ಉಡುಪಿ: ‘ಕನಕದಾಸರು ತಮ್ಮ ಮಾತು ಹಾಗೂ ಸಂಗೀತದ ಮೂಲಕ ಜನರನ್ನು ಜಾಗೃತಗೊಳಿಸುವುದರ ಜೊತೆಗೆ ಅಸಮಾನತೆ ಭಾವವನ್ನು ದೂರಗೊಳಿಸಿ ಸುಂದರ ಸಮಾಜ ನಿಮಾರ್ಣಗೊಳ್ಳುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ. ಕನಕನ ಸಂದೇಶ ಸರ್ವವ್ಯಾಪಿ ಹಾಗೂ ಸರ್ವ ಸ್ಪರ್ಶಿಯಾಗಿದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಅಜ್ಜರಕಾಡುವಿನ ಭುಜಂಗ ಪಾರ್ಕ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ ಹಾಗೂ ಹಾಲುಮತ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ಹಾಗೂ ಕನಕದಾಸರಿಗೆ ಭಾವನಾತ್ಮಕ ಸಂಬಂಧವಿದ್ದು, ದೇವರು ಮತ್ತು ಭಕ್ತನ ನಡುವೇ ಅಸಮಾನತೆಗೆ ಸ್ಥಾನವಿಲ್ಲ, ಭಕ್ತಿಯೇ ಪ್ರಧಾನ ಎಂಬುದನ್ನು ಶ್ರೀಕೃಷ್ಣನು ಕನಕನ ಮೂಲಕ ಜಗತ್ತಿಗೇ ಸಾರಿದನು ಎಂಬುದು ಕನಕನ ಕಿಂಡಿಯ ವಿಶೇಷತೆಯಾಗಿದೆ ಎಂದರು.
ಶಾಸಕ ಯಶ್‌ಪಾಲ್ ಸುವರ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕೀರ್ತನೆಗಳ ಮೂಲಕ ದೇವರನ್ನು ಕಾಣಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಕನಕದಾಸರು, ಶ್ರೀಕೃಷ್ಣ ಮಠಕ್ಕೆ ಬಂದ ಸಂದರ್ಭದಲ್ಲಿ ಪ್ರವೇಶ ನಿರಾಕರಿಸಿದಾಗ ಕನಕನ ಭಕ್ತಿಗೆ ಒಲಿದು ಕೃಷ್ಣನೇ ತಿರುಗಿ ದರ್ಶನ ನೀಡಿದ ಪ್ರತೀತಿ ಇದೆ. ಕನಕನ ಕಿಂಡಿ ಇಂದಿಗೂ ವಿಶ್ವ ಪ್ರಸಿದ್ದಿ ಹೊಂದಿದೆ’ ಎಂದು ಹೇಳಿದರು.
ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರಜ್ಞಾ ಮಾರ್ಪಳ್ಳಿ ಮಾತನಾಡಿ, ‘ಕನಕದಾಸರು ಹಾಡಿನ ಮೂಲಕ ಸಮಾಜಕ್ಕೆ ಅನೇಕ ಸಂದೇಶಗಳನ್ನು ನೀಡಿದ್ದಾರೆ. ಕನಕದಾಸರ ಕೀರ್ತನೆ ಹಾಗೂ ಮೌಲ್ಯಗಳು ಬದುಕಿಗೆ ದಾರಿ ದೀಪವಾಗಿವೆ ಎಂದರು.
ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಪೊಲೀಸ್ ಅಧೀಕ್ಷಕ ಅರುಣ್ ಕೆ., ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕನಕದಾಸ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ ಡೊಳ್ಳಿನ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ್ ವೈ. ಕುರುಬರ, ಹಾಲುಮತ ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಎಚ್ ಐಹೊಳೆ, ಸಮಾಜದ ಪದಾಧಿಕಾರಿಗಳು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಕಟೀಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.