ADVERTISEMENT

ಸಾಣೂರು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ

ಲೋಪದೋಷ ನಿವಾರಿಸಲು ಶಾಸಕ ಸುನಿಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:29 IST
Last Updated 30 ಜೂನ್ 2024, 15:29 IST
ಕಾರ್ಕಳ ತಾಲ್ಲೂಕಿನ ಸಾಣೂರು ಮೂಲಕ ಹಾದು ಹೋಗುವ ರಾಹೆ _169 ಯ ಕಾಮಗಾರಿನ್ನು ಶಾಸಕ ವಿ.ಸುನಿಲ್ ಕುಮಾರ್ ಭಾನುವಾರ ಪರಿಶೀಲನೆ ನಡೆಸಿದರು.
ಕಾರ್ಕಳ ತಾಲ್ಲೂಕಿನ ಸಾಣೂರು ಮೂಲಕ ಹಾದು ಹೋಗುವ ರಾಹೆ _169 ಯ ಕಾಮಗಾರಿನ್ನು ಶಾಸಕ ವಿ.ಸುನಿಲ್ ಕುಮಾರ್ ಭಾನುವಾರ ಪರಿಶೀಲನೆ ನಡೆಸಿದರು.   

ಕಾರ್ಕಳ: ತಾಲ್ಲೂಕಿನ ಸಾಣೂರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ಯ ಕಾಮಗಾರಿಯನ್ನು ಶಾಸಕ ಸುನಿಲ್ ಕುಮಾರ್ ಭಾನುವಾರ ಪರಿಶೀಲಿಸಿದರು. 

ಸಾಣೂರು–ಪುಲ್ಕೇರಿ ಬೈಪಾಸ್ ಸರ್ಕಲ್‌ನಿಂದ ಸಾಣೂರು ಪೇಟೆ, ಮುರತಂಗಡಿಯ ತನಕ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಆಗಿರುವ ಲೋಪದೋಷಗಳನ್ನು ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಖ್ಯ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡದೆ ಇರುವ ಕುರಿತು ಅಸಮಾಧಾನಗೊಂಡ ಶಾಸಕರು, ಸ್ಥಳದಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಿಬ್ಬಂದಿ ವಿಚಾರಿಸಿ ಮುಂದಿನ ಭೇಟಿ ಸಂದರ್ಭದಲ್ಲಿ ಸರಿಯಾದ ಮಾಹಿತಿಯೊಂದಿಗೆ ಯೋಜನಾಧಿಕಾರಿ ಹಾಗೂ ಮುಖ್ಯ ಎಂಜಿನಿಯರ್ ಹಾಜರಿರುವಂತೆ ಸೂಚಿಸಿದರು.

ADVERTISEMENT

ಪುಲ್ಕೇರಿ ಬೈಪಾಸ್ ಸರ್ಕಲ್‌ನಲ್ಲಿ ಇಂದಿರಾ ನಗರಕ್ಕೆ ಸಾಗುವ ಅಡ್ಡರಸ್ತೆಯಲ್ಲಿ ಮಳೆ ನೀರು ಹರಿದು ಹೋಗುವಂತೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಮುದ್ದುಕೃಷ್ಣ ಇಂಡಸ್ಟ್ರೀಸ್ ಎದುರಿನ ಡೈವರ್ಶನ್ ತಿರುವು ಅಪಾಯಕಾರಿಯಾಗಿದ್ದು, ಸುರಕ್ಷತಾ ಕ್ರಮ ಕೈಗೊಳ್ಳಿ. ‌ಶ್ರೀನಿವಾಸ ನಗರದ ನಿವಾಸಿ ವಯೋವೃದ್ಧ ಶಿವಾನಂದ ಕುಡ್ವ ಅವರ ನಿವೇಶನದ ಮುಂಭಾಗದ ಟ್ರಾನ್ಸ್‌ಫಾರ್ಮರ್‌, ವಿದ್ಯುತ್ ಕಂಬಗಳು ಓರೆಯಾಗಿ ವಾಲಿದ್ದು ಸುರಕ್ಷತಾ ಕ್ರಮ ಕೈಗೊಂಡು ವಿದ್ಯುತ್‌ ಕಂಬ ಬೀಳದಂತೆ ಎಚ್ಚರಿಕೆ ವಹಿಸುವಂತೆ ದಿಲೀಪ್ ಬಿಲ್ಡ್ ಕಾನ್ ಕನ್ಸ್‌ಸ್ಟಕ್ಷನ್‌ ಮ್ಯಾನೇಜರ್ ಬಾಲಾಜಿ ಅವರಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸಾಣೂರು ಗ್ರಾಮದ 12 ಅಡ್ಡರಸ್ತೆಗಳಿಗೆ ಇಲ್ಲಿವರೆಗೂ ಡಾಂಬರೀಕರಣ ಮಾಡಿ ಸರಿಪಡಿಸದಿರುವ ಕುರಿತು ಸಂಬಂಧಿಸಿದ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶಿಸಿದರು.

ಸಾಣೂರು ಯುವಕ ಮಂಡಲದ ಮೈದಾನದ ಎದುರು ಭಾಗದಿಂದ ಮುದ್ದಣ್ಣ ನಗರ ಅಡ್ಡ ರಸ್ತೆ ತನಕ 200 ಮೀ.ಗಳಷ್ಟು ಗುಡ್ಡ ಕಡಿದಿರುವ ಜಾಗದ ಮಣ್ಣು ಸಡಿಲವಾಗಿ ರಸ್ತೆಗೆ ಬೀಳುತ್ತಿದ್ದು, ಪಕ್ಕದಲ್ಲಿರುವ ಒಂದು ಲಕ್ಷ ಲೀ. ಸಂಗ್ರಹಣಾ ಸಾಮರ್ಥ್ಯದ ಎರಡು ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಹಾಗೂ ಪಕ್ಕದ ತೆರೆದ ಬಾವಿ ಅಪಾಯಕಾರಿ ಸ್ಥಿತಿಯಲ್ಲಿರುವುದಕ್ಕೆ ಅಸಮಾಧಾನಗೊಂಡ ಶಾಸಕ ಸುನಿಲ್‌, ಕಳೆದ ವರ್ಷವೇ ಈ ಕುರಿತು ಎಚ್ಚರಿಸಿದ್ದರೂ ನಿರ್ಲಕ್ಷ್ಯ ತೋರಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಗುತ್ತಿಗೆದಾರ ಕಂಪನಿಯ ಕಾರ್ಯನಿರ್ವಹಣೆ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮುರತಂಗಡಿ ಶುಂಠಿ ಗುಡ್ಡೆ ಸಂಪರ್ಕ ರಸ್ತೆ ಸಮೀಪದ ರತ್ನಾಕರ ಕಾಮತ್ ಅವರ ಮನೆಗೆ ಮಳೆ ನೀರು ನುಗ್ಗಿ ₹3.5 ಲಕ್ಷ ನಷ್ಟ ಪರಿಹಾರ ಭರಿಸುವಂತೆ ಗುತ್ತಿಗೆದಾರ ಕಂಪನಿಗೆ ನಿರ್ದೇಶಿಸಿದರು.

ಜುಲೈ 12ರಂದು ನಡೆಯಲಿರುವ ಜನಸ್ಪಂದನ ಕಾರ್ಯಕ್ರಮ ಮುಗಿದ ನಂತರ ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಜಿಲ್ಲಾಧಿಕಾರಿ, ಸಂಸದ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾಧಿಕಾರಿ, ಎಂಜಿನಿಯರ್ ಹಾಗೂ ಸಂಸ್ಥೆಯ ಜನರಲ್ ಮ್ಯಾನೇಜರ್ ಸಹಿತ ಇತರ ಉನ್ನತ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲು ಸೂಚಿಸಿದರು.

ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ್ ಜೈನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧು ಎಂ.ಸಿ., ಪಂಚಾಯಿತಿ ಸದಸ್ಯರಾದ ಪ್ರಸಾದ್ ಪೂಜಾರಿ, ಸತೀಶ್ ಪೂಜಾರಿ, ಪ್ರಮೀಳಾ, ಸಾಣೂರು ನರಸಿಂಹ ಕಾಮತ್, ಸುಜಾತಾ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.