ADVERTISEMENT

ಅಸ್ಪೃಶ್ಯತೆಯಿಂದ ಇನ್ನೂ ಮುಕ್ತಿ ದೊರೆತಿಲ್ಲ: ಬಾಬು ಕೊರಗ

ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:15 IST
Last Updated 17 ನವೆಂಬರ್ 2024, 8:15 IST
ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ‘ನೆಲದುಲಿ’ಯಲ್ಲಿ ಸಮ್ಮೇಳನಾಧ್ಯಕ್ಷ ಪಾಂಗಾಳ ಬಾಬು ಕೊರಗ ಮಾತನಾಡಿದರು
ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ‘ನೆಲದುಲಿ’ಯಲ್ಲಿ ಸಮ್ಮೇಳನಾಧ್ಯಕ್ಷ ಪಾಂಗಾಳ ಬಾಬು ಕೊರಗ ಮಾತನಾಡಿದರು   

ಪಡುಬಿದ್ರಿ: ಕೊರಗರು ಇಂದಿಗೂ ಸ್ವಚ್ಛತೆ ಕೆಲಸ ಮಾಡುತ್ತಿರುವುದು ದುರ್ದೈವ. ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಇಂದಿಗೂ ಅಸ್ಪೃಶ್ಯತೆಯಿಂದ ಮುಕ್ತಿ ಸಿಕ್ಕಿಲ್ಲ. ಈಗ ಮೊದಲಿನಷ್ಟು ಇಲ್ಲ ಎನ್ನುವವರಿಗೂ ಇಲ್ಲವೇ ಇಲ್ಲ ಎನ್ನುವಷ್ಟು ಧೈರ್ಯ ಬರುವುದಿಲ್ಲ ಎಂದು ಸಮ್ಮೇಳನಾಧ್ಯಕ್ಷ ಪಾಂಗಾಳ ಬಾಬು ಕೊರಗ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಕಾಪು ತಾಲ್ಲೂಕು ಘಟಕ ಆಶ್ರಯದಲ್ಲಿ ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಕಾಪು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ನೆಲದುಲಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಪು ತಾಲ್ಲೂಕು ಸುಕ್ಷಿತರ ನಾಡು. ಇಲ್ಲಿ ಸರ್ವ ಧರ್ಮದವರು ಜೀವಿಸುತ್ತಿದ್ದಾರೆ. ಜಾತಿ, ಧರ್ಮ ಸಾಮರಸ್ಯ ಒಂದು ಹಂತದ ಗಡಿಯನ್ನು ದಾಟಿ ಕೆಟ್ಟಿಲ್ಲ. ಹಾಗೆಂದು ಇಲ್ಲಿ ಎಲ್ಲವೂ ಸರಿಯಾಗಿದೆ ಎನ್ನಲಾಗುವುದಿಲ್ಲ. ರಾಜ್ಯದ ಕೆಲವು ಕಡೆ ನಡೆಯುವ ಕೋಮು ಸಂಘರ್ಷಗಳಂತೆ ಇಲ್ಲಿನ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ನಾವು ಮಾಡಿಲ್ಲ.  ಮೇಲ್ವರ್ಗಗಳಿಗೆ ಸೀಮಿತಗೊಳ್ಳುತ್ತಿದ್ದ ಸಾಹಿತ್ಯ ಕ್ಷೇತ್ರ ಇಂದು ಎಲ್ಲೆ ಮೀರಿ ವಿಸ್ತಾರಗೊಳ್ಳುತ್ತಿದೆ ಎಂದರು.

ADVERTISEMENT

ಆಂಗ್ಲ ಭಾಷೆಯ ವ್ಯಾಮೋಹದಿಂದ ನಾವು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಕನ್ನಡ ಕನ್ನಡ ಎಂದು ಪಠಿಸುವ ಕೆಲವು ಹೋರಾಟಗಾರರೂ ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಕನ್ನಡ ಶಾಲೆಗಳ ಶಿಕ್ಷಕರೂ ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲಮಾಧ್ಯಮ ಸಂಸ್ಥೆಗಳಿಗೆ ಕಳುಹಿಸುತ್ತಾರೆ.  ಹಳ್ಳಿಗಳಲ್ಲಿ ಹೆತ್ತವರು ತಮ್ಮ ಮನೆ ಮಾತು ಮರೆತು, ಹರುಕು ಮುರುಕು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿರುವುದು ಖೇದಕರ ಎಂದ ಅವರು, ಇಂತಹ ಬದಲಾವಣೆಗಳನ್ನು ಭಾಷಣಗಳಿಂದ ಮಾಡಲು ಸಾಧ್ಯವಿಲ್ಲ. ಮನಸ್ಸಿನಲ್ಲೇ ಬದಲಾವಣೆ ಮಾಡಬೇಕು ಎಂದರು.

ದಲಿತರಲ್ಲೂ ಅಸ್ಪೃಶ್ಯತೆಯಿದೆ: ಮೇಲ್ವರ್ಗದಲ್ಲಿ ಮಾತ್ರವಲ್ಲ ದಲಿತರಲ್ಲಿಯೂ ಅಸ್ಪೃಶ್ಯತೆ ಜೀವಂತವಿದೆ. ದಲಿತ ಹಾಗೂ ಕೊರಗ ಸಮುದಾಯದವರು ಅಂತರ್ಜಾತಿ ವಿವಾಹವಾದರೆ ಮನೆಗೆ ಸೇರಿಸಿಕೊಳ್ಳದೆ ಅಸ್ಪೃಶ್ಯತೆ ಮಾಡಲಾಗುತ್ತಿರುವುದು ನಾವು ಬದಲಾಗಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಪಾಂಗಾಳ ಬಾಬು ಕೊರಗ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಬಡವಾಗುತ್ತಿದೆ ಎಂದರೆ ನಾವೆತ್ತ ಸಾಗುತ್ತಿದ್ದೇವೆ ಅನ್ಯ ರಾಜ್ಯದವರು ಅವರ ಭಾಷೆಯನ್ನೇ ಬಳಸಿದರೂ ನಾವು ಅವರೊಂದಿಗೆ ಹೊಂದಾಣಿಕೆ ಮಾಡಿ ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಹಾಗಾದರೆ ಕನ್ನಡ ಉಳಿಯುವುದೆಲ್ಲಿ. ನಮ್ಮ ಮಕ್ಕಳು ಕನ್ನಡ ಮಾತನಾಡಿದರೂ ಒಂದು ವಾಕ್ಯದಲ್ಲಿ ಮುಕ್ಕಾಲು ಪಾಲು ಇಂಗ್ಲಿಷ್‌ ಪದಗಳೇ ತುಂಬಿರುತ್ತವೆ. ಶುದ್ಧ ಕನ್ನಡ ಕಾಣೆಯಾಗಿದೆ. ಇತರ ಭಾಷೆಗಳಿಗೂ ಗೌರವ ಕೊಡೋಣ. ಅದನ್ನೂ ಕಲಿಯೋಣ ಮಕ್ಕಳಿಗೂ ಕಲಿಸೋಣ. ಕಾಪು ತಾಲ್ಲೂಕಿನಲ್ಲಿ ಹತ್ತಕ್ಕೂ ಮಿಕ್ಕಿ ಭಾಷೆ ಉಪ ಭಾಷೆಗಳಿವೆ. ತುಳು ನಮ್ಮ ಪ್ರಧಾನ ಭಾಷೆಯಾದರೂ ಆಡಳಿತ ಭಾಷೆಯಾಗಿ ಕನ್ನಡವೇ ಇದೆ. ಕನ್ನಡದಲ್ಲಿ ಬರೆಯುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಓದುಗರ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಅಪವಾದವೂ ಇದೆ. ಕವಿಗೋಷ್ಠಿಗಳಲ್ಲಿ ಶೋತೃಗಳಿಗಿಂತ ಕವಿಗಳೇ ಹೆಚ್ಚಾಗುತ್ತಿದ್ದಾರೆ ಎಂಬ ಕುಹಕ ಕೇಳಿ ಬರುತ್ತಿದೆ. ಕನ್ನಡ ಎನೆ ಕುಣಿದಾಡುವುದೆನ್ನೆದೆ ಎಂದು ಕವಿಗಳು ಹಾಡಿದ ನಾಡಿನಲ್ಲಿ ಕನ್ನಡ ಬಡವಾಗುತ್ತಿದೆ ಎಂದರೆ ನಾವೆತ್ತ ಸಾಗುತ್ತಿದ್ದೇವೆ. ನವೆಂಬರ್ ಒಂದರಂದು ವೇದಿಕೆಗಳಲ್ಲಿ ಕನ್ನಡ ಕನ್ನಡ ಎಂದು ಬಾಯಿ ಬಡಿದುಕೊಳ್ಳುವುದಕ್ಕಷ್ಟೇ ಕನ್ನಡ ಸೀಮಿತವಾಯಿತೇ ಎಂದು ಬಾಬು ಕೊರಗ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.