ಉಡುಪಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೆ.ಶಿವರಾಮ ಕಾರಂತರ ‘ಮೂಕಜ್ಜಿಯ ಕನಸು’ ಕಾದಂಬರಿ ಆಧರಿಸಿ ನಿರ್ಮಿಸಲಾಗುತ್ತಿರುವ ಸಿನಿಮಾದ ಚಿತ್ರೀಕರಣ ಬುಧವಾರ ಬ್ರಹ್ಮಾವರದ ಸಾಲಿಕೇರಿಯಲ್ಲಿ ಆರಂಭವಾಯಿತು.
ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ಅರಳಿಮರದ ಬಳಿ ಚಿತ್ರದ ಮೊದಲ ದೃಶ್ಯವನ್ನು ಚಿತ್ರೀಕರಣ ಮಾಡಲಾಯಿತು.
ಖ್ಯಾತ ನಿರ್ದೇಶಕರಾದ ಪಿ.ಶೇಷಾದ್ರಿ ಅವರು ಚಿತ್ರಕಥೆ ಬರೆದು ಹಾಗೂ ನಿರ್ದೇಶನ ಮಾಡುತ್ತಿದ್ದಾರೆ. ಬಿ.ಜಯಶ್ರೀ ಮೂಕಜ್ಜಿಯ ಪಾತ್ರದಲ್ಲಿ ನಟಿಸುತ್ತಿದ್ದು, ಜಿ.ಎಸ್.ಭಾಸ್ಕರ್ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಸಂಗೀತ ನಿರ್ದೇಶನವಿದೆ.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪಿ.ಶೇಷಾದ್ರಿ, ‘ಮೂಕಜ್ಜಿಯ ಕನಸು’ ಕಾದಂಬರಿಯನ್ನು ಸಿನಿಮಾ ಮಾಡಬೇಕು ಎಂಬುದು ಬಹುದಿನಗಳ ಕನಸು. ಈಗ ನೆರವೇರುವ ಕಾಲ ಬಂದಿದೆ’ ಎಂದು ತಿಳಿಸಿದರು.
ಕಾರಂತರ ‘ಮೂಕಜ್ಜಿಯ ಕನಸು’ ಕಾದಂಬರಿ ರಚಿತವಾಗಿ 50 ವರ್ಷಗಳಾಗಿವೆ. ಸಾಹಿತ್ಯದ ಮೇರುಕೃತಿಯಾಗಿರುವ, ಜ್ಞಾನಪೀಠ ಪ್ರಶಸ್ತಿಗೆ ಪಾತ್ರವಾಗಿರುವ ಹಾಗೂ ಕನ್ನಡ ಅಸ್ಮಿತೆಯನ್ನು ಉಳಿಸಿಕೊಂಡಿರುವ ಕಾದಂಬರಿಯನ್ನು ದೃಶ್ಯಮಾಧ್ಯಮದಲ್ಲಿ ಅಳವಡಿಸುವುದು ಸೂಕ್ತ ಎನಿಸಿತು. ಹಾಗಾಗಿ, ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಶಿವರಾಮ ಕಾರಂತರ ಕಾದಂಬರಿ ಆಧರಿಸಿ ಚೋಮನದುಡಿ, ಕುಡಿಯರ ಕೂಸು, ಸರಸಮ್ಮನ ಸಮಾಧಿ, ಚಿಗುರಿನ ಕನಸು, ಬೆಟ್ಟದ ಜೀವ ಸಿನಿಮಾಗಳು ಈಗಾಗಲೇ ತೆರೆಗೆ ಬಂದಿವೆ. ಈಗ ನವ್ಯಚಿತ್ರ ಸಂಸ್ಥೆಯಿಂದ ಮೂಕಜ್ಜಿಯ ಕನಸು ಸಿನಿಮಾ ನಿರ್ಮಿಸುತ್ತಿರುವುದು ಸಂತಸ ತಂದಿದೆ ಎಂದರು.
ಮೂಕಜ್ಜಿಯ ಪಾತ್ರ ಯಾರು ಮಾಡಬೇಕು ಎಂದು ಯೋಚಿಸಿದಾಗ ತಕ್ಷಣಕ್ಕೆ ಬಿ.ಜಯಶ್ರೀ ನೆನಪಾದರು. ಆದರೂ ರಂಗಭೂಮಿ ಹಿನ್ನೆಲೆಯ ಹಿರಿಯ ನಟಿಯರನ್ನು ಭೇಟಿ ಮಾಡಿ, ಸ್ಕ್ರೀನ್ ಟೆಸ್ಟ್ ಮಾಡಿದೆವು. ಯಾರೂ ಜಯಶ್ರೀ ಅವರ ಮುಂದೆ ಸಾಟಿಯಾಗಲಿಲ್ಲ ಎಂದು ಶೇಷಾದ್ರಿ ಪಾತ್ರದ ಆಯ್ಕೆ ಕುರಿತು ವಿವರಿಸಿದರು.
ನಾಗಮಂಡಲ, ಕೂರ್ಮಾವತಾರ ಚಿತ್ರ ಖ್ಯಾತಿಯ ಜಿ.ಎಸ್.ಭಾಸ್ಕರ್ ಛಾಯಾಗ್ರಹಕರಾಗಿದ್ದಾರೆ. ದಿನೇಶ್ ಮಂಗಳೂರು ಕಲಾ ನಿರ್ದೇಶನ ಮಾಡಿದ್ದಾರೆ. ಸುಬ್ರಾಯ ಪಾತ್ರವನ್ನು ಅರವಿಂದ್ ಕುಪ್ಳೀಕರ್ ನಿರ್ವಹಿಸಿದ್ದಾರೆ. ಕೆಂಪರಾಜ್ ಸಂಕಲನ ಮಾಡುತ್ತಿದ್ದಾರೆ ಎಂದರು.
ಕಾದಂಬರಿಯಲ್ಲಿ ಬರುವ ಚಿತ್ರಣವನ್ನು ತೆರೆಯ ಮೇಲೆ ನೈಜವಾಗಿ ತೋರಿಸಲು ಪರ್ಕಳದ ಸೆಟ್ಟಿಬೆಟ್ಟು, ನೆಂಚಾರು, ಬೈಂದೂರು, ಕುಂದಾಪುರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಸ್ಥಳೀಯ ಭಾಷೆಗಳ ಸೊಗಡನ್ನು ಚಿತ್ರದಲ್ಲಿ ಕಾಣಬಹುದು ಎಂದರು.
ಹಿರಿಯ ನಟಿ ಬಿ.ಜಯಶ್ರೀ ಮಾತನಾಡಿ, ನಾಟಕದಲ್ಲಿ ಮೂಕಜ್ಜಿಯಾಗಿ ನಟಿಸಿದ್ದೇನೆ. ಈಗ ಸಿನಿಮಾದಲ್ಲಿಯೂ ನಟಿಸುತ್ತಿರುವುದು ಸಂತಸ ತಂದಿದೆ. ಚಿತ್ರದಲ್ಲಿ ಮೂಕಜ್ಜಿ ಮನಸ್ಸಿನಿಂದ ಮಾತನಾಡಲಿದ್ದಾಳೆ ಎಂದರು.
ಕಾರಂತರ ಆಪ್ತ ಕಾರ್ಯದರ್ಶಿಯಾಗಿದ್ದ ಮಾಲಿನಿ ಮಲ್ಯ, ಹಾಗೂ ಕಲಾವಿದರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.