ADVERTISEMENT

ಕಾರ್ಕಳ: ಅಮೃತ ಮಹೋತ್ಸವ ಸಂಭ್ರಮ ಇಂದಿನಿಂದ

ಬಸ್ರಿ ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 5:45 IST
Last Updated 2 ಫೆಬ್ರುವರಿ 2024, 5:45 IST
ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಕಾರ್ಕಳ ತಾಲ್ಲೂಕಿನ ಬಸ್ರಿ ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ
ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಕಾರ್ಕಳ ತಾಲ್ಲೂಕಿನ ಬಸ್ರಿ ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ   

ಕಾರ್ಕಳ: ತಾಲ್ಲೂಕಿನ ಬಸ್ರಿ ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಅಮೃತ ಮಹೋತ್ಸವ ಸಂಭ್ರಮ. 1947ರಲ್ಲಿ ಸ್ಥಾಪನೆಯಾದ ಈ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಫೆ. 2ರಂದು ಸಾಂಕೇತಿಕವಾಗಿ ಚಾಲನೆ ಸಿಗಲಿದೆ. 

ಜಿಲ್ಲಾ ಬೋರ್ಡ್ ಪ್ರಾಥಮಿಕ ಶಾಲೆ ಬಸ್ರಿ ಎಂಬ ಹೆಸರಿನಿಂದ ಪ್ರಾರಂಭವಾದ ಈ ಶಾಲೆಗೆ ಆರಂಭದ ದಿನಗಳಲ್ಲಿ ಕಟ್ಟಡ ಇಲ್ಲದಿರುವುದನ್ನು ಮನಗಂಡ ಜಾರ್ಕಳದ ದಯಾನಂದ ಹೆಗ್ಡೆ ಅವರು ತಮ್ಮ ಮನೆಯ ಕೋಣೆಯೊಂದರಲ್ಲಿ ಶಾಲೆ ಆರಂಭಿಸಲು ಸಮ್ಮತಿಸಿದರು.

ಗ್ರಾಮದ ಪರಿಸರದಲ್ಲಿ ವಿದ್ಯಾಸಂಸ್ಥೆ ಇರಬೇಕು, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಆಶಯ ಇಟ್ಟುಕೊಂಡಿದ್ದ ಶಿಕ್ಷಣ ಪ್ರೇಮಿಗಳು, ಶಾಲೆಗೆ ಸ್ವಂತ ಜಾಗವಿಲ್ಲದಿರುವುದನ್ನು ಮನಗಂಡ ಬೈಲೂರು ಗ್ರಾಮದ ದಿ. ವಾಸು ಹೆಗ್ಗಡೆ ಅವರ ಅತ್ತೆ ದಿ. ಶ್ರೀಮತಿ ಪದ್ದು ಕಡಂಬೆದಿ ಅವರು ತಮ್ಮ ಸ್ವಂತ ಜಾಗವನ್ನು ಶಾಲೆಗೆ ದಾನವಾಗಿ ನೀಡಿದ್ದರು.

ADVERTISEMENT

1954ರಲ್ಲಿ ಜಿಲ್ಲಾ ಬೋರ್ಡ್, ಸಮಾಜ ವಿಕಾಸ ಯೋಜನೆ ಹಾಗೂ ಗ್ರಾಮಸ್ಥರ ನೆರವಿನಿಂದ ಶಾಲೆಗೆ ಸ್ವಂತ ಕಟ್ಟಡ ರಚನೆಯಾಯಿತು.

ಆರಂಭದಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷಣ ದೊರೆಯುತ್ತಿತ್ತು. ಆದರೆ, 1981ರಲ್ಲಿ ಶಾಲಾಭಿವೃದ್ಧಿ ಸಮಿತಿಯವರ ಪ್ರಯತ್ನ, ಊರವರ ನೆರವಿನಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿತ್ತು. ಶಾಲೆಯ ಆರಂಭದ ದಿನಗಳಲ್ಲಿ ದಿ. ರಮಾನಾಥ ಕ್ಷತ್ರಿಯ ಹಾಗೂ ದಿ. ರಾಮಯ್ಯ ಮಾಸ್ಟರ್ ಅವರು ಆಸುಪಾಸಿನ ಮನೆಗಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ಕರೆತಂದು ವಿದ್ಯಾಭ್ಯಾಸ ನೀಡಿ, ಶಾಲೆಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ್ದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಆಂಗ್ಲ ಮಾಧ್ಯಮದತ್ತ ಜನರ ವ್ಯಾಮೋಹ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಕುರಿತು ಜನರ ತಾತ್ಸಾರದ ಮನೋಭಾವಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ ಹಲವು ಸವಾಲುಗಳ ನಡುವೆಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಬಸ್ರಿ ಬೈಲೂರು ಶಾಲೆಯು ನೀಡುತ್ತಿದೆ.‌

ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕ್ರಾಂತಿ ಮೂಡಿಸಿರುವ ಈ ಶಾಲೆಯ ವಿದ್ಯಾರ್ಥಿಗಳು, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಅಮೃತ ಮಹೋತ್ಸವದ ಯೋಜನೆಗಳು: ಶಾಲೆಯು ಸುವರ್ಣ ಮಹೋತ್ಸವ ಹಾಗೂ ವಜ್ರ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದೆ.  ಸುವರ್ಣ ಮಹೋತ್ಸವದ ಸವಿನೆನಪಿಗಾಗಿ, ಶಾಲೆಯ ಅಭಿವೃದ್ಧಿಗಾಗಿ ಶಾಶ್ವತ ನಿಧಿ ಸ್ಥಾಪನೆ, ವಿಜ್ಞಾನ ಭವನದ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲಾಗಿತ್ತು.

ಶಾಲೆಯ ವಜ್ರ ಮಹೋತ್ಸವ ಸಂದರ್ಭದಲ್ಲಿ ಶಾಲೆಯ ಅಂಗಣಕ್ಕೆ ಇಂಟರ್ಲಾಕ್ ಅಳವಡಿಕೆ, ಮೈದಾನ ರಿಪೇರಿ, ಶಾಲಾ ಕಚೇರಿ ಆಧುನೀಕರಣ, ಕಂಪ್ಯೂಟರ್ ವ್ಯವಸ್ಥೆ, ಪ್ರಯೋಗಾಲಯ ಸಾಮಾಗ್ರಿಗಳನ್ನು ದಾನಿಗಳ ಮೂಲಕ ಆಯೋಜಿಸಲಾಗಿದೆ.

ಫೆ. 2 ಮತ್ತು 3ರಂದು ನಡೆಯುವ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಿತಿ ಹಲವಾರು ಯೋಜನೆಗಳನ್ನು ಮುಂದಿರಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಶಾಲೆಗೆ ಸುಸಜ್ಜಿತವಾದ ಅಮೃತ ಮಹೋತ್ಸವ ಸೌಧ, ರಂಗಮಂದಿರ ಪುನರ್‌ ನಿರ್ಮಾಣ, ಆಟದ ಮೈದಾನ ನವೀಕರಣ, ಶಾಲೆಗೆ ಆವರಣ ಗೋಡೆ, ಪೀಠೋಪಕರಣಗಳು, ಶಾಲಾ ಅಂಗಣಕ್ಕೆ ಇಂಟರ್ಲಾಕ್ ಅಳವಡಿಕೆ ಜೊತೆಗೆ ಮಕ್ಕಳಿಗೆ ಅಗತ್ಯವಾಗಿರುವ ಹಲವಾರು ಯೋಜನೆಗಳನ್ನು ದಾನಿಗಳ ನೆರವಿನಿಂದ ನೆರವೇರಿಸುವಲ್ಲಿ ಅಮೃತ ಮಹೋತ್ಸವ ಸಮಿತಿಯು ಸಫಲವಾಗಿದೆ.

ಸರ್ಕಾರಿ ಶಾಲೆಗಳು ಉಳಿಯಬೇಕು ಬೆಳೆಯಬೇಕು ಎನ್ನುವುದು ಎಲ್ಲರ ಆಶಯ. ಇದಕ್ಕಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.