ADVERTISEMENT

ಉಡುಪಿ | ಜಿಲ್ಲೆಯಲ್ಲೂ ಇ.ವಿ. ಖರೀದಿಗೆ ಜನರ ಆಸಕ್ತಿ

ಇಂಧನ ದರ ದುಬಾರಿ: ಎಲೆಕ್ಟ್ರಿಕ್‌ ವಾಹನಗಳಿಗೆ ಕುದುರುತ್ತಿದೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 5:05 IST
Last Updated 26 ಸೆಪ್ಟೆಂಬರ್ 2024, 5:05 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಉಡುಪಿ: ಪೆಟ್ರೋಲ್‌ ಮತ್ತು ಡೀಸೆಲ್‌ ದುಬಾರಿಯಾಗಿರುವ ಈ ಸಂದರ್ಭದಲ್ಲಿ ಜಿಲ್ಲೆಯಲ್ಲೂ ಎಲೆಕ್ಟಿಕ್‌ ವಾಹನಗಳನ್ನು (ಇ.ವಿ) ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ.

ಶಬ್ದ ಮಾಲಿನ್ಯ ಉಂಟುಮಾಡದ, ಹೊಗೆಯುಗುಳದ ಪರಿಸರ ಸ್ನೇಹಿ ವಾಹನಗಳನ್ನು ಕೊಂಡುಕೊಳ್ಳಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ADVERTISEMENT

ಈಗ ನಗರ ಪ್ರದೇಶದಲ್ಲಿ ವಾಹನಗಳ ಸಾಲು ಗಮನಿಸಿದರೆ, ಇ.ವಿ.ಗಳು ಕಣ್ಣಿಗೆ ಬಿದ್ದೇ ಬೀಳುತ್ತವೆ. ಅಷ್ಟರಮಟ್ಟಿಗೆ ಅವುಗಳು ಜನಪ್ರಿಯವಾಗುತ್ತಿವೆ. ಪ್ರಸಿದ್ಧ ಕಂಪನಿಗಳು ಕೂಡ ಈಚೆಗೆ ಇ.ವಿ.ಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಮತ್ತು ಕಾರುಗಳು ಬಳಕೆಯಾಗುತ್ತಿರುವುದನ್ನು ಕಾಣಬಹುದಾಗಿದೆ. ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಇ.ವಿ.ಗಳ ಬಳಕೆದಾರರ ಸಂಖ್ಯೆ ಹೆಚ್ಚಿದೆ.

ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ, ಕಾರು ಮತ್ತು ರಿಕ್ಷಾಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಚಾರ್ಜಿಂಗ್‌ ಪಾಯಿಂಟ್‌ಗಳು ಸಮರ್ಪಕವಾಗಿಲ್ಲದಿರುವುದು ಇಂತಹ ವಾಹನ ಮಾಲೀಕರನ್ನು ಕಾಡುವ ದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿರುವ ಒಟ್ಟು ಎಲೆಕ್ಟ್ರಿಕ್‌ ವಾಹನಗಳಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಅಧಿಕವಿದೆ.

ನಗರದೊಳಗಡೆ ಕಚೇರಿ ಮೊದಲಾದ ಕೆಲಸಕ್ಕೆ ತೆರಳುವವರು ಹೆಚ್ಚಾಗಿ ಇಂತಹ ವಾಹನಗಳನ್ನು ಖರೀದಿಸುತ್ತಿದ್ದಾರೆ. ಓಲಾ, ಏಥರ್‌, ಟಿವಿಎಸ್‌, ಎಂ.ಜಿ., ಟಾಟಾದಂತಹ ಎಲೆಕ್ಟ್ರಿಕ್‌ ವಾಹನಗಳನ್ನು ತಯಾರಿಸುವ ಪ್ರಮುಖ ಕಂಪನಿಗಳ ಶೋರೂಂಗಳು ಈಗ ನಗರದಲ್ಲಿವೆ.

ಎಲೆಕ್ಟಿಕ್‌ ದ್ವಿಚಕ್ರ ವಾಹನವನ್ನು ತಯಾರಿಸುವ ಕೆಲವು ಕಂಪನಿಗಳು ಸರ್ಪಕವಾಗಿ ಸೇವೆ ನೀಡುತ್ತಿಲ್ಲ ಎನ್ನುವ ಅಳಲು ತೋಡಿಕೊಂಡರೂ, ಇಂತಹ ವಾಹನಗಳಿಂದ ಲಾಭವಿದೆ ಎನ್ನುತ್ತಾರೆ ಹೆಚ್ಚಿನ ಗ್ರಾಹಕರು.

ಪೆಟ್ರೋಲ್ ಅಥವಾ ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳನ್ನು ಬಳಸುವ ಬದಲು ಬ್ಯಾಟರಿಯಿಂದ ಚಾಲನೆಯಾಗುತ್ತಿರುವ ಎಲೆಕ್ಟ್ರಿಕ್‌ ವಾಹನಗಳು ಪರಿಸರ ಮಾಲಿನ್ಯ ಉಂಟು ಮಾಡುವುದಿಲ್ಲ. ಜನರಿಗೂ ಮನೆಗಳಲ್ಲೇ ಈ ವಾಹನಗಳ ಬ್ಯಾಟರಿಗಳನ್ನು ಚಾರ್ಜ್‌ ಮಾಡಬಹುದಾಗಿದೆ. ಮನೆಗಳಲ್ಲಿ ಸೋಲಾರ್‌ ವ್ಯವಸ್ಥೆ ಇರುವವರು ಅದರ ಮೂಲಕವೂ ಚಾರ್ಜ್‌ ಮಾಡಿ, ವಿದ್ಯುತ್‌ ಉಳಿತಾಯ ಮಾಡಬಹುದಾಗಿದೆ.

ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಇ.ವಿ.ಗಳ ನಿರ್ವಹಣೆ ವೆಚ್ಚ ತೀರಾ ಕಡಿಮೆ. ವೇಗವಾದ ಚಾರ್ಜಿಂಗ್‌ ಸಾಮರ್ಥ್ಯ, ದೀರ್ಘ ಬಾಳ್ವಿಕೆಯ ಬ್ಯಾಟರಿ ಹೊಂದಿರುವ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ.

ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರವು ಯಾವುದೇ ರೀತಿಯ ತೆರಿಗೆ ವಿಧಿಸುತ್ತಿಲ್ಲ ಎನ್ನುತ್ತವೆ ಪ್ರಾದೇಶಿಕ ಸಾರಿಗೆ ಕಚೇರಿ ಮೂಲಗಳು.

ಜಿಲ್ಲೆಯಲ್ಲಿ ನೋಂದಣಿಯಾಗಿರುವ ಒಟ್ಟು ಇ.ವಿ.ಗಳುದ್ವಿಚಕ್ರ ವಾಹನ;4,209ಕಾರು;402ಆಟೊ;190ಒಟ್ಟು;4,801

ಪೆಟ್ರೋಲ್‌ ದುಬಾರಿಯಾಗಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದ ಕಾರಣ ಲಾಭವಾಗಿದೆ. ನಗರದಲ್ಲಿ ಓಡಾಡಲು ಪ್ರಸ್ತುತ ಇಂತಹ ವಾಹನಗಳು ಹೆಚ್ಚು ಸೂಕ್ತವಾಗಿವೆ
ಶ್ರೀಕಾಂತ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕ
ನಿರ್ವಹಣೆ ವೆಚ್ಚ ಕಡಿಮೆ ಹಾಗೂ ಪರಿಸರಕ್ಕೆ ಪೂರಕವಾಗಿರುವ ಕಾರಣ ಎಲೆಕ್ಟಿಕ್‌ ವಾಹನಗಳತ್ತ ಜನರು ಈಚೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಜಿಲ್ಲೆಯಲ್ಲೂ ಮುಂದಿನ ದಿನಗಳಲ್ಲಿ ಇಂತಹ ವಾಹನಗಳನ್ನು ಖರೀದಿಸುವವರ ಸಂಖ್ಯೆ ಅಧಿಕವಾಗಲಿದೆ
ಎಲ್‌.ಪಿ.ನಾಯಕ್‌ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.