ADVERTISEMENT

ಅಕ್ರಮ ಕಟ್ಟಡ: ಕ್ರಮಕ್ಕೆ ಡಿಸಿ ಆದೇಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 5:49 IST
Last Updated 21 ಸೆಪ್ಟೆಂಬರ್ 2024, 5:49 IST

ಪಡುಬಿದ್ರಿ: ಇಲ್ಲಿನ ಮುಖ್ಯ ಬೀಚ್‌ನಲ್ಲಿ ಪರವಾನಗಿ ಪಡೆಯದೆ ವ್ಯಕ್ತಿಯೊಬ್ಬರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಬೀಚ್ ಗುತ್ತಿಗೆ ಪಡೆದಿರುವ ವಿಶ್ರುಧ್ ಬೀಚ್ ಅಭಿವೃದ್ಧಿ ಸಮಿತಿಯು ಜಿಲ್ಲಾಧಿಕಾರಿಗೆ ನೀಡಿದ ದೂರಿಗೆ ಸಂಬಂಧಿಸಿ, ಸ್ಥಳ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಕಾಪು ತಹಶೀಲ್ದಾರರಿಗೆ ಆದೇಶಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಸೇರಿದ ಜಾಗದಲ್ಲಿ ಸೆ.15ರಂದು ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಅಥವಾ ಸ್ಥಳಿಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಕಟ್ಟಡ ನಿರ್ಮಾಣ ಮಾಡುವಂತೆ ಸಮಿತಿ ತಿಳಿಸಿದಾಗ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ನಂತರ ಮತ್ತೆ ಕಾಮಗಾರಿ ಶುರು ಮಾಡಿದಾಗ, ಪಡುಬಿದ್ರಿ ಪಂಚಾಯಿತಿ ಪಿಡಿಒಗೆ ದೂರು ನೀಡಲಾಗಿದ್ದು, ಅವರು, ಕಾಮಗಾರಿ ನಿಲ್ಲಿಸುವಂತೆ ಮೌಖಿಕ ಸೂಚನೆ ನೀಡಿದ್ದರು. ಆದರೂ, ಕಾಮಗಾರಿ ಮುಂದುವರಿದ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸುವಂತೆ, ದೂರಿನಲ್ಲಿ ತಿಳಿಸಲಾಗಿತ್ತು.

ದೂರನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಕಟ್ಟಡ ತೆರವುಗೊಳಿಸಲು ತಹಶೀಲ್ದಾರರಿಗೆ ಆದೇಶಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ತಿಳಿಸಿದ್ದಾರೆ.

ADVERTISEMENT

ಪಡುಬಿದ್ರಿ ಕಡಲತೀರದ ಉದ್ದಕ್ಕೂ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣವಾಗಿರುವ ಕಟ್ಟಡಗಳ ಬಗ್ಗೆಯೂ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ದೂರು ಆಧರಿಸಿ, ಸ್ಥಳ ತನಿಖೆ ನಡೆಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಎಂದು ತಹಶೀಲ್ದಾರ್ ಪ್ರತಿಭಾ ಆರ್ ಪತ್ರಿಕೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.