ADVERTISEMENT

ಇಂದ್ರಾಳಿ ರೈಲ್ವೆ ಮೇಲ್ಸೇತುವೆ: ‘ಜ.15ರೊಳಗೆ ವಾಹನ ಸಂಚಾರಕ್ಕೆ ಮುಕ್ತ’

ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 5:51 IST
Last Updated 24 ಅಕ್ಟೋಬರ್ 2024, 5:51 IST
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ವೀಕ್ಷಿಸಿದರು
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ವೀಕ್ಷಿಸಿದರು   

ಉಡುಪಿ: ಇಂದ್ರಾಳಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ, ಜನವರಿ 15ರೊಳಗೆ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಬುಧವಾರ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, 2018ರಲ್ಲಿ ಈ ಮೇಲ್ಸೇತುವೆಯ ಕಾಮಗಾರಿ ಆರಂಭವಾಗಿದ್ದು, ರೈಲ್ವೆ ಇಲಾಖೆಯ ವಿಳಂಬದಿಂದಾಗಿ ಕಾಮಗಾರಿ ಕುಂಟುತ್ತಿದೆ ಎಂದರು.

138 ಟನ್ ತೂಕದ ಗರ್ಡರ್ ಅಳವಡಿಸುವ ಯೋಜನೆ ಇದಾಗಿತ್ತು. ರಸ್ತೆಯ ಉದ್ದ 38 ಮೀಟರ್ ನಿಂದ 58 ಮೀಟರ್‌ಗೆ ವಿಸ್ತರಣೆಯಾಗಿದೆ. ಗರ್ಡರ್‌ಗಳಿಗೆ ಅಳವಡಿಸುವ ಸ್ಟೀಲ್ 420 ಟನ್‌ಗೆ ಏರಿಕೆಯಾಗಿದೆ. ಕಾಮಗಾರಿ ವಿಳಂಬವಾಗಿರುವುದು ನಿಜ. ಕಾಮಗಾರಿಗೆ ಬೇಕಾದ ಎಲ್ಲಾ ಸಾಮಗ್ರಿಗಳು ಈಗ ಬಂದಿವೆ. ಕೆಲಸ ಇನ್ನಷ್ಟು ಚುರುಕುಗೊಳ್ಳಲಿದೆ ಎಂದು ವಿವರಿಸಿದರು.

ADVERTISEMENT

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಡೆಸಿರುವ ಸಭೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಎಫ್ಐಆರ್‌ ದಾಖಲಿಸಲು ತೀರ್ಮಾನವಾಗಿದೆ. ಅಪಘಾತಗಳು ಸಂಭವಿಸುತ್ತಿರುವುದರಿಂದ ಎಫ್ಐಆರ್ ಕೂಡ ದಾಖಲಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜನವರಿ 15ರೊಳಗೆ ಕಾಮಗಾರಿ ಮುಗಿಸುವುದಾಗಿ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ ಎಂದು ಸಂಸದ ತಿಳಿಸಿದರು.

ನಾನು ಸಂಸದನಾದ ಬಳಿಕ ನಾಲ್ಕೈದು ಬಾರಿ ಸಭೆ ಕರೆದಿದ್ದೇನೆ. ಸ್ಥಳಕ್ಕೆ ನಾಲ್ಕು ಬಾರಿ ಭೇಟಿ ಕೊಟ್ಟಿದ್ದೇನೆ ಎಂದು ತಿಳಿಸಿದರು.

ರೈಲ್ವೆ ಮೇಲ್ಸೇತುವೆ ಕಾಮಗಾರಿ ಅವ್ಯವಸ್ಥೆ ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಂಸದರು ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. ಶಾಸಕ ಯಶ್‌ಪಾಲ್‌ ಸುವರ್ಣ ಜೊತೆಗಿದ್ದರು.

ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದು

‘ಎನ್‌ಡಿಎ ಅಭ್ಯರ್ಥಿ ಗೆಲ್ಲುವ ವಿಶ್ವಾಸ’ ಸಿ.ಪಿ. ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ ರಾಜಕಾರಣದಲ್ಲಿ ತರ್ಕ ಚರ್ಚೆ ಬೆಳವಣಿಗೆಗಳು ಆಗುವುದು ಸಹಜ. ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಎನ್‌ಡಿಎಯಿಂದ ಯಾರನ್ನು ನಿಲ್ಲಿಸಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಒಟ್ಟಾರೆ ಈ ಚುನಾವಣೆ ಸುಖಾಂತ್ಯವಾಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.