ಕುಂದಾಪುರ: ಅಲ್ಲಿ ವಯಸ್ಸಿನ ಅಂತರವಿರಲಿಲ್ಲ. ದೊಡ್ಡವರು, ಚಿಕ್ಕವರು ಎನ್ನುವ ಭೇದ ಭಾವವಿರಲಿಲ್ಲ. ಓಡಬೇಕು, ಆಡಬೇಕು, ಗೆಲ್ಲಬೇಕು ಎನ್ನುವ ಹುಮ್ಮಸ್ಸು ಮಾತ್ರ ಇತ್ತು.
ಈ ದೃಶ್ಯಗಳಿಗೆ ಸಾಕ್ಷಿಯಾದುದು ತಾಲ್ಲೂಕಿನ ಕಟ್ಕೇರೆಯಲ್ಲಿ ಭಾನುವಾರ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಕುಂದಾಪುರ, ಬೈಂದೂರು ವಲಯದ ಆಶ್ರಯದಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟ ‘ಕಲರವ–2024’ರಲ್ಲಿ.
ಗದ್ದೆಯಲ್ಲಿ ತುಂಬಿದ ಕೆಸರಿನಲ್ಲಿ ಆಡಬೇಕು ಎನ್ನುವ ಉತ್ಸಾಹಿ ಫೋಟೊಗ್ರಾಫರ್ಸ್‌ಗಳಿಗೆ ಅದುವೇ ಕ್ರೀಡಾಂಗಣ. ಪಾದದಿಂದ ತಲೆವರೆಗೂ ಕೆಸರು ಮೆತ್ತಿಕೊಂಡು ಗದ್ದೆಯಲ್ಲಿ ಓಡುತ್ತ ಪದಕ ಗೆಲ್ಲುವುದೇ ಒಂದು ರೀತಿಯ ಖುಷಿ. ಕೆಸರುಗದ್ದೆಯಲ್ಲಿ ಕ್ರೀಡಾ ಸಾರ್ಮರ್ಥ್ಯ ಪ್ರದರ್ಶಿಸುವ ಮನೆಯವರ ಕಸರತ್ತನ್ನು ನೋಡಲು ಗದ್ದೆಯ ಅಂಚಿನಲ್ಲಿ ನಿಂತಿದ್ದ ಮನೆಮಂದಿಯ ಕಣ್ಣಿಗೆ ಒಂದಿನಿತು ವಿಶ್ರಾಂತಿ ಇಲ್ಲ.
40 ವರ್ಷ ವಯೋಮಾನದ ಕೆಳಗಿನವರದ್ದು ಒಂದು ಗುಂಪಾದರೆ, 40 ವರ್ಷ ವಯಸ್ಸು ದಾಟಿದವರದ್ದು ಇನ್ನೊಂದು ಗುಂಪು. ಅವರ ಆಟ–ಓಟದ ಹುಮ್ಮಸ್ಸು ನೋಡುವುದೇ ಚಂದ. 100 ಮೀ. ಓಟ, ಮೂರು ಕಾಲು ಓಟ, ಉಪ್ಪು ಮುಡಿ ಓಟ, ಹಿಮ್ಮುಕ ಓಟ ಸೇರಿದಂತೆ ಹತ್ತಾರು ಆಟಗಳು ಸ್ಪರ್ಧೆಯ ಮೆರುಗು ಹೆಚ್ಚಿಸಿತ್ತು.
ಕೆಸರಿನಲ್ಲಿ ಮಿಂದೆದ್ದ ಮಿತ್ರರು ಪರಸ್ಪರ ಕೆಸರು ಎರಚಿಕೊಂಡು ಸಂಭ್ರಮಿಸಿದರು. ಧ್ವನಿವರ್ಧಕದಲ್ಲಿ ಬರುತ್ತಿದ್ದ ಹಾಡಿಗೆ ಕುಣಿದು ಸಂಭ್ರಮಿಸಿದರು. ಕೆಸರು ಸ್ವಚ್ಛಗೊಳಿಸಲು ಕಾರಂಜಿ ವ್ಯವಸ್ಥೆ ಮಾಡಲಾಗಿತ್ತು. ವೀಕ್ಷಕ ವಿವರಣೆ ನೀಡುತ್ತಿದ್ದ ಚಂದ್ರಕಾಂತ್ (ಚನ್ನ ), ಕಿರಣ್ ಬಿಜೂರು ಇನ್ನಿತರರ ಕಂಠದಿಂದ ಹೊರಹೊಮ್ಮುತ್ತಿದ್ದ ಉದ್ಘೋಷಗಳು ಕ್ರೀಡಾಳುಗಳ ಸ್ಪೂರ್ತಿ ಹೆಚ್ಚಿಸುತ್ತಿದ್ದವು. ಅಲ್ಲಿ ಕುಂದಾಪ್ರದ ಗ್ರಾಮೀಣ ಕ್ರೀಡೆಯ ಶ್ರೀಮಂತಿಕೆ ಎದ್ದು ಕಾಣುತ್ತಿತ್ತು.
ಭಾನುವಾರ ನಡೆಯಬೇಕಾಗಿದ್ದ ಕ್ರೀಡಾಕೂಟಕ್ಕೆ ಹಾಕಲಾಗಿದ್ದ ತಗಡು, ಶಾಮಿಯಾನ 2 ದಿನ ಹಿಂದೆ ಬೀಸಿದ್ದ ಭಾರಿ ಗಾಳಿ-ಮಳೆಗೆ ಹಾರಿ ಹೋಗಿದ್ದರೂ, ಉತ್ಸಾಹ ಕಳೆದುಕೊಳ್ಳದ ಸಂಘದವರು ಮತ್ತೆ ಚಪ್ಪರ ನಿರ್ಮಿಸಿ ಕ್ರೀಡಾಕೂಟದ ಕಳೆ ಹೆಚ್ಚಿಸಿದ್ದರು.
ಕುಂದಾಪುರ ವಲಯ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ದಿವಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನಮಠ, ಕೋಶಾಧಿಕಾರಿ ಹರೀಶ್ ಪೂಜಾರಿ ಹಂಗಳೂರು, ಉಪಾಧ್ಯಕ್ಷ ಚಂದ್ರಕಾಂತ್, ಸುರೇಶ್ ಮೊಳಹಳ್ಳಿ, ಕ್ರೀಡಾ ಕಾರ್ಯದರ್ಶಿಗಳಾದ ನವೀನ್ ಪಿ.ಪಿ, ದಿನೇಶ್ ನಾಗೂರು, ರಾಘವೇಂದ್ರ ರಟ್ಟಾಡಿ, ಹೇಮಚಂದ್ರ, ದೊಟ್ಟಯ್ಯ ಪೂಜಾರಿ, ಶ್ರೀಧರ್ ಹೆಗ್ಡೆ, ದಿನೇಶ್ ಗೋಡೆ ನೇತೃತ್ವದಲ್ಲಿ ಕ್ರೀಡಾಕೂಟ ಸಂಘಟಿಸಲಾಗಿತ್ತು.
ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆದಿನೇಶ್ ರಾಯಪ್ಪನಮಠ ಪ್ರಧಾನ ಕಾರ್ಯದರ್ಶಿ ಕುಂದಾಪುರ ವಲಯ ಫೋಟೊಗ್ರಾಫರ್ಸ್ ಅಸೋಸಿಯೇಷನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.