ADVERTISEMENT

ಕರಾವಳಿಯ ಧ್ವನಿಯಾದ ಐವನ್ ಡಿಸೋಜ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 7:23 IST
Last Updated 8 ಜುಲೈ 2024, 7:23 IST
ವಿಧಾನ ಪರಿಷತ್‌ಗೆ ಚುನಾಯಿತರಾದ ಐವನ್ ಡಿಸೋಜಾ ಅವರಿಗೆ ಭಾನುವಾರ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ವಿಧಾನ ಪರಿಷತ್‌ಗೆ ಚುನಾಯಿತರಾದ ಐವನ್ ಡಿಸೋಜಾ ಅವರಿಗೆ ಭಾನುವಾರ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ಉಡುಪಿ: ಐವನ್ ಡಿಸೋಜ ಅವರು ಪರರಿಗಾಗಿ ಮಿಡಿಯುವ ಹೃದಯವಂತಿಕೆ ಉಳ್ಳವರಾಗಿದ್ದು, ಜನಸಾಮಾನ್ಯರ ಹಕ್ಕುಗಳಿಗಾಗಿ ಧ್ವನಿ ಎತ್ತುವ ಕರಾವಳಿಯ ಧ್ವನಿಯಾಗಿದ್ದಾರೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ವಿಧಾನ ಪರಿಷತ್ತಿಗೆ ಚುನಾಯಿತರಾದ ಐವನ್ ಡಿಸೋಜಾ ಅವರಿಗೆ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್, ಉಡುಪಿ, ಸಿಎಸ್ಐ, ಯುಬಿಎಂಸಿ, ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ಗಳು, ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ , ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ, ಭಾರತೀಯ ಕಥೊಲಿಕ್ ಯುವ ಸಂಚಾಲನ, ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕರು ಜಂಟಿಯಾಗಿ ಮಿಷನ್ ಕಾಂಪೌಂಡ್‌ನ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೇ ನಾಯಕತ್ವ ಗುಣ ಮೈಗೂಡಿಸಿಕೊಂಡಿರುವ ಐವನ್ ಡಿಸೋಜ ಅವರು ಧ್ವನಿ ಇಲ್ಲದವರ ಧ್ವನಿಯಾಗಿ ಅವರ ಹಕ್ಕುಗಳನ್ನು ಒದಗಿಸಿಕೊಡುವಲ್ಲಿ ಮುಂದೆಯೂ ಸೇವೆ ಮುಂದುವರೆಸುವಂತಾಗಲಿ ಎಂದರು.

ADVERTISEMENT

ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜ, ನಾನು ಎಲ್ಲಾ ವರ್ಗ, ಧರ್ಮದವರ ಶಾಸಕ. ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾದರೆ ಮೊದಲಿಗನಾಗಿ ದನಿ ಎತ್ತುವ ಕೆಲಸ ಮಾಡಲಿದ್ದೇನೆ. ರಾಜಕಾರಣ ಇಂದು ಹೂವಿನ ಹಾಸಿಗೆಯಾಗಿರದೆ ಮುಳ್ಳಿನ ಹಾಸಿಗೆ ಕೂಡ ಆಗಿದೆ. ಇಂದು ದ್ವೇಷ, ಜಾತಿ ಧರ್ಮದ ಆಧಾರದಲ್ಲಿ ಜನರ ಬದುಕಿನಲ್ಲಿ ಸಮಸ್ಯೆ ತಂದಲ್ಲಿ ಅದರ ವಿರುದ್ದ ದನಿ ಎತ್ತಲಿದ್ದೇನೆ. ಅಭಿವೃದ್ಧಿ ಪರ ಕನಸು ಕಂಡಾಗ ಜನರು ಎಂದಿಗೂ ಕೂಡ ನಮ್ಮ ಕೈಬಿಡುವುದಿಲ್ಲ ಮುಂದಿನ 6 ವರ್ಷಗಳ ಕಾಲ ಎಲ್ಲಾ ಸಮುದಾಯದ ಪರ ಕೆಲಸ ಮಾಡುವುದಾಗಿ ಹೇಳಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಐವನ್ ಡಿಸೋಜ ಅವರು ವಿದ್ಯಾರ್ಥಿ ಜೀವನದಿಂದಲೇ ತಮ್ಮ ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಳ್ಳದೆ ನಿರಂತರ ಜನಸೇವೆ ಮಾಡಿಕೊಂಡು ಬಂದವರು. ಮೊದಲ ಬಾರಿ ವಿಧಾನ ಪರಿಷತ್‌ನಲ್ಲಿ ಸದಸ್ಯರಾಗಿದ್ದಾಗ ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳುವುದರ ಮೂಲಕ ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದವರು ಎಂದರು.

ಸಿಎಸ್‌ಐ ಕೆಎಸ್‌ಡಿ ಉಡುಪಿ ವಲಯ ಕೌನ್ಸಿಲ್‌ನ ವಲಯ ಮುಖ್ಯಸ್ಥ ಐವನ್ ಡಿಸೋನ್ಸ್, ಉಡುಪಿ ಜಿಲ್ಲಾ ಫುಲ್ ಗೊಸ್ಪೆಲ್ ಪಾಸ್ಟರ್ ಅಸೋಸಿಯೇಶನ್ ಅಧ್ಯಕ್ಷರಾದ ಪಾಸ್ಟರ್ ಸೆಲ್ವಕುಮಾರ್, ಸೈಂಟ್ ಮೇರಿಸ್ ಸೀರಿಯ್ ಕ್ಯಾಥೆಡ್ರಲ್ ಬ್ರಹ್ಮಾವರ ಇದರ ಪ್ರತಿನಿಧಿ ಎಂಟನಿ ಡಿಸಿಲ್ವಾ, ಯುನೈಟೆಡ್ ಬಾಸೆಲ್ ಮಿಶನ್ ಉಡುಪಿ ಜಿಲ್ಲಾ ಚರ್ಚ್ ಬೋರ್ಡ್ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಇದರ ಮುಖ್ಯಸ್ಥ  ವಿಜಯ್ ಹಾರ್ವಿನ್, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಮಹಿಳಾ ಸಂಘಟನೆ ಅಧ್ಯಕ್ಷೆ ಗ್ರೇಸಿ ಕುವೆಲ್ಲೊ, ಯುನೈಟೆಡ್‌ ಕ್ರಿಶ್ಚಿಯನ್ ಫೋರಂ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ, ಐಸಿವೈಎಂ ಅಧ್ಯಕ್ಷರಾದ ಗೊಡ್ವಿನ್ ಮಸ್ಕರೇನ್ಹಸ್ ಇದ್ದರು.

ಕಾರ್ಯಕ್ರಮದ ಸಂಚಾಲಕರಾದ  ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಸಂಘಟಕಿ ವೆರೋನಿಕಾ ಕರ್ನೆಲಿಯೊ ಸನ್ಮಾನಿತರ ಪರಿಚಯ ಮಾಡಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಸಂತೋಷ್ ಕರ್ನೆಲಿಯೊ ವಂದಿಸಿದರು. ಸುಚಿತ್ ಕೋಟ್ಯಾನ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.