ಹೆಬ್ರಿ: ಅಧಿಕಾರಿಗಳು ಬಡವರನ್ನು ಸತಾಯಿಸಿದೆ 94ಸಿ ಅರ್ಜಿ ವಿಲೇವಾರಿ ಮಾಡಲು ಹಲವು ಬಾರಿ ಸೂಚನೆ ನೀಡಿದ್ದರೂ, ನೆಪ ಹೇಳಿ ಮುಂದೂಡುತ್ತಿದ್ದಾರೆ. ಗಣೇಶ ಚತುರ್ಥಿ ಮುಗಿದ ಬಳಿಕ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ 94ಸಿ ಅರ್ಜಿ ವಿಲೇವಾರಿಗಾಗಿ ದೊಡ್ಡ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಹೆಬ್ರಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಸವಲತ್ತು ವಿತರಣೆ ಮಾಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಹೆಬ್ರಿಯಿಂದ ತೀರ್ಥಹಳ್ಳಿಯ ತನಕದ ವಿಸ್ತರಣೆ ಬಗ್ಗೆ ಕ್ರಮಗಳು ಜರುಗುತ್ತಿವೆ. ಹೆಬ್ರಿ ಪೇಟೆಗೆ ಬೈಪಾಸ್ ನೀಡುವುದು ಅಥವಾ ಪೇಟೆಯ ಮೂಲಕ ಹಾದು ಹೋಗುವುದರ ಬಗ್ಗೆ ಸಾರ್ವಜನಿಕರಿಂದ ಸಲಹೆ ಪಡೆದು, ಖರ್ಚು ವೆಚ್ಚಗಳ ಬಗ್ಗೆ ಗಮನದಲ್ಲಿರಿಸಿಕೊಂಡು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಹೆಬ್ರಿಯಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನಕ್ಕೆ ₹2 ಕೋಟಿ ಅನುದಾನ ನೀಡುವಂತೆ ಶಾಸಕರಿಗೆ ದಲಿತ ಸಂಘರ್ಷ ಸಮಿತಿಯ ಕೆ. ದೇವು ಕನ್ಯಾನ ಮನವಿ ನೀಡಿದರು. ರೇಷನ್ ಕಾರ್ಡ್, 94ಸಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಕುರಿತು ಅಹವಾಲು ಸಲ್ಲಿಸಲಾಯಿತು. ಪಂಚಾಯತಿಯ ಡಿಜಿಟಲ್ ಗ್ರಂಥಾಲಯ, ಅರಿವು ಕೇಂದ್ರಕ್ಕೆ ಶಾಸಕರು ಚಾಲನೆ ನೀಡಿದರು.
ಗ್ರಾ.ಪಂ. ಅಧ್ಯಕ್ಷ ತಾರಾನಾಥ ಎಸ್. ಬಂಗೇರ, ಉಪಾಧ್ಯಕ್ಷೆ ಸುಪ್ರಿಯಾ, ಪಿಡಿಒ ಸದಾಶಿವ ಸೇರ್ವೆಗಾರ್, ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.