ಬ್ರಹ್ಮಾವರ: ಹಲಸಿನ ಹಣ್ಣಿನ ಹೋಳಿಗೆ, ತರಹೇವಾರಿ ಗಿಡಗಳು, ವಿವಿಧ ಜಾತಿಯ ಹಣ್ಣುಗಳು, ಐಸ್‌ಕ್ರೀಂ ಹೀಗೆ ವಿವಿಧ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿ ಸಂಜೆ ಒಳಗೆ ಹೆಚ್ಚಿನ ಮಳಿಗೆಗಳು ಖಾಲಿಯಾದ ದೃಶ್ಯ ಬ್ರಹ್ಮಾವರದಲ್ಲಿ ನಡೆದ ಹಲಸಿನ ಮೇಳದಲ್ಲಿ ಕಂಡು ಬಂತು.
ಬ್ರಹ್ಮಾವರ ರೋಟರಿ ಕ್ಲಬ್, ಬಾರ್ಕೂರು ರೋಟರಿ ಕ್ಲಬ್ ಮತ್ತು ಐಸಿಎಆರ್ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಹಲಸು ಮತ್ತು ಹಣ್ಣುಮೇಳದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು.
ಮಂಗಳೂರಿನ ಲಕ್ಷ್ಮೀ ಆಚಾರ್ಯ ಅವರ ಹಲಸಿನ ಹೋಳಿಗೆ ಮಾರಾಟ ಮಳಿಗೆಯಲ್ಲಿ 2,500ಕ್ಕೂ ಅಧಿಕ ಹೋಳಿಗೆ ಮಾರಾಟವಾಗಿದ್ದು ವಿಶೇಷ
ವಾಗಿತ್ತು. ಮಳೆಯ ನಡುವೆ ಬ್ರಹ್ಮಾವರ ಆಸುಪಾಸಿನ ಜನ ಬಿಸಿಬಿಸಿ ಹೋಳಿಗೆ ಜತೆ ಮುಳ್ಕ, ಮಂಚೂರಿ, ಕಬಾಬ್‌ಗಳ ರುಚಿಯನ್ನೂ ಸವಿದರು.
ತುಮಕೂರಿನ ನರಸಿಂಹ ಮೂರ್ತಿ ಸುಮಾರು 8 ಟನ್‌ಗಳಷ್ಟು ಹಲಸಿನ ಹಣ್ಣು ತಂದಿದ್ದು, ಸಂಜೆಯ ಒಳಗೆ ಸುಮಾರು 7 ಟನ್‌ಗಳಷ್ಟು ಮಾರಾಟ ಮಾಡಿದರು. ನಂದು ಹಲಸು, ನಾಗು ಹಲಸು, ಚಂದ್ರ ಹಲಸಿನಂತಹ ಅಪರೂಪದ ಹಣ್ಣಿಗೆ ಇಲ್ಲಿ ಬೇಡಿಕೆ ಹೆಚ್ಚಿತ್ತು. ಪುತ್ತೂರಿನ ನ್ಯಾಚುರಲ್ ಐಸ್‌ಕ್ರೀಂ ಮತ್ತು ಉಪ್ಪಿನಂಗಡಿಯ ಕೈಲಾರ್ ನ್ಯಾಚುರಲ್ ಐಸ್‌ಕ್ರೀಂ ಮಳಿಗೆಯಲ್ಲೂ ಭರ್ಜರಿ ವ್ಯಾಪಾರವಾಯಿತು.
ನರ್ಸರಿ ಗಿಡಗಳಿಗೆ ಭಾರೀ ಬೇಡಿಕೆ: ಒಂದೇ ವರ್ಷದಲ್ಲಿ ಫಲ ನೀಡುವ ಗಿಡಗಳಿಗೆ ಮೇಳದಲ್ಲಿ ಭಾರೀ ಬೇಡಿಕೆ ಇತ್ತು ಎಂದು ಕನ್ನಾರಿನ ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್ ಪ್ರತಿಕ್ರಿಯೆ ನೀಡಿದರು. ಇವರ ಮಳಿಗೆಯಲ್ಲಿದ್ದ ವಿಯೆಟ್ನಾಂ ಸೂಪರ್ ಅರ್ಲಿ, ಪ್ರಕಾಶ್ ಚಂದ್ರ, ಜೆ33, ಚಂದ್ರ ಬೊಕ್ಕೆ, ಗಮ್ ಲೆಸ್, ಥೈವಾನ್ ಪಿಂಕ್ ಮುಂತಾದ ಹಲಸಿನ ಗಿಡಗಳು ಹೆಚ್ಚು ಮಾರಾಟವಾಗಿದ್ದವು.
ಉಳಿದಂತೆ ಹಲಸಿನ ಹಪ್ಪಳ, ಸಂಡಿಗೆ, ಹಲಸಿನ ಪಾನಿಪೂರಿ, ಹಲಸಿನ ಮಂಚೂರಿ, ಹಲಸಿನ ಕೇಕ್, ಹಲಸಿನ ಹಲ್ವಾ ಹೀಗೆ ಹಲಸಿನ ಬಹುತೇಕ ತಿಂಡಿ ತಿನಿಸುಗಳನ್ನು ಈ ಮೇಳದಲ್ಲಿ ಪರಿಚಯಿಸಲಾಯಿತು. ಗ್ರಾಹಕರೂ ಉತ್ಪನ್ನಗಳನ್ನು ಹೆಚ್ಚು ಖರೀದಿಸಿದರು.
ಹಲಸಿನ ಉತ್ಪನ್ನಗಳೊಂದಿಗೆ ಇತರೆ ಗೃಹೋಪಯೋಗಿ ವಸ್ತುಗಳ ಮಾರಾಟವು ಜೋರಿತ್ತು. ಕೃಷಿಕರು ಮತ್ತು ಗ್ರಾಮೀಣ ಭಾಗದ ಸ್ವ ಉದ್ಯೋಗಸ್ಥರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿದ ರೋಟರಿ ಕ್ಲಬ್‌ನ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದವು.
ಸ್ವಉದ್ಯೋಗಕ್ಕೆ ನೆರವು
ದಲ್ಲಾಳಿಗಳಿಗೆ ಮಾರಾಟ ಮಾಡಿ ಅಲ್ಪ ಲಾಭ ಕಂಡುಕೊಳ್ಳುತ್ತಿದ್ದ ವ್ಯಾಪಾರಸ್ಥರು ಇಂತಹ ಮೇಳಗಳಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ. ಇಂತಹ ಸ್ವಉದ್ಯೋಗಸ್ಥರು ಮತ್ತು ಹಲಸು ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮೂರು ಕಡೆಗಳಲ್ಲಿ ಹಲಸು ಮೇಳ ಆಯೋಜಿಸಲಾಗಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎನ್ನುತ್ತಾರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ.
‘ವಿದೇಶಕ್ಕೂ ಹಲಸಿನ ಪರಿಚಯ’
ವಿದೇಶದಲ್ಲಿ ಹಲಸಿನ ಹಣ್ಣಿನ ಬಗ್ಗೆ ಗೊತ್ತೇ ಇಲ್ಲದ ಒಂದು ಕಾಲವಿತ್ತು. ಆದರೆ ಈಗ ಇಲ್ಲಿಯ ಹಲಸಿನ ಹಣ್ಣು ವಿದೇಶಿಯರಿಗೆ ಪರಿಚಿತವಾಗಿ ಆರೋಗ್ಯಕ್ಕೆ ಉತ್ತಮ ಎಂದು ಸಾಬೀತುಪಡಿಸಿದೆ ಎಂದು ಮೇಳ ಉದ್ಘಾಟಿಸಿದ ರೋಟರಿ ಜಿಲ್ಲಾ ಗವರ್ನರ್ ಡಾ.ಜಯಗೌರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.