ಪಡುಬಿದ್ರಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಾಪು ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಪಾಪನಾಶಿನಿ ನದಿ ಸೇತುವೆಯಿಂದ ಹೆಜಮಾಡಿ ಶಾಂಭವಿ ನದಿ ಸೇತುವೆವರೆಗೆ ಮಾನವ ಸರಪಳಿ ಹಮ್ಮಿಕೊಳ್ಳಲಾಯಿತು.
24 ಕಿ.ಮೀ. ಉದ್ದದವರೆಗೂ ಸಾವಿರಾರು ಮಂದಿ ಮಾನವ ಸರಪಳಿಯಲ್ಲಿ ಪಾಲ್ಗೊಂಡರು. ಮಹಿಳೆಯರಿಂದ ಕಲಶ, ಚೆಂಡೆ, ವಿದ್ಯಾರ್ಥಿಗಳಿಂದ ಬ್ಯಾಂಡ್, ಗೊಂಬೆ ಸಹಿತ ವಿವಿಧ ವೇಷಭೂಷಣಗಳು ಕಳೆ ನೀಡಿದವು.
ಜನಪ್ರತಿನಿಧಿಗಳು, ವಿವಿಧ ಸಮಾಜ ಸೇವಾ ಸಂಘಟನೆಗಳು, ತಾಲ್ಲೂಕಿನ 16 ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡರು. ಕಾರ್ಯಕ್ರಮದ ನೆನಪಿಗಾಗಿ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಅತಿಥಿಗಳ ಸಹಕಾರದೊಂದಿಗೆ ಗಿಡ ನೆಡಲಾಯಿತು. ಹೆದ್ದಾರಿ ಪಕ್ಕದಲ್ಲಿದ್ದ ಕಸವನ್ನು ಕಾಪು ಪುರಸಭೆ, ಆಯಾಯ ಗ್ರಾಮ ಪಂಚಾಯಿತಿ ಮೂಲಕ ಸ್ವಚ್ಛಗೊಳಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೇಶದ ಭದ್ರ ಬುನಾದಿಗೆ ಪ್ರಜಾಪ್ರಭುತ್ವ ಅಡಿಗಲ್ಲು. ಪ್ರಜಾಪ್ರಭುತ್ವ ಇರುವ ನಮ್ ಮಹಾನ್ ದೇಶ ಜಾತ್ಯಾತೀತ, ಪಕ್ಷಾತೀತವಾಗಿದೆ. ಪ್ರಜಾಪ್ರಭುತ್ವವನ್ನು ಮನನ ಮಾಡಿಕೊಳ್ಳುವ ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವದ 50ಕ್ಕಿಂತಲೂ ಅಧಿಕ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡಿವೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆ ಸಂವಿಧಾನದ ಆಶಯ ಎಂದರು.
ತಹಶೀಲ್ದಾರ್ ಡಾ. ಪ್ರತಿಭಾ ಪ್ರಾಸ್ತಾವಿಕ ಮಾತನಾಡಿ, ನಾವೆಲ್ಲ ಪ್ರಜಾಪ್ರಭುತ್ವದಲ್ಲಿ ಒಂದಾಗಿದ್ದೇವೆ, ಒಗ್ಗಟ್ಟಾಗಿದ್ದೆವೆ. ಮಾನವ ಸರಪಳಿ ಮೂಲಕ ನಾವೆಲ್ಲರೂ ಸಮರ್ಪಿಸಿಕೊಂಡಿದ್ದೇವೆ ಎಂದು ವಿಶ್ವಕ್ಕೆ ಸಾರದ್ದೇವೆ ಎಂದರು.
ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ತಾ.ಪಂ. ಇಒ ಜೇಮ್ಸ್ ಡಿಸಿಲ್ವ, ಕಾರ್ಕಳ ತಾ.ಪಂ. ಇಒ ಕೃಷ್ಣಾನಂದ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೋಷನ್, ಕಾಪು ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ, ಕಾರ್ಕಳ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಅರಣ್ಯ ಇಲಾಖೆ ಅಧಿಕಾರಿ ಜೀವನ್ ದಾಸ್ ಶೆಟ್ಟಿ, ಪ್ರಭಾಕರ ಕುಲಾಲ್, ಉಪ ತಹಶೀಲ್ದಾರ್‌ಗಳಾದ ಅಶೋಕ್ ಕೋಟೆಕಾರ್, ರವಿ ಕಿರಣ್, ದೇವಕಿ, ಕಂದಾಯ ನಿರೀಕ್ಷಕ ಇಜಾಜ್ ಸಾಬೀರ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಮಹಾಲಕ್ಷ್ಮೀ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.