ADVERTISEMENT

6 ತಿಂಗಳ ಹಿಂದೆಯೇ ನಿವೃತ್ತಿ ನಿರ್ಧಾರ: ಹಾಲಾಡಿ ಶ್ರೀನಿವಾಸ ಶೆಟ್ಟಿ

ಉಡುಪಿ, ಕುಂದಾಪುರ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ: ಕೆಲವರಿಗೆ ಟಿಕೆಟ್‌ ಕೈತಪ್ಪುವ ಭೀತಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2023, 14:41 IST
Last Updated 4 ಏಪ್ರಿಲ್ 2023, 14:41 IST
ಹಾಲಾಡಿ ಶ್ರೀನಿವಾಸ ಶೆಟ್ಟಿ
ಹಾಲಾಡಿ ಶ್ರೀನಿವಾಸ ಶೆಟ್ಟಿ   

ಉಡುಪಿ: ‘ಆರು ತಿಂಗಳ ಹಿಂದೆಯೇ ಆತ್ಮವಿಮರ್ಶೆಗೊಳಪಟ್ಟು ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೆ. ಆದರೆ, ಕುಂದಾಪುರ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ನಿರ್ಧಾರ ಪ್ರಕಟಿಸಿರಲಿಲ್ಲ’ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಂಗಳವಾರ ಮಾಧ್ಯಮಗಳ ಮುಂದೆ ಮನದಾಳ ಬಿಚ್ಚಿಟ್ಟರು.

‘ಈ ಹಿಂದೆಯೇ, ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದ್ದರೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದ್ದವು. ಹಾಗಾಗಿ, ನೀತಿಸಂಹಿತೆ ಜಾರಿಯಾಗುವ ಕೊನೆಯ ಕ್ಷಣದವರೆಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ನಿರ್ಧಾರದ ಹಿಂದೆ ಯಾರ ಒತ್ತಡವೂ ಇಲ್ಲ. ಚುನಾವಣಾ ರಾಜಕೀಯದಿಂದ ಮಾತ್ರ ಹಿಂದೆ ಸರಿದಿದ್ದು, ಸಕ್ರಿಯ ರಾಜಕೀಯದಿಂದ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಆದರೆ, ಹಾಲಾಡಿ ನಡೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಬೇಸರ ತರಿಸಿರುವುದರ ಜತೆಗೆ ಅನುಮಾನಗಳನ್ನೂ ಹುಟ್ಟುಹಾಕಿದೆ. ಮಂಗಳವಾರವೂ ಅಭಿಮಾನಿಗಳು ಹಾಲಾಡಿ ನಿವಾಸಕ್ಕೆ ತೆರಳಿ ಮನವೊಲಿಸುವ ಯತ್ನ ಮಾಡಿದರು. ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲೂ ಹಾಲಾಡಿ ಪರವಾಗಿ ಅಭಿಯಾನ ಆರಂಭವಾಗಿದೆ. ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ADVERTISEMENT

ಸ್ವಯಂ ನಿರ್ಧಾರವೇ?

‘ಈಚೆಗೆ ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲೂ ಅವಕಾಶ ಕೊಟ್ಟರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹಾಲಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಳಿಕ ಏಕಾಏಕಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ’ ಎನ್ನುತ್ತಾರೆ ಪಕ್ಷದ ನಾಯಕರು.

ಹಾಲಾಡಿ ನಂತರ ಯಾರು?: ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆಗಳು ಜೋರಾಗಿದ್ದು ಕಿರಣ್ ಕೊಡ್ಗಿ ಅವರ ಹೆಸರು ಮುನ್ನಲೆಗೆ ಬಂದಿದೆ. ಹಾಲಾಡಿ ಅವರಿಗೆ ಆಪ್ತರಾಗಿರುವ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕಿರಣ್ ಕೊಡ್ಗಿ ಹಿನ್ನೆಲೆ: ಕರಾವಳಿಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮವಹಿಸಿದ ದಿ.ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ.ಜಿ.ಕೊಡ್ಗಿ) ಅವರ ಪುತ್ರ ಕಿರಣ್ ಕೊಡ್ಗಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷರಾಗಿದ್ದಾರೆ. ದಶಕಗಳಿಂದಲೂ ಹಾಲಾಡಿ ಅವರಿಗೆ ಆಪ್ತರಾಗಿರುವ ಕಿರಣ್ ಕೊಡ್ಗಿ ಅವರಿಗೆ ಟಿಕೆಟ್‌ ಕೊಟ್ಟರೆ ಬಿಜೆಪಿ ಗೆಲುವು ಸುಲಭ ಎಂಬ ಚರ್ಚೆಗಳು ನಡೆಯುತ್ತಿವೆ.

ಮತ್ತೊಂದೆಡೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರ ಹೆಸರೂ ಮುಂಚೂಣಿಗೆ ಬಂದಿದೆ. ಕ್ಷೇತ್ರದ ಮೇಲೆ ಪ್ರಭಾವ ಹೊಂದಿರುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್‌ ಕೊಟ್ಟು ಸಕ್ರಿಯ ರಾಜಕಾರಣದತ್ತ ಸೆಳೆಯುವ ಲೆಕ್ಕಾಚಾರವೂ ಇದೆ.

ರಘುಪತಿ ಭಟ್‌ಗೆ ಕೈತಪ್ಪಲಿದೆಯೇ ಟಿಕೆಟ್‌: ಕುಂದಾಪುರ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಎ.ಜಿ.ಕೊಡ್ಗಿ ಅವರಿಗೆ ಟಿಕೆಟ್ ನೀಡಿದರೆ ಉಡುಪಿಯಲ್ಲಿ ಹಾಲಿ ಶಾಸಕ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಕೆ.ರಘುಪತಿ ಭಟ್‌ ಅವರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ, ಬೈಂದೂರು ಕ್ಷೇತ್ರಗಳಿಗೆ ಬಂಟರು, ಉಡುಪಿಯಲ್ಲಿ ಬ್ರಾಹ್ಮಣ, ಕಾಪುವಿನಲ್ಲಿ ಮೊಗವೀರ ಹಾಗೂ ಕಾರ್ಕಳದಲ್ಲಿ ಬಿಲ್ಲವ ಅಭ್ಯರ್ಥಿಗೆ ಬಿಜೆಪಿ ಟಿಕೆಟ್‌ ನೀಡಿತ್ತು.

ಇದೇ ಮಾನದಂಡವನ್ನು ಈ ಬಾರಿಯ ಚುನಾವಣೆಯಲ್ಲೂ ಅನುಸರಿಸಿದರೆ ಕುಂದಾಪುರ ಅಥವಾ ಉಡುಪಿ ಕ್ಷೇತ್ರದಲ್ಲಿ ಒಬ್ಬರು ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್‌ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.