ಉಡುಪಿ: ‘ಸಾವಿನ ಸೂತಕದಲ್ಲೂ ಸಂಭ್ರಮ ಪಡುವ ಸಂಸ್ಕೃತಿ ನಮ್ಮಲ್ಲಿ ಇರಲಿಲ್ಲ. ನಾವು ನಮ್ಮ ಶತ್ರು ನಿಧನರಾದರೂ ದುಃಖ ಪಡುವವರು. ಆದರೆ, ಸಂಪ್ರದಾಯ, ಸಂಸ್ಕೃತಿ, ಪರಂಪರೆ, ಧರ್ಮದ ಬಗ್ಗೆ ಮಾತನಾಡುವವರು ಸಾವಿನ ಸೂತಕದಲ್ಲಿ ಸಂಭ್ರಮ ಪಡುತ್ತಿದ್ದಾರೆ’ ಎಂದು ಚಿಂತಕ ಜಿ.ರಾಜಶೇಖರ್ ಹೇಳಿದರು.
ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಗೋವಿಂದ ಪೈ ಸಂಶೋಧನಾ ಕೇಂದ್ರದ ದ್ವನ್ಯಾಲೋಕ ಸಭಾಂಗಣದಲ್ಲಿ ಮಂಗಳವಾರ ನಡೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹಿಂದೆ ಅನಂತಮೂರ್ತಿ ಸಾವಿನಲ್ಲೂ ಸಂಭ್ರಮ ಪಟ್ಟಿದ್ದರು. ಈಗ ಗಿರೀಶ್ ಕಾರ್ನಾಡ್ ಸಾವಿನಲ್ಲೂ ಸಂಭ್ರಮ ಪಡುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ದೇಶ ಬಿಟ್ಟು ಬೇರೆ ನೆಲೆ, ಆಶ್ರಯ ಇಲ್ಲ. ಅಂತಹ ಅಸಹಾಯಕರನ್ನು, ದುರ್ಬಲರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಲೋಕಸಭಾ ಸದಸ್ಯ, ಕೇಂದ್ರ ಸಚಿವರಂತವರು ಹೇಳುತ್ತಾರೆ. ಇಂಥವರು ಇರುವ ಈ ದೇಶ, ಸಂಸ್ಕೃತಿಯ ಅಸಹಾಯಕರು, ದುರ್ಬಲರು, ಬಲಹೀನರಿಗೆ ನರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನರಕದ ವಿರುದ್ಧ ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಹೋರಾಡಿದರು. ಅನಂತಮೂರ್ತಿ ಕೊನೆಗೆ ವಿಷಾದದಲ್ಲಿ ಒಂಟಿಯ ಭಾವದಲ್ಲಿ ತೀರಿಕೊಂಡರು. ಆದರೆ, ಕಾರ್ನಾಡ್ ಅವರಿಗೆ ಅಂತಹ ಭಾವನೆ ಕಾಡಲಿಲ್ಲ. ಇವರಿಬ್ಬರೂ ಅನ್ಯಾಯದ ವಿರುದ್ಧ ಹಾಗೂ ದುರ್ಬಲರ ಪರವಾಗಿ ಹೋರಾಡಿದ ಮಹಾನ್ ಚೇತನಗಳು’ ಎಂದು ಸ್ಮರಿಸಿದರು.
ಹಿರಿಯ ಲೇಖಕಿ ವೈದೇಹಿ ಮಾತನಾಡಿ, ‘ಶಿವರಾಮ ಕಾರಂತ, ಲಂಕೇಶ್, ಅನಂತಮೂರ್ತಿ, ಕಾರ್ನಾಡ್ ಸಮಾಜದ ಓರೆಕೋರೆಗಳನ್ನು ತಿದ್ದುವ ವೈದ್ಯರಾಗಿದ್ದರು. ಕಾರ್ನಾಡರನ್ನು ಕೇವಲ ಸಮಾಜ ಮಾತ್ರವಲ್ಲ; ಜಗತ್ತನ್ನು ಹಾಗೂ ಮನುಷ್ಯರನ್ನು ಪ್ರೀತಿಸುವ ಪ್ರತಿಯೊಬ್ಬರೂ ಕಳೆದುಕೊಂಡಿದ್ದಾರೆ’ ಎಂದು ನೋವು ತೋಡಿಕೊಂಡರು.
ಪಿಪಿಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಟರಾಜ್ ದೀಕ್ಷಿತ್ ಮಾತನಾಡಿ, ‘ಕಾರ್ನಾಡರು ವಿರೋಧಿಗಳ ಆಚಾರ ವಿರೋಧಿಸುತ್ತಿದ್ದರೇ ಹೊರತು, ಅವರ ವಿಚಾರವನ್ನು ವಿರೋಧಿಸುತ್ತಿರಲಿಲ್ಲ. ಇದಕ್ಕೆ ಅವರ ಜೀವನದ ಹಿನ್ನೆಲೆಯೇ ಕಾರಣ. ಅದನ್ನು ಕೊನೆಯ ಉಸಿರಿರುವವರೆಗೂ ಮುಂದುವರಿಸಿಕೊಂಡು ಬಂದರು. ಆದರ್ಶ ವ್ಯಕ್ತಿತ್ವ, ಹೋರಾಟದ ಮನಸ್ಥಿತಿ ಅವರದಾಗಿತ್ತು’ ಎಂದರು.
ಚಿಂತಕ ಕೆ.ಫಣಿರಾಜ್ ಮಾತನಾಡಿ, ‘ಗಿರೀಶ್ ಕಾರ್ನಾಡ್ ಸ್ವತಂತ್ರ ಮನೋಭಾವದವರು. ಟಿಪ್ಪು ಸುಲ್ತಾನ್ ಬಗೆಗಿನ ಸತ್ಯ ಜನಪದ ಲೋಕ ಹಾಗೂ ದುಷ್ಟ ರಾಜಕಾರಣಿಗಳಿಗೆ ಮಾತ್ರ ತಿಳಿದಿತ್ತು. ಆದರೆ, ಟಿಪ್ಪು ವಿಚಾರಗಳನ್ನು ವಿಚಾರವಾದಿಗಳಿಗೆ ತಿಳಿಸಿದ ಕೀರ್ತಿ ಕಾರ್ನಾಡರಿಗೆ ಸಲ್ಲುತ್ತದೆ. ವಿರೋಧಿಗಳ ಬಗ್ಗೆ ಆಡಿದ ಮಾತನ್ನು ಯಾವತ್ತೂ ಅವರು ಹಿಂತೆಗೆದುಕೊಂಡಿಲ್ಲ’ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.