ADVERTISEMENT

ದೈತ್ಯ ತಂಡಗಳ ಎದುರು ಭಾರತದ ಶಕ್ತಿ ಅನಾವರಣ- ಮಾಜಿ ವಿಕೆಟ್ ಕೀಪರ್‌ ಸೈಯದ್ ಕಿರ್ಮಾನ

1983ರ ವಿಶ್ವಕಪ್ ಕ್ರಿಕೆಟ್ ಗೆದ್ದ ಸಂಭ್ರಮ ಹಂಚಿಕೊಂಡ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 15:35 IST
Last Updated 3 ಜನವರಿ 2022, 15:35 IST
ಮಣಿಪಾಲದ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ‘1983-ದಂತಕತೆ’ ಸಂವಾದ ಮತ್ತು ಕ್ರಿಕೆಟ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್‌ ಸೈಯದ್ ಕಿರ್ಮಾನಿ ಭಾಗವಹಿಸಿ ಕ್ರಿಕೆಟ್ ಆಡಿದರು.
ಮಣಿಪಾಲದ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ‘1983-ದಂತಕತೆ’ ಸಂವಾದ ಮತ್ತು ಕ್ರಿಕೆಟ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್‌ ಸೈಯದ್ ಕಿರ್ಮಾನಿ ಭಾಗವಹಿಸಿ ಕ್ರಿಕೆಟ್ ಆಡಿದರು.   

ಉಡುಪಿ: 1983ರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡಲು ಇಂಗ್ಲೆಂಡ್‌ಗೆ ತೆರಳಿದ್ದಾಗ ಅಲ್ಲಿನ ಬೀದಿಗಳಲ್ಲಿ ನಿಂತು ವಿಶ್ವದ ದೈತ್ಯ ತಂಡಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆವು. ವಿಶ್ವಕಪ್ ಜಯಿಸಿದ ಬಳಿಕ ವಿಶ್ವದ ಬಲಿಷ್ಠ ತಂಡಗಳು ಭಾರತದತ್ತ ಬೆರಗುಗಣ್ಣಿನಿಂದ ನೋಡುವಂತಾಯಿತು ಎಂದು ಭಾರತ ತಂಡದ ಮಾಜಿ ವಿಕೆಟ್ ಕೀಪರ್‌ ಸೈಯದ್ ಕಿರ್ಮಾನಿ ಹೇಳಿದರು.

ಮಣಿಪಾಲದ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ‘1983-ದಂತಕತೆ’ ಸಂವಾದ ಮತ್ತು ಕ್ರಿಕೆಟ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

1983ರ ವಿಶ್ವಕಪ್‌ನಲ್ಲಿ ಭಾರತವನ್ನು ಬಲಿಷ್ಠ ತಂಡ ಎಂದು ಪರಿಗಣಿಸಿರಲಿಲ್ಲ. ಆದರೆ, ಭಾರತ ಆಡಿದ ಪ್ರಥಮ ಪಂದ್ಯದಲ್ಲೇ ಬಲಿಷ್ಠ ವೆಸ್ಟ್ ಇಂಡಿಸ್ ತಂಡವನ್ನು 34 ರನ್‍ಗಳಿಂದ ಸೋಲಿಸಿ, ಭಾರತವೂ ದೈತ್ಯ ತಂಡ ಎಂಬುದನ್ನು ತೋರಿಸಿಕೊಟ್ಟೆವು. ಅಂದಿನ ಗೆಲವು ಇಡೀ ತಂಡಕ್ಕೆ ಚೈತ್ಯನ್ಯದ ಚಿಲುಮೆಯಾಗಿತ್ತು. ದೃಢ ನಿಲುವು ಟಿಸಿಲೊಡೆದಿತ್ತು. ಈ ಬಾರಿ ವಿಶ್ವಕಪ್ ಭಾರತದ ಪಾಲಿನದ್ದು ಎಂಬ ಆತ್ಮವಿಶ್ವಾಸ ಮೂಡಿತ್ತು ಎಂದು ಕಿರ್ಮಾನಿ ವಿಶ್ವಕಪ್ ನೆನಪುಗಳನ್ನು ಮೆಲುಕು ಹಾಕಿದರು.

ADVERTISEMENT

ವೆಸ್ಟ್‌ಇಂಡೀಸ್ ವಿರುದ್ಧದ ಗೆಲುವಿನ ಬಳಿಕ ಭಾರತ ತಂಡ ಹಿಂದಿರುಗಿ ನೋಡಲಿಲ್ಲ. ಮುಂದಿನ ಎಲ್ಲ ಪಂದ್ಯಗಳಲ್ಲಿ ಕೆಚ್ಚೆದೆಯ ಹೋರಾಟ ನೀಡಿತು. ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ 17 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಭಾರತ ವಿಶ್ವಕಪ್‍ನಿಂದ ನಿರ್ಗಮಿಸಬೇಕಾದ ಸನ್ನಿವೇಶ ಎದುರಾದಾಗ, ಕಪಿಲ್ ದೇವ್‍ ಅವರ ಕೆಚ್ಚೆದೆಯ ಆಟ ಹಾಗೂ ಅವರೊಂದಿಗಿನ 126 ರನ್‍ಗಳ ಮುರಿಯದ ಜತೆಯಾಟ ತಂಡವನ್ನು ಸೋಲಿನಿಂದ ಪಾರು ಮಾಡಿತು ಎಂದು ಸ್ಮರಿಸಿದರು.

ಅಂತಿಮ ಪಂದ್ಯದಲ್ಲಿ ದೈತ್ಯ ವೆಸ್ಟ್ ಇಂಡೀಸ್ ಪಡೆ ಎದುರಾದಾಗ ಮೊದಲ ಪಂದ್ಯದ ವಿಜಯವನ್ನು ಮತ್ತೆ ಪುನರಾವರ್ತಿಸಿ 43 ರನ್‍ಗಳ ಅಂತರದಲ್ಲಿ ಗೆಲುವು ಪಡೆದು ವಿಶ್ವಕಪ್‍ಗೆ ಮುತ್ತಿಕ್ಕಿದೆವು. ವಿಶ್ವಕಪ್ ಗೆದ್ದ ಬಳಿಕ ಭಾರತದ ಆಟಗಾರರು ವಿಜಯ ರಥದಲ್ಲಿ ಸಾಗುತ್ತಿದ್ದರೆ ಇಂಗ್ಲೆಂಡ್‌ನ ಬೀದಿಗಳಲ್ಲಿ ದೈತ್ಯ ತಂಡಗಳ ಸದಸ್ಯರು ಬೆರಗಾಗಿ ನೋಡುತ್ತಿದ್ದರು ಎಂದು ಕಿರ್ಮಾನಿ ಅಂದಿನ ಸನ್ನಿವೇಶವನ್ನು ಕಟ್ಟಿಕೊಟ್ಟರು.

ಉಡುಪಿಯಲ್ಲಿ ಕ್ರಿಕೆಟ್‌ ಅಂಗಳವಿಲ್ಲದೆ ಕ್ರೀಡೆ ಸೊರಗುತ್ತಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಪಾಲಿಟೆಕ್ನಿಕ್‍ ಶೈಕ್ಷಣಿಕ ಸಂಯೋಜಕ ಟಿ.ರಂಗ ಪೈ ಇದ್ದರು. ರಾಷ್ಟ್ರಮಟ್ಟದ ಕ್ರೀಡಾಪಟು ಉಡುಪಿಯ ಆಭಿಲಾಶ್ ಶೆಟ್ಟಿ, ರಣಜಿ ಆಟಗಾರ ನಿಶ್ಚಿತ್‍ ರಾವ್‍ ಸೇರಿದಂತೆ 26 ಪುರುಷ ಹಾಗೂ ಮಹಿಳಾ ಕ್ರಿಕೆಟರ್ಸ್‌ಗಳನ್ನು ಅಭಿನಂದಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಮತ್ತು ಡಾ. ಬಾಲಕೃಷ್ಣ ಮದ್ದೋಡಿ ಅವರನ್ನು ಗೌರವಿಸಲಾಯಿತು. ಸೈಯದ್ ಕೀರ್ಮಾನಿ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಅಬ್ಚುಲ್ ಕಲಾಂ ಅಜಾದ್, ಸಂದೇಶ್ ಶೆಟ್ಟಿ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ್, ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ನರೇಂದ್ರ ಪೈ, ಪಿಎಸ್‌ಐ ವಿನಯ್, ತರಬೇತುದಾರ ರೆನ್ ಟ್ರೆವೆರ್, ಲಿಂಗಪ್ಪ, ಉದಯ ಕುಮಾರ್, ವಿಜಯ ಆಳ್ವ ಇದ್ದರು.

‘ಬರಿಗಾಲಿನಲ್ಲಿ ಕ್ರಿಕೆಟ್ ಆಡಿದ್ದೆ’

‘ನಾನು ಕ್ರಿಕೆಟ್ ರಂಗ ಪ್ರವೇಶಿಸಿದಾಗ ಕ್ಯಾನ್‍ವಾಸ್ ಶೂ ಕೂಡ ಇರಲಿಲ್ಲ. ಬರಿಗಾಲಿನಲ್ಲಿ ಆಡಿದ್ದೆ. ಕ್ರಿಕೆಟ್ ಸಾಮಾಗ್ರಿಗಳು ಗುಣಮಟ್ಟದ್ದಾಗಿರಲಿಲ್ಲ. ಕೈಗವಸುಗಳನ್ನು ಥೈಗಾರ್ಡ್‌ಗಳಾಗಿ ಬಳಸಿ ವೆಸ್ಟ್ ಇಂಡೀಸ್‌ನ ವೇಗದ ವೇಗದ ಬೌಲರ್‌ಗಳನ್ನು ಎದುರಿಸುತ್ತಿದ್ದೆ. ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ಉತ್ಕೃಷ್ಟ ಗುಣಮಟ್ಟದ ಕ್ರಿಕೆಟ್‌ ಸಾಮಾಗ್ರಿಗಳು ಆಟಗಾರರಿಗೆ ಸಿಗುತ್ತಿವೆ ಎಂದು ಸಯ್ಯದ್ ಕಿರ್ಮಾನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.