ADVERTISEMENT

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಕಾವೇರಿ ವಿಚಾರದಲ್ಲಿ ಹಿನ್ನಡೆ: ಆರ್. ಆಶೋಕ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 5:26 IST
Last Updated 14 ಜುಲೈ 2024, 5:26 IST
<div class="paragraphs"><p>ಆರ್. ಆಶೋಕ</p></div>

ಆರ್. ಆಶೋಕ

   

ಉಡುಪಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಾವೇರಿ ವಿಚಾರದಲ್ಲಿ ನಮಗೆ ವಿರುದ್ಧವಾದ ತೀರ್ಪುಗಳು ಬರುತ್ತಿವೆ. ಸರ್ಕಾರವು ಕದ್ದು ಮುಚ್ಚಿ ತಮಿಳುನಾಡಿಗೆ ನಿರಂತರ ನೀರನ್ನು ಬಿಡುಗಡೆ ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ರೈತ ಸಂಘದವರು ನನ್ನನ್ನು ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ರೈತರು ನೂರಾರು ದಿನಗಳಿಂದ ಧರಣಿ ನಡೆಸಿದರೂ ಸಿದ್ದರಾಮಯ್ಯನವರು ಸೌಜನ್ಯಕ್ಕೂ ಅವರನ್ನು ಮಾತನಾಡಿಸಿಲ್ಲ’ ಎಂದರು.

ADVERTISEMENT

ರಾಜ್ಯದ ಪರವಾಗಿ ಸರಿಯಾಗಿ ವಾದ ಮಂಡಿಸದ ಕಾರಣ ನಮಗೆ ಹಿನ್ನಡೆಯಾಗುತ್ತಿದೆ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಕಾವೇರಿಗೂ ಉಳಿಗಾಲವಿಲ್ಲ, ಮಹದಾಯಿಗೂ ಉಳಿಗಾಲವಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ದಲಿತರ ಹಣವನ್ನು ಲೂಟಿ ಮಾಡಲಾಗಿದೆ. ಇತಿಹಾಸದಲ್ಲೇ ದಲಿತರ ಹಣವನ್ನು ಈ ಪ್ರಮಾಣದಲ್ಲಿ ನುಂಗಿರುವ ಸರ್ಕಾರ ಮತ್ತೊಂದಿಲ್ಲ ಎಂದರು.

ಮುಡಾ ಹಗರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. 86 ಸಾವಿರ ಜನರು ಮುಡಾಕ್ಕೆ ಅರ್ಜಿ ಹಾಕಿ ನಿವೇಶನ ಸಿಗದೇ ಕಾಯುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಏಕಾಏಕಿ ನಿವೇಶನಗಳನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು. ಇಂತಹ ಭ್ರಷ್ಟ ಸರ್ಕಾರಕ್ಕೆ ಜನರೇ ಉತ್ತರ ಕೊಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.