ADVERTISEMENT

ಗೋಹತ್ಯೆ ನಿಷೇಧ ಬಳಿಕ ಉಡುಪಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

ಕೃಷ್ಗಮಠದಲ್ಲಿ ವಿಶ್ವಪಥ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 15:43 IST
Last Updated 18 ಜನವರಿ 2021, 15:43 IST
ಕೃಷ್ಣಮಠದಲ್ಲಿ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಕೃಷ್ಣನ ದರ್ಶನ ಸರತಿ ಮಾರ್ಗವಾದ ವಿಶ್ವಪಥವನ್ನು ಉದ್ಘಾಟಿಸಿದರು.
ಕೃಷ್ಣಮಠದಲ್ಲಿ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಕೃಷ್ಣನ ದರ್ಶನ ಸರತಿ ಮಾರ್ಗವಾದ ವಿಶ್ವಪಥವನ್ನು ಉದ್ಘಾಟಿಸಿದರು.   

ಉಡುಪಿ: ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಕೆಡವಿದ ಬಳಿಕ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ರಾಮನ ಮೂರ್ತಿ ಪ್ರತಿಷ್ಠಾಪಿಸುವ ಸಂದರ್ಭ ಅವರ ಜತೆಗಿರುವ ಸೌಭಾಗ್ಯ ದೊರೆತಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಮರಿಸಿದರು.

ಕೃಷ್ಣಮಠದಲ್ಲಿ ಸೋಮವಾರ ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮ ಹಾಗೂ ‘ವಿಶ್ವಪಥ’ ದರ್ಶನ ಮಾರ್ಗ ಉದ್ಘಾಟಿಸಿ ಮಾತನಾಡಿದ ಅವರು, ಪೇಜಾವರ ಶ್ರೀಗಳ ಕನಸು ನನಸಾಗುತ್ತಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಸಾಮಾನ್ಯ ವ್ಯಕ್ತಿಯೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವ ಮೂಲಕ ಮಂದಿರ ನಿರ್ಮಾಣ ಸಂಕಲ್ಪಕ್ಕೆ ಕೈಜೋಡಿಸಿದ್ದಾನೆ ಎಂದರು.

ಮಹಾತ್ಮಾ ಗಾಂಧೀಜಿ ಅವರ ರಾಮ ರಾಜ್ಯ ಹಾಗೂ ರಾಮ ರಾಜ್ಯದ ಕನಸು ನನಸಾಗುತ್ತಿದೆ. ಗಾಂಧೀಜಿ ಅವರ ಆಶಯದಂತೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಉಡುಪಿಗೆ ಬಂದಿದ್ದೇನೆ. ಕೋವಿಡ್‌ ಸಂಕಷ್ಟದಲ್ಲೂ ನಾಡಿನ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕಾರ್ಯಗಳನ್ನು ಮಾಡುತ್ತಿದೆ. ಪ್ರಧಾನಿ ಅಪೇಕ್ಷೆಯಂತೆ ರೈತರ ಬೆಳೆಗೆ ದ್ವಿಗುಣ ದರ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ADVERTISEMENT

ಕೃಷ್ಣಮಠದ ಪರ್ಯಾಯ ಮಹೋತ್ಸವ ನಾಡಹಬ್ಬವಾಗಿ 5 ಶತಮಾನಗಳು ಸಂದಿವೆ. ಉಡುಪಿಯ ಅಷ್ಠಮಠಗಳು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯ. ಅದಮಾರು ಮಠವು ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮೂಲಕ ಹಳ್ಳಿಯಿಂದ ದಿಲ್ಲಿಯವರೆಗೂ ಛಾಪು ಮೂಡಿಸಿದೆ. ಕರಕುಶಲ ಕಲೆಗಳಿಗೆ ಪ್ರೋತ್ಸಾಹ, ಸಂಸ್ಕೃತ ಶಾಸ್ತ್ರದ ಅಧ್ಯಯನಕ್ಕೆ ಒತ್ತು ನೀಡುವ ಮೂಲಕ ಸನಾತನ ಧರ್ಮ ಉಳಿವಿಗೆ, ನೇಕಾರಿಕೆ, ಕುಂಬಾರಿಕೆ ಕಲೆ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ರಾಮಮಂದಿರ ನಿರ್ಮಾಣ ಟ್ರಸ್ಟ್‌ನಲ್ಲಿ ಪೇಜಾವರ ಮಠದ ಶ್ರೀಗಳಿಗೆ ಸ್ಥಾನ ನೀಡುವ ಮೂಲಕ ಉಡುಪಿಯ ಅಷ್ಠಮಠಗಳಿಗಿರುವ ಮನ್ನಣೆಯನ್ನು ತೋರಿಸುತ್ತದೆ. ಕೃಷ್ಣಮಠಕ್ಕೆ ಸರ್ಕಾರದಿಂದ ಅಗತ್ಯ ನೆರವು ಸಿಗಲಿದೆ ಎಂದು ಆಶ್ವಾಸನೆ ನೀಡಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯವಾಗಿ ಮಠಗಳು ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸವನ್ನು ಸ್ಮರಿಸಬೇಕಿದೆ. ಪೂರ್ವಜನರ ತಪ್ಪಿಸ್ಸಿನ ಫಲವಾಗಿ ಸಂಸ್ಕಾರ, ಸನಾತನ ಧರ್ಮ ಹಾಗೂ ಇಂದಿನ ಪೀಳಿಗೆಗೆ ಸಂಸ್ಕಾರ ಸಿಗುತ್ತಿದೆ ಎಂದರು.

ಗುರು ಪರಂಪರೆ, ಮಠ ಪರಂಪರೆ, ಹಿಂದೂ ಧರ್ಮ, ಋಷಿ ಮುನಿಗಳ ತ್ಯಾಗವನ್ನು ಸ್ಮರಿಸುವ ಅಗತ್ಯವಿದೆ. ಇತಿಹಾಸವನ್ನು ಸ್ಮರಿಸುತ್ತ, ವರ್ತಮಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ, ಭವಿಷ್ಯದ ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯಬೇಕು ಎಂದರು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಾದರೆ ಸಂಸ್ಕೃತಿಯ ಜತೆಗೆ ಸಂಸ್ಕಾರ ಸೇರಬೇಕು. ಸಂಸ್ಕಾರಕ್ಕೆ ಹಾಗೂ ಸಂಸ್ಕೃತಿಗೆ ಮಹತ್ವ ಕೊಡುವಂತಹ ವ್ಯಕ್ತಿಗಳು ಸರ್ಕಾರದ ಭಾಗವಾಗಿರಬೇಕು ಎಂದು ಆಶಿಸಿದರು.

ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಸಂವಿಧಾನ ಬದ್ಧವಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿರುವುದು ಸಂತಸ ತಂದಿದೆ. ಜನರ ಭಾವನೆಗಳಿಗೆ ತಕ್ಕಂತೆ ಹೇಗೆ ಸರ್ಕಾರ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿ ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್‌ ಹಾಗೂ ಲಾಲಾಜಿ ಮೆಂಡನ್‌, ಯುನಿಯನ್ ಬ್ಯಾಂಕ್ ಇಂಡಿಯಾದ ಸಿಇಒ ರಾಜಕಿರಣ ರೈ ವೇದಿಕೆಯಲ್ಲಿದ್ದರು. ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ ಸ್ವಾಗತಿಸಿದರು.

‘ಪರ್ಯಾಯ ಮಹೋತ್ಸವಕ್ಕೆ 5 ಶತಮಾನ’

5 ಶತಮಾನಗಳಿಂದ ಕಿಂಚಿತ್ತೂ ಚ್ಯುತಿ ಬಾರದಂತೆ ಕೃಷ್ಣಮಠದಲ್ಲಿ ಪರ್ಯಾಯ ಮಹೋತ್ಸವ ನಡೆದುಕೊಂಡು ಬಂದಿದೆ. ಮಧ್ವಾಚಾರ್ಯರು 2 ತಿಂಗಳಿಗೆ ಮಾಡಿದ್ದ ಪರ್ಯಾಯ ಅವಧಿಯನ್ನು ವಾದಿರಾಜ ಆಚಾರ್ಯರು 2 ವರ್ಷಕ್ಕೆ ವಿಸ್ತರಣೆ ಮಾಡಿದ್ದಾರೆ. ಆಚಾರ್ಯಧ್ವಯರ ಆಶೀರ್ವಾದದಿಂದ 500 ವರ್ಷ ಕಳೆದರೂ ಪರ್ಯಾಯ ಮಹೋತ್ಸವ ಸಾಂಗವಾಗಿ ನಡೆಯುತ್ತಾ ಬಂದಿದೆ. ವಿಪ್ಲವಗಳು ಎದುರಾದಾಗ ಉತ್ಸವಗಳು ನಿಂತಿವೆ, ಆದರೆ, ಕೃಷ್ಣಮಠದಲ್ಲಿ ಪೂಜೆ, ಪುನಸ್ಕಾರಗಳು ನಿಂತಿಲ್ಲ. ಕೃಷ್ಣನಿಗೆ ಬಹಳ ಪ್ರಿಯವಾದ ಉತ್ಸವಗಳಲ್ಲಿ ಪರ್ಯಾಯ ಮಹೋತ್ಸವವೂ ಒಂದು ಎಂದು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.

ಕನಕನ ಕಿಂಡಿಯಲ್ಲಿ ದೇವರ ದರ್ಶನ

ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿರುವ ‘ವಿಶ್ವಪಥ’ ಮಾರ್ಗವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು. ಬಳಿಕ ವಿಶ್ವಪಥದ ವಿಶೇಷತೆಯ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಕನಕನ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಪಡೆದರು. ಪರ್ಯಾಯ ಅದಮಾರು ಮಠದಿಂದ ಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ ಕೃಷ್ಣನ ಮೂರ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.