ಉಡುಪಿ: ಮಣಿಪಾಲದಲ್ಲಿರುವ 35 ಅಂತಸ್ತುಗಳ ರಾಯಲ್ ಎಂಬಸಿ ಕಟ್ಟಡವನ್ನು ಚಿತ್ರದುರ್ಗದ ಸಾಹಸಿ ಜ್ಯೋತಿ ರಾಜ್ (ಕೋತಿರಾಜ್) ಭಾನುವಾರ ಯಶಸ್ವಿಯಾಗಿ ಏರಿದರು. 120 ಮೀಟರ್ ಎತ್ತರದ ಈ ಕಟ್ಟಡ ಇದುವರೆಗೂ ಜ್ಯೋತಿರಾಜ್ ಹತ್ತಿರುವ ಬಹು ಎತ್ತರದ ಕಟ್ಟಡವಾಗಿದೆ.
ಬೆಳಿಗ್ಗೆ 11.10ಕ್ಕೆ ಸುರಕ್ಷತಾ ಸಾಧನಗಳೊಂದಿಗೆ ಕಟ್ಟಡವನ್ನು ಹತ್ತಲು ಆರಂಭಿಸಿದ ಜ್ಯೋತಿರಾಜ್ 12.10ಕ್ಕೆ ತುತ್ತತುದಿಯನ್ನು ತಲುಪುತ್ತಿದ್ದಂತೆ ನೆರೆದಿದ್ದವರೆಲ್ಲ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದರು. ಬಹುಮಹಡಿ ಕಟ್ಟಡದ ತುದಿಯಲ್ಲಿ ಕನ್ನಡದ ಬಾವುಟ ಹಾರಿಸಿ ಸಂಭ್ರಮಿಸಿದರು.
ಜ್ಯೋತಿರಾಜ್ ಕಲ್ಲು ಬಂಡೆ, ಬೆಟ್ಟ, ಜಲಪಾತಗಳನ್ನು ಲೀಲಾಜಾಲವಾಗಿ ಹತ್ತುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಆದರೆ, ಬಹುಮಹಡಿ ಕಟ್ಟಡಗಳನ್ನು ಹತ್ತಿ ಅಭ್ಯಾಸವಿಲ್ಲ. ಅದರಲ್ಲೂ ಮಣಿಪಾಲದ ರಾಯಲ್ ಎಂಬಸಿ ಕಟ್ಟಡ ಏರುವುದು ನಿಜಕ್ಕೂ ಜ್ಯೋತಿರಾಜ್ ಪಾಲಿಗೆ ಸವಾಲಿನಿಂದ ಕೂಡಿತ್ತು.
ಕೈಗಳನ್ನು ಬಳಸಿ ಕಬ್ಬಿಣದ ಸರಳುಗಳ ಸಹಾಯದಿಂದ ಒಂದು ಮಹಡಿಯಿಂದ ಮತ್ತೊಂದು ಮಹಡಿ ತಲುಪುವ ವ್ಯವಸ್ಥೆ ರಾಯಲ್ ಎಂಬಸಿಯಲ್ಲಿ ಇರಲಿಲ್ಲ. ಕಿರಿದಾದ ಪ್ಯಾಸೆಜ್‌ನಲ್ಲಿಯೇ ಗೋಡೆಗೆ ಬೆನ್ನುಮಾಡಿ ಕಾಲುಗಳ ಮೇಲೆ ಬಲ ಹಾಕುತ್ತಾ ಮೇಲಕ್ಕೆ ಸಾಗುತ್ತಿದ್ದ ದೃಶ್ಯ ರೋಮಾಂಚಕವಾಗಿತ್ತು.
ತೀವ್ರ ಬಿಸಿಲಿನ ತಾಪದ ನಡುವೆಯೂ ಛಲಬಿಡದೆ ಕಟ್ಟಡ ಏರುತ್ತಿದ್ದ ಜ್ಯೋತಿರಾಜ್‌ಗೆ ಸಾರ್ವಜನಿಕರು ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಕಟ್ಟಡದ ಅರ್ಧ ಭಾಗ ಕ್ರಮಿಸುವ ಹೊತ್ತಿಗೆ ತೀವ್ರ ನೀರಿನ ದಾಹದಿಂದ ಬಳಲುತ್ತಿದ್ದ ಜ್ಯೋತಿರಾಜ್‌ಗೆ ನೀರು ಪೂರೈಸಲಾಯಿತು. ಬಳಿಕ ನಿಧಾನವಾಗಿ ಮೇಲೆರುತ್ತಾ ಬಂದ ಜ್ಯೋತಿರಾಜ್ ಕೊನೆಗೂ ಗುರಿ ಮುಟ್ಟಿದರು.
ನಂತರ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜ್ಯೋತಿರಾಜ್‌ಗೆ ಸನ್ಮಾನ ಮಾಡಿ ಶುಭ ಹಾರೈಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಕಟ್ಟಡ ಏರುವಾಗ ಬಹಳ ಸವಾಲುಗಳು ಎದುರಾದವು. ಆದರೂ ಯಶಸ್ವಿಯಾಗಿ ಗುರಿಮುಟ್ಟಿದ್ದು ಹಾಗೂ ಜೀವಮಾನದಲ್ಲೇ ಅತಿ ಎತ್ತರದ ಕಟ್ಟಡವನ್ನು ಏರಿದ್ದು ಖುಷಿ ನೀಡಿದೆ ಎಂದರು.
35 ಅಂತಸ್ತುಗಳ ಕಟ್ಟಡ ಹತ್ತಿರುವುದು ಜಗತ್ತಿನ ಅತಿ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲಿಫಾ ಹತ್ತಲು ಸ್ಫೂರ್ತಿ ನೀಡಿದಂತಾಗಿದೆ. ಕರಾವಳಿ ಜನರ ಪ್ರೀತಿ, ಪ್ರೋತ್ಸಾಹಕ್ಕೆ ಋಣಿಯಾಗಿರುತ್ತೇನೆ ಎಂದರು.
ಅಡ್ವೆಂಚರ್ ಮಂಕಿ ಕ್ಲಬ್ ಫೌಂಡೇಷನ್ ಸ್ಥಾಪನೆ ಮಾಡುವ ಉದ್ದೇಶದಿಂದ ಪ್ರಾಣ ಪಣಕ್ಕಿಟ್ಟು ನಾಡಿನೆಲ್ಲೆಡೆ ಸಾಹಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನವಾರ ಮಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳನ್ನು ಹತ್ತಲಿದ್ದೇನೆ. ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.