ಮಂಗಳೂರು: ಕನಕದಾಸರ ತತ್ವ, ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸೌಹಾರ್ದಯುತವಾಗಿ ಇರುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಕುರುಬರ ಸಂಘ, ಹಾಲುಮತ ಸಹಕಾರಿ ಸಂಘ, ಹಾಲುಮತ ಕುರುಬರ ಸಂಘ ದ.ಕ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಂಪನಕಟ್ಟೆಯ ಸರ್ಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ನಡೆದ ಕನಕ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಶ್ರೇಷ್ಠ ಸಂತ, ದಾರ್ಶನಿಕ. ಅವರ ಭಕ್ತಿಗೆ ಒಲಿದು ಶ್ರೀಕೃಷ್ಣ ಭಗವಂತ ಉಡುಪಿಯಲ್ಲಿ ಕಿಂಡಿಯ ಮೂಲಕ ದರ್ಶನ ನೀಡಿರುವುದು ಅವರ ಪಾವಿತ್ರ್ಯತೆಗೆ ನಿದರ್ಶನ ಎಂದರು.
ಕನಕದಾಸರ ಜೀವನ, ಸಂದೇಶಗಳ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಶಿವರಾಮ ಶೆಟ್ಟಿ ಅವರು, ಕನಕದಾಸರ ಜೀವನದಲ್ಲಿ ಪರಿವರ್ತನೆ ಎಂಬ ಮುಖ್ಯ ಅಂಶವನ್ನು ಗಮನಿಸಬಹುದು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಾಂಡಲೀಕ, ದಂಡನಾಯಕನಾಗಿದ್ದ ಕನಕ, ತನ್ನ ಪತ್ನಿ, ಮಗುವಿನ ಮರಣದ ದುಃಖ ಮತ್ತು ಯುದ್ಧದ ನೋವಿನಿಂದ ಯೋಧತ್ವವನ್ನು ತ್ಯಜಿಸಿ ದಾಸನಾಗುತ್ತಾನೆ. ಇದು ಅಧಿಕಾರ, ಸಂಪತ್ತು ಮುಂತಾದ ಲೌಕಿಕ ಸುಖದ ತ್ಯಾಗವನ್ನು ಸೂಚಿಸುತ್ತದೆ ಎಂದರು.
ಕಲಿಯಾಗಿದ್ದ ಕನಕದಾಸರು ಕವಿಯಾಗಿ ಸಾರಸ್ವತ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಭಾಗವತ, ಪುರಾಣ, ಮಹಾಭಾರತ, ರಾಮಾಯಣ ಕಾಲದ ಘಟನೆಗಳು, ನೆನಪುಗಳನ್ನು ಅವರ ಕಾಲಕ್ಕೆ ಅನ್ವಯಿಸಿ ಕೃತಿ ರಚಿಸಿದ್ದಾರೆ. ಅವು ಇಂದಿಗೂ ಅನ್ವಯಿಸುತ್ತವೆ. ಮೋಹನ ತರಂಗಿಣಿ ಕೃತಿ ಶೈವ ಹುಡುಗಿ ಉಷೆ ಮತ್ತು ಕೃಷ್ಣನ ಮೊಮ್ಮಗ ಅನಿರುದ್ಧನ ಪ್ರೀತಿಯ ಕಥನವಾಗಿದ್ದು, ಅಂತರಧರ್ಮೀಯ ವಿವಾಹದ ಚಿಂತನೆ ಅದರಲ್ಲಿದೆ. ರಾಮಧಾನ್ಯ ಚರಿತೆಯಲ್ಲಿ ರಾಮನನ್ನು ಪಂಚಾಯಿತಿ ಕಟ್ಟೆಯಲ್ಲಿ ನ್ಯಾಯ ತೀರ್ಮಾನ ಮಾಡುವ ಮುಖ್ಯಸ್ಥನಾಗಿ ಚಿತ್ರಿಸಿದ್ದಾರೆ. ಆಹಾರ ಪದ್ಧತಿ, ಎಲ್ಲರೂ ಶ್ರೇಷ್ಠರು ಎಂಬ ಸಮಾನತೆಯ ಸಂದೇಶ ನೀಡುತ್ತದೆ ಎಂದು ವಿವರಿಸಿದರು.
ನಳಚರಿತ್ರೆಯಲ್ಲಿ ಆದರ್ಶ ದಾಂಪತ್ಯ ಜೀವನದ ಕಥನವನ್ನು ಕಟ್ಟಿಕೊಟ್ಟಿರುವ ಕನಕದಾಸರು, ಹರಿಭಕ್ತಿಸಾರದಲ್ಲಿ ಭಗವಂತನಲ್ಲಿ ‘ನಮ್ಮನ್ನು ರಕ್ಷಿಸು ಅನವರತ...’ ಎಂದು ಬೇಡುತ್ತಾ ಸಾಮುದಾಯಿಕ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರ ಕೃತಿಗಳಲ್ಲಿ ಒಳಗೊಳ್ಳುವಿಕೆಯ ವಿನ್ಯಾಸವನ್ನು ಕಾಣಬಹುದಾಗಿದ್ದು, ಸಾಮರಸ್ಯ, ಸೌಹಾರ್ದದ ಅಂಶಗಳಿವೆ ಎಂದು ಶಿವರಾಮ ತಿಳಿಸಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಜಿ.ಎಸ್. ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ತಹಶೀಲ್ದಾರ್ ಚೌಧರಿ, ಕರಾವಳಿ ಕುರುಬರ ಸಂಘದ ಅಧ್ಯಕ್ಷ ಕೆ.ಎನ್. ಬಸವರಾಜು, ಹಾಲುಮತ ಸಹಕಾರಿ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜು ಎಚ್, ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ ಜಿ. ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.