ADVERTISEMENT

ಉಡುಪಿ: ‘ಕೈ’ವಶವಾಗಿದ್ದ ಕೋಟೆಯಲ್ಲಿ 'ಕಮಲ' ಕಿಲಕಿಲ

ಉಡುಪಿ ಚುನಾವಣಾ ಕಣದಲ್ಲಿ

ಬಾಲಚಂದ್ರ ಎಚ್.
Published 8 ಏಪ್ರಿಲ್ 2023, 19:30 IST
Last Updated 8 ಏಪ್ರಿಲ್ 2023, 19:30 IST
ಬಿಜೆಪಿ
ಬಿಜೆಪಿ   

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿ 1997ರಲ್ಲಿ ಪತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ಉಡುಪಿ ನೂತನ ಜಿಲ್ಲೆಯಾಗುವ ಮುನ್ನ ಹಾಗೂ ನಂತರದ ರಾಜಕೀಯ ಕಾಲಘಟ್ಟವನ್ನು ಗಮನಿಸಿದರೆ ಹಲವು ರಾಜಕೀಯ ಪಕ್ಷಗಳ ಪ್ರಾಬಲ್ಯವನ್ನು ಕಾಣಬಹುದು.

1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕಾಪು, ಬ್ರಹ್ಮಾವರ, ಬೈಂದೂರು, ಕಾರ್ಕಳ (ದ್ವಿಸದಸ್ಯ ಕ್ಷೇತ್ರ) ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ ಉಡುಪಿ ಹಾಗೂ ಕುಂದಾಪುರದಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದರು.

1962ರ ಚುನಾವಣೆಯಲ್ಲಿ ಕಾಪು, ಕಾರ್ಕಳ ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಬ್ರಹ್ಮಾವರ, ಬೈಂದೂರು, ಉಡುಪಿ ಹಾಗೂ ಕುಂದಾಪುರದಲ್ಲಿ ಕಾಂಗ್ರೆಸ್‌ ವಿಜಯಿಯಾಗಿತ್ತು.

ADVERTISEMENT

1967ರ ಚುನಾವಣೆಯಲ್ಲಿ ಉಡುಪಿಯಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದರೆ, ಕಾರ್ಕಳದಲ್ಲಿ ಬಿಜೆಎಸ್‌ ಪಕ್ಷ, ಕಾಪು, ಬೈಂದೂರು, ಕುಂದಾಪುರದಲ್ಲಿ ಪ್ರಜಾಸೋಷಿಯಲಿಸ್ಟ್‌ ಹಾಗೂ ಬ್ರಹ್ಮಾವರ ಪಕ್ಷೇತ್ತರ ಅಭ್ಯರ್ಥಿಯ ಪಾಲಾಗಿತ್ತು.

1972ರ ಚುನಾವಣೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳು ‘ಕೈ’ ವಶವಾಗಿತ್ತು. ಸ್ಪರ್ಧಿಸಿದ್ದ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

1978ರ ಚುನಾವಣೆಯಲ್ಲಿ ಕಾಪು, ಉಡುಪಿ, ಬ್ರಹ್ಮಾವರ, ಬೈಂದೂರು ಹಾಗೂ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ (ಐ) ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಿದರೆ ಕುಂದಾಪುರ ಕ್ಷೇತ್ರದಲ್ಲಿ ಮಾತ್ರ ಜನತಾ ಪಕ್ಷದ ಅಭ್ಯರ್ಥಿ ಗೆದ್ದಿದ್ದರು.

1983ರ ಚುನಾವಣೆಯಲ್ಲಿ ಕಾಪು, ಕುಂದಾಪುರ, ಕಾರ್ಕಳದಲ್ಲಿ ಕಾಂಗ್ರೆಸ್ ಗೆದ್ದರೆ, ಬೈಂದೂರಿನಲ್ಲಿ ಜನತಾ ಪಕ್ಷ, ಬ್ರಹ್ಮಾವರ ಹಾಗೂ ಉಡುಪಿಯಲ್ಲಿ ಬಿಜೆಪಿ ಗೆಲುವು ಪಡೆಯುವ ಮೂಲಕ ಕರಾವಳಿಯ ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿತ್ತು.

ಬಳಿಕ ಮತ್ತೆ ಪುಟಿದೆದ್ದ ಕಾಂಗ್ರೆಸ್‌ 1985 ಹಾಗೂ 1989ರ ಎಲೆಕ್ಷನ್‌ನಲ್ಲಿ ಎಲ್ಲ ಆರು ವಿಧಾನಸಭಾ ಕ್ಷೇತ್ರಗಳನ್ನೂ ಕೈವಶ ಮಾಡಿಕೊಂಡಿತು. 1994ರ ಚುನಾವಣೆಯಲ್ಲಿ ಕಾಪು, ಕುಂದಾಪುರ, ಕಾರ್ಕಳದಲ್ಲಿ ಕಾಂಗ್ರೆಸ್‌ ಗೆದ್ದರೆ, ಉಡುಪಿಯಲ್ಲಿ ಕೆಸಿಪಿ, ಬ್ರಹ್ಮಾವರದಲ್ಲಿ ಜನತಾದಳ, ಬೈಂದೂರಿನಲ್ಲಿ ಬಿಜೆಪಿಯ ಕಮಲ ಅರಳಿತು.

1997ರಲ್ಲಿ ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ಬಳಿಕ ನಡೆದ ಚುನಾವಣೆಯ ಫಲಿತಾಂಶ ಗಮನಿಸಿದರೆ 1999ರಲ್ಲಿ ಕಾಪು, ಉಡುಪಿ, ಕಾರ್ಕಳ, ಬೈಂದೂರಿನಲ್ಲಿ ಕಾಂಗ್ರೆಸ್‌, ಬ್ರಹ್ಮಾವರದಲ್ಲಿ ಪಕ್ಷೇತ್ತರ, ಕುಂದಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಪಡೆದರು.

2004ರ ಚುನಾವಣೆಯಲ್ಲಿ ಕಾಪು, ಕುಂದಾಪುರ, ಉಡುಪಿ, ಕಾರ್ಕಳ ಬಿಜೆಪಿ, ಬ್ರಹ್ಮಾವರ ಪಕ್ಷೇತ್ತರ, ಬೈಂದೂರು ಕಾಂಗ್ರೆಸ್ ಪಾಲಾಗಿತ್ತು. 2008ರ ಚುನಾವಣೆಯಲ್ಲಿ ಬೈಂದೂರು, ಕುಂದಾಪುರ, ಉಡುಪಿ, ಕಾಪು ಕ್ಷೇತ್ರ ಬಿಜೆಪಿ ಪಾಲಾದರೆ, ಕಾರ್ಕಳ ಮಾತ್ರ ಕೈಪಕ್ಷದ ವಶವಾಗಿತ್ತು. ಈ ಚುನಾವಣೆಯ ಹೊತ್ತಿಗೆ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ರದ್ದಾಗಿತ್ತು.

2013ರ ಚುನಾವಣೆಯಲ್ಲಿ ಬೈಂದೂರು, ಕಾಪು, ಉಡುಪಿ ಕಾಂಗ್ರೆಸ್‌, ಕುಂದಾಪುರ ಪಕ್ಷೇತ್ತರ, ಕಾರ್ಕಳ ಬಿಜೆಪಿಗೆ ಒಲಿದಿತ್ತು. 2018ರ ಚುನಾವಣೆಯಲ್ಲಿ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಪಕ್ಷ ಪ್ರಾಬಲ್ಯ ಸಾಧಿಸಿತ್ತು.

ಚುನಾವಣಾ ಫಲಿತಾಂಶ (ಗೆದ್ದ ಕ್ಷೇತ್ರಗಳು)

ಕಾಂಗ್ರೆಸ್ ಗೆಲುವು;40

ಬಿಜೆಪಿ ಗೆಲುವು;18

ಪಿಎಸ್‌ಪಿ ಗೆಲುವು;7

ಕಾಂಗ್ರೆಸ್‌ (ಐ);5

ಜನತಾ ಪಕ್ಷ;2

ಕೆಸಿಪಿ;1

ಬಿಜೆಎಸ್‌;1

ಜನತಾದಳ ಗೆಲುವು;1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.