ಕುಂದಾಪುರ: ವಾರಾಹಿ ಯೋಜನೆಯ ಉಪಯೋಗ ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ಆಗದಿರುವ ಹಾಗೂ ಕ್ಷೇತ್ರಕ್ಕೆ ಸಮರ್ಪಕವಾಗಿ ನೀರು ತಲುಪದೇ ಇರುವುದರ ಕುರಿತು ಶಾಸಕ ಗುರುರಾಜ್ ಗಂಟಿಹೊಳೆ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದಾಪುರದ ವಾರಾಹಿ ಯೋಜನಾ ಕಚೇರಿಯಲ್ಲಿ ನಡೆದ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಗ್ರಾಮಗಳಿಗೆ ವಾರಾಹಿ ನೀರುಣಿಸಲು ಇರುವ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳಲ್ಲಿ ಕೇಳಿದಾಗ, ನೀರು ಒದಗಿಸುವ ಕುರಿತಂತೆ ಸ್ಪಷ್ಟ ಯೋಜನೆ ಇಲ್ಲದೇ ಇರುವುದನ್ನು ಹಾಗೂ ನೀರುಣಿಸಲು ಅಗತ್ಯವಾದ ಪ್ರಸ್ತಾವನೆ ಸರ್ಕಾರಕ್ಕೆ ತಲುಪಿಸದಿರುವುದನ್ನು ಗಮನಿಸಿದ ಶಾಸಕರು, ಕ್ಷೇತ್ರಕ್ಕೆ ವಾರಾಹಿ ನೀರು ಒದಗಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು. ಅಗತ್ಯವಿದ್ದಲ್ಲಿ ಹೊಸದಾಗಿ ಯೋಜನೆ ರೂಪಿಸಿ ಕಾರ್ಯಗತ ಮಾಡುವ ನಿಟ್ಟಿನಲ್ಲಿಯೂ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಾರಾಹಿ ನೀರು ಬಾರದೆ ಇರುವ ಯೋಜನೆ ವಂಚಿತ ಗ್ರಾಮಗಳು, ಅಲ್ಪ ಸ್ವಲ್ಪ ನೀರು ಬರುತ್ತಿರುವ ಭಾಗಶಃ ವಂಚಿತ ಗ್ರಾಮಗಳು ಹಾಗೂ ಕಾಲುವೆ ಹೋಗಿದ್ದರೂ ನೀರು ದೊರಕದೆ ಇರುವ ಸಂತ್ರಸ್ತ ಗ್ರಾಮಗಳು ಎಂದು 3 ವರ್ಗಗಳಾಗಿ ವಿಂಗಡಿಸಿ ಪಟ್ಟಿ ಮಾಡಲಾಗಿದೆ. ಈ ಮೂರು ವರ್ಗದ ಗ್ರಾಮಕ್ಕೂ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸಲು ಬೇಕಾದ ಹೋರಾಟ ರೂಪಿಸಲಿದ್ದೇವೆ ಎಂದರು.
ರೈತರಿಗೆ ಅನುಕೂಲವಾಗಲಿ ಎನ್ನುವುದಕ್ಕಾಗಿ ಹೋರಾಟ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ಈಗಾಗಲೇ ಸಿದ್ದಾಪುರ ಭಾಗದಲ್ಲಿ ಒಂದು ಸಭೆ ನಡೆಸಿದೆ. ಸಭೆಯಲ್ಲಿನ ನಿರ್ಧಾರದಂತೆ ಹೋರಾಟದ ರೂಪರೇಷೆ ಸಿದ್ಧಪಡಿಸಲಿದ್ದೇವೆ ಎಂದು ಶಾಸಕರು ತಿಳಿಸಿದ್ದಾರೆ.
ವಾರಾಹಿ ಯೋಜನೆಯ ಅಧೀಕ್ಷಕ ಎಂಜಿನಿಯರ್ ಪ್ರವೀಣ್, ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಶೇಟ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಪಡ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.