ ಜನರು ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುತ್ತಿಲ್ಲ. ಹಾಗಾಗಿ, ಸಾಂಪ್ರದಾಯಿಕವಾಗಿ ಮರಳು ತೆಗೆಯುವವರನ್ನು ಗುರುತಿಸಲು ಕಷ್ಟವಾಗುತ್ತಿದೆ. ಈ ವಿಚಾರದಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಜಿಲ್ಲಾಧಿಕಾರಿ ಈಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಜಿಲ್ಲೆಯಲ್ಲಿ ಮರಳುಗಾರಿಕೆಗೆ ಕೇಂದ್ರದ ಮೂಲಕ ತಡೆಯೊಡ್ಡುವುದು ಜಿಲ್ಲಾಡಳಿತದ ಉದ್ದೇಶ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ ಎಂದರು.

ಸಾಂಪ್ರಾದಾಯಿಕವಾಗಿ ಮರಳು ತೆಗೆಯುವವರನ್ನು ರಾಜ್ಯಸರ್ಕಾರವೇ ಗುರುತಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದ್ದರೂ, ರಾಜ್ಯ ಸರ್ಕಾರ ಮರಳು ತೆಗೆಯಲು ಅವಕಾಶ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದ ಎಂದು ರಘುಪತಿ ಭಟ್ ಟೀಕಿಸಿದರು.

ಜಿಲ್ಲೆಯ ಆರ್ಥಿಕತೆ ಕುಸಿದಿದೆ. ಕ್ಷೇತ್ರಕ್ಕೆ ಕಾಲಿಟ್ಟರೆ ಮರಳು ಯಾವಾಗ ಸಿಗುತ್ತದೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳು ನಿಂತಿವೆ. ಕೂಡಲೇ ಜಿಲ್ಲಾಡಳಿತ ಮರಳು ತೆಗೆಯಲು ಅನುಮತಿ ನೀಡಬೇಕು ಎಂದರು.

ಕಳೆದ ಬಾರಿ 9 ಲಕ್ಷ ಟನ್‌ ಮರಳು ಲಭ್ಯವಿದೆ ಎಂದು ಗುರುತಿಸಲಾಗಿತ್ತು. ಅದರಲ್ಲಿ 6.70 ಲಕ್ಷ ಟನ್ ಮಾತ್ರ ತೆಗೆಯಲಾಗಿತ್ತು. ಈಗ 25 ಲಕ್ಷ ಟನ್‌ ಮರಳು ಲಭ್ಯವಿದೆ ಎಂಬ ವರದಿ ನೀಡಿದ್ದರೂ ತೆಗೆಯಲು ಅವಕಾಶ ಸಿಗುತ್ತಿಲ್ಲ. ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂಜಿನಿಯರ್ ಅಸೋಸಿಯೇಷನ್‌ನಿಂದ ಪಾಂಡುರಂಗ ಆಚಾರ್ಯ, ಹೋರಾಟ ಸಮಿತಿಯ ಸುಧಾಕರ್ ಅಮೀನ್ ಪಾಂಗಳ, ಭಗವಾನ್ ದಾಸ್, ಪ್ರವೀಣ್ ಸುವರ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.