ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಸಾಕಷ್ಟು ಕೆರೆಕಟ್ಟೆ, ಜಲ ಮೂಲಗಳಿದ್ದರೂ ಒಳನಾಡು ಮೀನು ಕೃಷಿಗೆ ಇಲ್ಲಿನ ರೈತರು ಉತ್ಸಾಹ ತೋರಿಸುತ್ತಿಲ್ಲ.
ಒಳನಾಡು ಮೀನು ಕೃಷಿ ಲಾಭದಾಯಕವಾದರೂ ಜಿಲ್ಲೆಯಲ್ಲಿ ಕೇವಲ 18 ಮಂದಿ ರೈತರು ಮಾತ್ರ ಈ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಟ್ಲಾ, ರೋಹು, ಕಾಮನ್ ಕಾರ್ಪ್ (ಸಾಮಾನ್ಯ ಗೆಂಡೆ), ಬೆಳ್ಳಿ ಗೆಂಡೆ, ಮೃಗಾಲ್, ಗೌರಿ ಮೀನುಗಳನ್ನು ಹೆಚ್ಚಾಗಿ ಒಳನಾಡಿನಲ್ಲಿ ಸಾಕಣೆ ಮಾಡಲಾಗುತ್ತದೆ ಆದರೆ, ಕರಾವಳಿಯಲ್ಲಿ ಇಂತಹ ಕೆರೆ ಮೀನುಗಳಿಗೆ ಸಾಕಷ್ಟು ಬೇಡಿಕೆ ಇಲ್ಲದಿರುವುದು ಮತ್ತು ಸೂಕ್ತ ಮಾರುಕಟ್ಟೆ ಇಲ್ಲದಿರುವುದರಿಂದ ಮೀನು ಕೃಷಿಗೆ ಯಾರೂ ಮುಂದಾಗುತ್ತಿಲ್ಲ.
ಪ್ರಾಕೃತಿಕವಾಗಿರುವ ಕೆರೆಗಳಲ್ಲೂ, ಪ್ಲಾಸ್ಟಿಕ್ ಶೀಟ್ ಹಾಕಿ ಕೃತಕ ಕೆರೆಗಳನ್ನು ನಿರ್ಮಿಸಿಯೂ ಮೀನು ಸಾಕಣೆ ಮಾಡಲು ಇಲ್ಲಿ ಅವಕಾಶಗಳಿವೆ. ಹೀಗೆ ಮಾಡಿ ಯಶಸ್ಸು ಸಾಧಿಸಿದ ಸಾಕಷ್ಟು ಮಂದಿ ರೈತರು ಬೇರೆ ಜಿಲ್ಲೆಗಳಲ್ಲಿದ್ದಾರೆ. ಮೀನುಗಾರಿಕಾ ಇಲಾಖೆಯು ಉತ್ತೇಜನ ನೀಡಿದರೂ ರೈತರು ಮಾತ್ರ ಇದರತ್ತ ಚಿತ್ತ ಹರಿಸುವುದಿಲ್ಲ.
ಸಿಗಡಿ ಸಾಕಣೆ ಮತ್ತು ಹಿನ್ನೀರುಗಳಲ್ಲಿ ನಡೆಸುವ ಪಂಜರ ಮೀನು ಕೃಷಿಗಾದರೂ ಒಲವು ತೋರುತ್ತಾರೆ ಆದರೆ ಒಳನಾಡು ಮೀನು ಕೃಷಿಯ ಕಡೆ ರೈತರು ಮುಖ ಮಾಡುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಒಳನಾಡು ಮೀನು ಕೃಷಿ ನಡೆಸುವವರ ಸಂಖ್ಯೆ ಕಡಿಮೆ ಇರುವುದರಿಂದ, ಮೀನುಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಇಂತಹ ಮೀನು ಕೃಷಿ ನಡೆಸುವವರ ಸಂಘಗಳೂ ಅಸ್ಥಿತ್ವದಲ್ಲಿಲ್ಲ. ಇದರಿಂದಾಗಿ ಈ ಬಗ್ಗೆ ಹೆಚ್ಚಿನ ರೈತರು ಆಸಕ್ತಿ ತೋರಿಸುತ್ತಿಲ್ಲ.
ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳ ಜನರು ಒಳನಾಡು ಮತ್ಸಗಳನ್ನೇ ಇಷ್ಟ ಪಡುತ್ತಾರೆ. ಈ ರಾಜ್ಯಗಳಿಂದ ಬಂದು ಜಿಲ್ಲೆಯಲ್ಲಿ ದುಡಿಯುವ ಸಾಕಷ್ಟು ಮಂದಿ ಇದ್ದಾರೆ ಇವರು ಮೀನು ಸಾಕಣೆ ನಡೆಸುವವರಲ್ಲಿಗೆ ಹೋಗಿ ಈ ಮೀನುಗಳನ್ನು ಖರೀದಿಸುತ್ತಾರೆ.
ಕಟ್ಲಾ, ರೋಹು, ಕಾಮನ್ ಕಾರ್ಪ್ ಮೊದಲಾದ ಮೀನುಗಳ ಮರಿಗಳನ್ನು ಕೆರೆಗೆ ಬಿಟ್ಟರೆ ಆ ಮೀನುಗಳು ಮಾರಾಟಕ್ಕೆ ಯೋಗ್ಯವಾಗಲು ಎಂಟು ತಿಂಗಳಿಂದ ಒಂದು ವರ್ಷ ಬೇಕಾಗುತ್ತದೆ.
ವ್ಯವಸ್ಥಿತವಾಗಿ ಮಾಡಿದರೆ ಹೆಚ್ಚು ಲಾಭ: ಒಳನಾಡು ಮೀನು ಕೃಷಿ ಮಾಡಿ ಖಂಡಿತವಾಗಿಯೂ ಲಾಭ ಪಡೆಯಬಹುದು. ಮೀನು ಸಾಕಣೆ ಜೊತೆಗೆ ದನಗಳನ್ನೂ ಸಾಕಿದರೆ ಅದರ ಗಂಜಲವನ್ನು ಕೆರೆಗೆ ಹರಿಯಲು ಬಿಟ್ಟರೆ ಅಲ್ಲಿ ಪಾಚಿ ಬೆಳೆಯುತ್ತದೆ. ಅದು ಮೀನುಗಳಿಗೆ ಉತ್ತಮ ಆಹಾರ ಎನ್ನುತ್ತಾರೆ ಒಳನಾಡು ಮೀನು ಕೃಷಿ ಮಾಡಿ ಯಶಸ್ವಿಯಾಗಿರುವ ಕುಕ್ಕೇಹಳ್ಳಿಯ ಕೆ. ಮಹೇಶ್ ಹೆಬ್ಬಾರ್.
ನಾನು ಹಲವು ವರ್ಷಗಳಿಂದ ಮೀನು ಕೃಷಿ ಮಾಡುತ್ತಿದ್ದೇನೆ ಮತ್ತು ಅದಕ್ಕೆ ಸ್ಥಳೀಯವಾಗಿಯೇ ಮಾರುಕಟ್ಟೆ ಸೃಷ್ಟಿಸಿದ್ದೇನೆ. ಇಲ್ಲಿ ನೆಲೆಸಿರುವ ಉತ್ತರ ಭಾರತೀಯರು ಸೇರಿದಂತೆ ಹಲವರು ಮೀನು ಸಾಕಣೆ ನಡೆಸುವ ಸ್ಥಳಕ್ಕೆ ಬಂದು ಖರೀದಿಸುತ್ತಿದ್ದಾರೆ. ವಾಟ್ಸ್‌ಆ್ಯಪ್ ಮೂಲಕವೇ ಅವರಿಗೆ ಮಾಹಿತಿ ನಿಡುತ್ತೇನೆ ಎನ್ನುತ್ತಾರೆ ಅವರು.
ಜಿಲ್ಲೆಯಲ್ಲಿ ಹೆಚ್ಚು ರೈತರು ಮೀನು ಕೃಷಿಯಲ್ಲಿ ತೊಡಗಿಸಿಕೊಂಡರೆ ಆ ಮೀನುಗಳನ್ನು ಉತ್ತರ ಭಾರತಕ್ಕೂ ಕಳುಹಿಸಿ ಮಾರುಕಟ್ಟೆ ಸೃಷ್ಟಿಸಬಹುದು ಎಂದೂ ಅವರು ಆಶಯ ವ್ಯಕ್ತಪಡಿಸಿದರು.
ಸಿಗಡಿ ಕೃಷಿಗೆ ಪ್ರೋತ್ಸಾಹಧನ: ‘ಸಿಗಡಿ ಕೃಷಿ ಮಾಡುವವರಿಗೆ ಇಲಾಖೆಯು ಹೆಕ್ಟೇರ್‌ಗೆ ₹50 ಸಾವಿರದಂತೆ ಪ್ರೋತ್ಸಾಹ ಧನ ನೀಡುತ್ತಿದೆ. ಮತ್ತು ಸಿಗಡಿಗೆ ಬೇಡಿಕೆ ಜಾಸ್ತಿ ಇರುವುದರಿಂದ ಅದನ್ನು ರಫ್ತು ಮಾಡಲಾಗುತ್ತದೆ. ಒಳನಾಡು ಮೀನು ಕೃಷಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಸದ್ಯಕ್ಕೆ ಯಾವುದೂ ಇಲ್ಲ’ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಅಂಜನಾದೇವಿ ಟಿ. ತಿಳಿಸಿದರು.
ರೈತರು ಇತರ ಕೃಷಿಯ ಜೊತೆಗೆ ವ್ಯವಸ್ಥಿತವಾಗಿ ಒಳನಾಡು ಮೀನು ಕೃಷಿ ಮಾಡಿದರೆ ಉತ್ತಮ ಲಾಭ ಪಡೆಯಬಹುದು. ಕೆರೆಗಳಲ್ಲಿ ಬೆಳೆಸುವ ಮೀನುಗಳಿಗೆ ಸ್ಥಳೀಯವಾಗಿಯೂ ಮಾರುಕಟ್ಟೆ ಸೃಷ್ಟಿಸಬಹುದು
-ಕೆ. ಮಹೇಶ್ ಹೆಬ್ಬಾರ್ ಒಳನಾಡು ಮೀನು ಕೃಷಿ ಮಾಡುವ ರೈತ
ಕಡಿಮೆ ಸಂಖ್ಯೆಯ ರೈತರು ಒಳನಾಡು ಮೀನು ಕೃಷಿ ನಡೆಸುವುದರಿಂದ ಇಲ್ಲಿ ಆ ಮೀನುಗಳಿಗೆ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರಲ್ಲಿ ತೊಡಗಿಸಿಕೊಂಡರೆ ಲಾಭ ಪಡೆಯಬಹುದು
-ಅಂಜನಾದೇವಿ ಟಿ. ಉಪ ನಿರ್ದೇಶಕಿ ಮೀನುಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.