ADVERTISEMENT

ಲಂಚ ಪಡೆದು ಕಾಂಗ್ರೆಸ್ ಪಕ್ಷ ಕಟ್ಟಲಿಲ್ಲ: ಪ್ರಮೋದ್ ಮಧ್ವರಾಜ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 15:57 IST
Last Updated 27 ಜನವರಿ 2023, 15:57 IST
ಪ್ರಮೋದ್ ಮಧ್ವರಾಜ್‌
ಪ್ರಮೋದ್ ಮಧ್ವರಾಜ್‌   

ಉಡುಪಿ: ಸ್ವಂತ ಹಣದಿಂದ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದ್ದೇನೆ; ಯಾರ ಬಳಿಯೂ ಲಂಚ ಪಡೆದು ಪಕ್ಷ ಕಟ್ಟಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಈಚೆಗೆ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಆರೋಪಗಳಿಗೆ ಅಮ್ಮುಂಜೆಯ ನಿವಾಸದಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್‌ ಪಕ್ಷ ಕಟ್ಟಿದ್ದಕ್ಕೆ ಪ್ರತಿಯಾಗಿ ಹುದ್ದೆ ಸಿಕ್ಕಿದೆಯಷ್ಟೆ. ಸಚಿವ ಸ್ಥಾನವನ್ನು ಲಂಚ ಪಡೆಯಲು, ಸ್ವಜನ ಪಕ್ಷಪಾತ ಮಾಡಲು ಬಳಸಿಲ್ಲ. ಜನರ ಸೇವೆಗೆ ಉಪಯೋಗಿಸಿದ್ದೇನೆ ಎಂದು ತಿರುಗೇಟು ನೀಡಿದರು.

‘ನಮ್ಮ ತಂದೆ ತಾಯಿ ಕೂಡ ಸ್ವಂತ ಹಣದಿಂದ ಪಕ್ಷ ಕಟ್ಟಿದ್ದಕ್ಕೆ ಪ್ರಾಮಾಣಿಕತೆಯಿಂದ ದುಡಿದಿದ್ದಕ್ಕೆ ಕಾಂಗ್ರೆಸ್‌ ಸ್ಥಾನಮಾನ ಕೊಟ್ಟಿದೆ. ನಾನೂ ಕೂಡ ಸಂಪೂರ್ಣವಾಗಿ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸಿದ್ದೇನೆ’ ಎಂದು ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ 7 ಪಕ್ಷಗಳನ್ನು ಬದಲಿಸಿದ್ದಾರೆ. ಜೆಡಿಎಸ್‌ನಲ್ಲಿದ್ದುಕೊಂಡೇ ಅಶಿಸ್ತು ಪ್ರದರ್ಶಿಸಿದ್ದಾರೆ. ಪಕ್ಷಾಂತರ ದೊಡ್ಡ ಪಿಡುಗು ಎಂದಾದರೆ ಇತರ ಪಕ್ಷಗಳ ನಾಯಕರನ್ನು ಕಾಂಗ್ರೆಸ್‌ ಪಕ್ಷ ಸೇರಿಸಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದಿಂದ ಬೇರೆ ಪಕ್ಷಕ್ಕೆ ಯಾರೂ ಹೋಗುವಂತಿಲ್ಲ; ಆದರೆ, ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬರಹುದು ಎಂದರೆ ಹೇಗೆ ಎಂದು ಪ್ರಶ್ನಿಸಿದ ಪ್ರಮೋದ್, ಪ್ರಪಂಚದಲ್ಲಿ ಪಕ್ಷಾಂತರ ಮಾಡಿದ ಪ್ರಥಮ ವ್ಯಕ್ತಿ ನಾನಲ್ಲ; ಸನ್ನಿವೇಶಕ್ಕೆ ತಕ್ಕಂತೆ ಪಕ್ಷ ಬದಲಿಸುವುದು ರಾಜಕೀಯದಲ್ಲಿ ಸಾಮಾನ್ಯ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಮೈಸೂರು ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್‌ಗೆ ನೆಲೆಯೇ ಇಲ್ಲದ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರು. ಇವರ ಪಕ್ಷಾಭಿಮಾನ ಎಂಥದ್ದು ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.