ADVERTISEMENT

ಉಡುಪಿ: ಹೋಟೆಲ್‌ಗಳಲ್ಲಿ ಊಟದ ದರ ಹೆಚ್ಚಳ

ಮಳೆ ಕೊರತೆ: ಅಕ್ಕಿ ದುಬಾರಿ, ಅಗತ್ಯ ವಸ್ತುಗಳ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:12 IST
Last Updated 14 ಮಾರ್ಚ್ 2024, 16:12 IST
i
i   

ಉಡುಪಿ: ದಿನಬಳಕೆ ವಸ್ತುಗಳ ದರ ಗಗನಕ್ಕೇರುತ್ತಿದೆ. ಈ ವರ್ಷ ತೀವ್ರ ಮಳೆ ಕೊರತೆಯ ಪರಿಣಾಮ ಅಕ್ಕಿಯ ಬೆಲೆಯಲ್ಲಿ ವಿಪರೀತ ಹೆಚ್ಚಳವಾಗಿದೆ. ವರ್ಷದ ಹಿಂದೆ ₹40 ರಿಂದ ₹45ಕ್ಕೆ ಸಿಗುತ್ತಿದ್ದ ಸೋನಾ ಮಸೂರಿ ಅಕ್ಕಿಯ ದರ ಪ್ರಸ್ತುತ ₹65 ರಿಂದ ₹70ಕ್ಕೆ ತಲುಪಿದೆ. ಎರಡು ವರ್ಷಗಳಲ್ಲಿ ಬರೋಬ್ಬರಿ ದರ ಶೇ 50ಕ್ಕಿಂತ ಹೆಚ್ಚಳವಾಗಿರುವುದು ಗ್ರಾಹಕರ ಜೇಬಿಗೆ ಹೊರೆಯಾಗಿದೆ.

ಕರಾವಳಿಯಲ್ಲಿ ಹೆಚ್ಚು ಬಳಕೆಯಲ್ಲಿರುವ ಕುಚಲಕ್ಕಿ ದರವೂ ಕೆ.ಜಿಗೆ ₹50 ರಿಂದ ₹55ಕ್ಕೆ ತಲುಪಿದೆ. ಕುಚಲಕ್ಕಿ ಹಾಗೂ ಸೋನಾ ಮಸೂರಿ ಅಕ್ಕಿಯ ದರ ಹೆಚ್ಚಳ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದ್ದು, ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಊಟದ ದರ ಹೆಚ್ಚಾಗಿದೆ. ಸಣ್ಣ ಹೋಟೆಲ್‌ಗಳಲ್ಲಿ ಸಾಮಾನ್ಯ ಊಟದ ದರ ₹60 ರಿಂದ ₹80ಕ್ಕೆ ಏರಿಕೆಯಾಗಿದೆ.

ಎರಡು ವರ್ಷಗಳಲ್ಲಿ ಅಕ್ಕಿಯ ಬೆಲೆ ದುಪ್ಪಟ್ಟಾಗಿದ್ದು, ಅಡುಗೆ ಅನಿಲ, ತರಕಾರಿ, ಸಾಂಬಾರ್ ಪದಾರ್ಥ ಸೇರಿದಂತೆ ಅಡುಗೆಗೆ ಬಳಕೆಯಾಗುವ ಬಹುತೇಕ ವಸ್ತುಗಳ ದರ ಹೆಚ್ಚಾಗಿರುವುದರಿಂದ ದರ ಏರಿಕೆ ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರು.

ADVERTISEMENT

ಜಿಲ್ಲೆಯಲ್ಲಿ ಸೋನಾ ಮಸೂರಿ ಭತ್ತ ಬೆಳೆಯುವ ಪ್ರಮಾಣ ತೀರಾ ಕಡಿಮೆ ಇದ್ದು ಜಿಲ್ಲೆಯ ಅಗತ್ಯತೆಯ ಶೇ 90ರಷ್ಟು ಬೆಳ್ತಿಗೆ ಅಕ್ಕಿಯನ್ನು ನೆರೆಯ ಶಿವಮೊಗ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮಳೆ ಕೊರತೆಯಿಂದ ವ್ಯಾಪಾರಿಗಳು ಅಕ್ಕಿಯ ದರ ಹೆಚ್ಚಳ ಮಾಡಿದ್ದಾರೆ ಎನ್ನುತ್ತಾರೆ ಹೋಟೆಲ್ ಮಾಲೀಕ ಶಿವಾನಂದ್.

ಮಾಂಸಹಾರ ಹೋಟೆಲ್‌ಗಳಲ್ಲಿ ಹೆಚ್ಚು ಬಳಕೆಯಾಗುವ ಗುಣಮಟ್ಟದ ಬಾಸ್ಮತಿ ಅಕ್ಕಿ ಕೆ.ಜಿಗೆ ₹100ರ ಗಡಿ ದಾಟಿದರೆ, ಕೊಲ್ಲಂ ಅಕ್ಕಿಯ ಬೆಲೆ ₹70ರಿಂದ ₹80ಕ್ಕೆ ಮುಟ್ಟಿದೆ.

ಬೀನ್ಸ್‌ ದರ ಹೆಚ್ಚಳ: ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿಗಳ ದರ ಏರಿಳಿತವಾಗಿದೆ. ಬೀನ್ಸ್‌ ಕೆ.ಜಿಗೆ ಬರೋಬ್ಬರಿ ₹80 ರಿಂದ ₹90 ಮುಟ್ಟಿದೆ. ಕಳೆದವಾರ ಬೀನ್ಸ್‌ ₹60 ಇತ್ತು. ತರಕಾರಿ ಬೆಳೆಗೆ ನೀರಿನ ಕೊರತೆ ಎದುರಾಗಿರುವುದರಿಂದ ಬಹುತೇಕ ಎಲ್ಲ ತರಕಾರಿಗಳ ದರ ಏರಿಕೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ಅಲ್ತಾಫ್‌.

ಟೊಮೆಟೊ ಕೂಡ ಸ್ವಲ್ಪ ದರ ಹೆಚ್ಚಿಸಿಕೊಂಡಿದ್ದು ಕೆ.ಜಿಗೆ ₹25ಕ್ಕೆ ಸಿಗುತ್ತಿದೆ. ಈರುಳ್ಳಿ ₹35, ಆಲೂಗಡ್ಡೆ ₹40, ಸೌತೆಕಾಯಿ ₹35, ಕ್ಯಾರೆಟ್‌ ₹60, ಬೆಂಡೆಕಾಯಿ ₹60, ಎಲೆಕೋಸು ₹25, ಹಸಿ ಮೆಣಸಿನಕಾಯಿ ₹70, ಬೀಟ್‌ರೂಟ್‌ ₹45, ಬದನೆಕಾಯಿ ₹40, ಬೆಳ್ಳುಳ್ಳಿ ₹180ರಿಂದ ₹200, ಕ್ಯಾಪ್ಸಿಕಂ ₹70, ಸೋರೆಕಾಯಿ ₹30, ಈರೇಕಾಯಿ ₹60, ಗೆಡ್ಡೆಕೋಸು ₹40, ಬೆಂಗಳೂರು ಬದನೆ ₹30, ಹಸಿ ಶುಂಠಿ ₹130, ಕುಂಬಳಕಾಯಿ ₹40, ಸಾಂಬಾರ್ ಸೌತೆ ₹30, ಸಿಹಿ ಗೆಣಸು ₹35 ದರ ಇದೆ. 

ಹಣ್ಣುಗಳ ದರ: ದಾಳಿಂಬೆ ಕೆ.ಜಿಗೆ ಗಾತ್ರಕ್ಕೆ ಅನುಗುಣವಾಗಿ ₹180ರಿಂದ ₹220, ಕಪ್ಪು ದ್ರಾಕ್ಷಿ ₹120, ಹಸಿರು ದ್ರಾಕ್ಷಿ ₹80, ಸೀಬೆಹಣ್ಣು ₹90, ಪಪ್ಪಾಯ ₹40, ಸಪೋಟ ₹60, ಬಾಳೆಹಣ್ಣು ₹70, ಕಿತ್ತಳೆ ₹60, ಸೇಬು ₹220ರಿಂದ ₹280, ಅನಾನಸ್‌ ₹50, ಕಲ್ಲಂಗಡಿ ₹25 ದರ ಇದೆ.

ಮಾಂಸ ದರ ಚಿಕನ್ ದರ ಸ್ವಲ್ಪ ಕಡಿಮೆಯಾಗಿದ್ದು ಬ್ರಾಯ್ಲರ್ ಚಿಕನ್‌ ಕೆ.ಜಿಗೆ 260 (ಚರ್ಮ ರಹಿತ) ಚರ್ಮ ಸಹಿತ 240 ದರ ಇದ್ದರೆ ಮೊಟ್ಟೆ ಒಂದಕ್ಕೆ 6.50 ರಿಂದ 7 ದರ ಇದೆ. ಆಡು ಕುರಿ ಮಾಂಸ ಕೆ.ಜಿಗೆ 700 ರಿಂದ 850 ಇದೆ. ಮೀನುಗಳ ದರವೂ ಹೆಚ್ಚಾಗಿದ್ದು ಬಿಳಿ ಪಾಂಪ್ಲೆಟ್‌ ಕೆ.ಜಿಗೆ 1200 ರಿಂದ 1400 ಅಂಜಲ್‌ 800 ಬಂಗುಡೆ 300 ಕೊಕ್ಕರ್ 400 ದರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.