ಉಡುಪಿ: ಕುಂಭದ್ರೋಣ ಮಳೆಗೆ ಉಡುಪಿ ಜಿಲ್ಲೆ ಅಕ್ಷರಶಃ ನಲುಗಿದೆ. ಶುಕ್ರವಾರ ಹಾಗೂ ಶನಿವಾರ ಸುರಿದ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬಹುತೇಕ ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ತಗ್ಗ ಪ್ರದೇಶಗಳು ಕೆರೆಗಳಾಗಿ ಬದಲಾದಂತೆ ಕಾಣುತ್ತಿವೆ.
ಕಳೆದ ಕೆಲವು ದಿನಗಳಿಂದ ಮಳೆ ಬಿಡುವು ನೀಡಿತ್ತು. ಶುಕ್ರವಾರ ಮತ್ತೆ ಸುರಿಯಲು ಆರಂಭಿಸಿದ ಮಳೆ ಶನಿವಾರ ದಿನವಿಡೀ ಬೀಳುತ್ತಲೇ ಇತ್ತು. ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಾಗರಿಕರು ಜಲ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡು ಕೆಲಕಾಲ ಸಂಪರ್ಕ ಕಡಿತಗೊಂಡಿತ್ತು. ಕರಾವಳಿ ಜಂಕ್ಷನ್, ಮಣಿಪಾಲ ರಸ್ತೆ ಮುಳುಗಡೆಯಾಗಿತ್ತು. ಉಡುಪಿಯಿಂದ ಮಲ್ಪೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿ ಸಂಚಾರ ಸಾಧ್ಯವಾಗದೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸೇವಾ ರಸ್ತೆ ಸಂಪೂರ್ಣ ನೀರಿನಿಂದ ಆವೃತ್ತಗೊಂಡು ಸವಾರರು ಸಮಸ್ಯೆ ಎದುರಿಸುವಂತಾಯಿತು. ಅಂಬಲಪಾಡಿ ಜಂಕ್ಷನ್ ಸಮೀಪ ಹಲವು ಮನೆಗಳಿಗೆ ನೀರು ನುಗ್ಗಿತ್ತು.
ನಗರ ವ್ಯಾಪ್ತಿಯ, ಕೊಡಂಕೂರು, ಬನ್ನಂಜೆ, ಮಠದ ಬೆಟ್ಟು, ಕಲ್ಸಂಕ, ಕರಾವಳಿ ಜಂಕ್ಷನ್, ನಿಟ್ಟೂರು ಸೇರಿದಂತೆ ಹಲವು ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಭಾಗದಲ್ಲಿ ನೆರೆಯಲ್ಲಿ ಸಿಲುಕಿದ್ದ 70ಕ್ಕೂ ಹೆಚ್ಚು ನಾಗರಿಕರನ್ನು ಮಲ್ಪೆ ಮೀನುಗಾರರು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ನೆರೆ ಪ್ರದೇಶಗಳಿಗೆ ಶಾಸಕ ಕೆ.ರಘುಪತಿ ಭಟ್ ಭೇಟಿ ನೀಡಿ ರಕ್ಷಣಾ ಕಾರ್ಯಕ್ಕೆ ನೆರವಾದರು. ಬೀಡನಗುಡ್ಡೆಯಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರವನ್ನು ತೆರೆಯಲಾಗಿದ್ದು, ನಿರಾಶ್ರಿತರು ಆಶ್ರಯ ಪಡೆಯಬಹುದು ಎಂದರು.
ಗ್ರಾಮೀಣ ಭಾಗಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಜಿಲ್ಲೆಯ ಪಂಚನದಿಗಳು ಉಕ್ಕಿ ಹರಿಯುತ್ತಿದೆ. ನದಿ ಹಾಗೂ ತೋಡು ಬದಿಯ ಮನೆಗಳು ಜಲಾವೃತಗೊಂಡಿದ್ದು, ನಾಗರಿಕರು ಭೀತಿಯಲ್ಲಿದ್ದಾರೆ.
ನಗರ ಹಲವು ಪ್ಲ್ಯಾಟ್‌ಗಳಿಗೆ ನೀರು ನುಗ್ಗಿದ್ದು, ನೆಲಮಹಡಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿವೆ.
ಶುಕ್ರವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಮೂಡು ತೋನ್ಸೆ ಗ್ರಾಮದ ಜಾನಕಿ ಅವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಶನಿವಾರ ಬೆಳಿಗ್ಗೆ ಉದ್ಯಾವರ ಗ್ರಾಮದ ಶೇಖರ್ ಪೂಜಾರಿ ಅವರ ಮನೆ ಕುಸಿದಿದೆ.
ಬ್ರಹ್ಮಾವರದ ಮಟಪಾಡಿ ಗ್ರಾಮದ ವನಿತಾ ಶೆಟ್ಟಿ ಅವರ ಮನೆ ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಇದೇ ಗ್ರಾಮದ ಶೇಖರ್ ಶೆಟ್ಟಿ ಅವರ ಮನೆಯ ಬಾವಿ ಕುಸಿದಿದೆ.
ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮದ ಅಣ್ಣಪ್ಪ ಮೊಗವೀರ ಅವರ ಮನೆ, 41 ಶೀರೂರು ಗ್ರಾಮದ ನಿವಾಸಿ ಭೂಷಣ ನಾಯಕ್ ಅವರ ಮನೆಗಳು ಕುಸಿದಿವೆ. ಹಲವು ಭಾಗಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.