ಬೈಂದೂರು: ‘ನಾಡು, ನುಡಿಗಾಗಿ ಕನ್ನಡಿಗರು ಒಂದೇ ಮನಸ್ಸಿನಿಂದ ಒಟ್ಟಾಗಿ ಕೆಲಸ ಮಾಡಿದಾಗ ಕನ್ನಡ ಭಾಷೆ ಉಳಿಯುತ್ತದೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು. ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ನಮ್ಮ ಸಂಸ್ಕೃತಿ, ನೆಲ, ಜಲ, ಭಾಷಾಭಿಮಾನ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಉಡುಪಿ ಜಿಲ್ಲೆಗೆ ಬಂದ ಕನ್ನಡ ರಥವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ಬೈಂದೂರು ತಾಲ್ಲೂಕು ಘಟಕ, ಬೈಂದೂರು ತಾಲ್ಲೂಕು ಆಡಳಿತದ ವತಿಯಿಂದ ಸ್ವಾಗತಿಸಿ ಭುವನೇಶ್ವರಿ ಮಾತೆಗೆ ಪುಷ್ಪನಮನ ಸಲ್ಲಿಸಿ, ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಹಶೀಲ್ದಾರ್ ಪ್ರದೀಪ್ ಆರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್., ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ಬೈಂದೂರು ಪ.ಪಂ. ಮುಖ್ಯಾಧಿಕಾರಿ ಅಜಯ್ ಭಂಡಾರಕರ್, ಸಾಹಿತಿ ಚಂದ್ರಶೇಖರ ನಾವಡ, ಉಪ ತಹಶೀಲ್ದಾರ್ ಲತಾ ಶೆಟ್ಟಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ.ನಾಯ್ಕ, ಬೈಂದೂರು ಮಾದರಿ ಶಾಲೆಯ ಮುಖ್ಯಶಿಕ್ಷಕ ಜನಾರ್ದನ ದೇವಾಡಿಗ, ಸಾಹಿತಿ ಕೆ. ಪುಂಡಲೀಕ ನಾಯಕ್, ಜನಪದ ಪರಿಷತ್ ಅಧ್ಯಕ್ಷ ಗೋವಿಂದ ಬಿಲ್ಲವ, ಠಾಣಾಧಿಕಾರಿ ನವೀನ್ ಬೋರ್ಕರ್ ಇದ್ದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವಿಸಿದರು. ಕಸಾಪ ಬೈಂದೂರು ಘಟಕದ ಕಾರ್ಯದರ್ಶಿ ಸುಧಾಕರ ಪಿ. ಸ್ವಾಗತಿಸಿದರು. ಸದಸ್ಯ ಗಣಪತಿ ಹೋಬಳಿದಾರ್ ನಿರೂಪಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ವಂದಿಸಿದರು. ಬಳಿಕ ಬೈಂದೂರು ತಾಲ್ಲೂಕು ಆಡಳಿತ ಕಚೇರಿಯಿಂದ ಬೈಂದೂರು ಅಂಡರ್‌ಪಾಸ್‌ವರೆಗೆ ಮೆರವಣಿಗೆ ಮೂಲಕ ಕನ್ನಡ ರಥವನ್ನು ಬೀಳ್ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.