ಉಡುಪಿ: ಬಿಜೆಪಿ ಸೇರಲು ವೈಯಕ್ತಿಕವಾಗಿ ಯಾವ ಬೇಡಿಕೆಗಳನ್ನು ಇಟ್ಟಿಲ್ಲ, ಪಕ್ಷ ಕೂಡ ಯಾವ ಭರವಸೆಗಳನ್ನೂ ನೀಡಿಲ್ಲ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು.
ನಗರದ ಕಿದಿಯೂರು ಹೋಟೆಲ್‌ನಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲು ಅಳಿಲು ಸೇವೆಯನ್ನು ನೀಡುತ್ತೇನೆ ಎಂದರು.
ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರಿದ್ದೇನೆ. ಬಸವರಾಜ ಬೊಮ್ಮಾಯಿ ಅವರ ವ್ಯಕ್ತಿತ್ವ ಹಾಗೂ ಕಾರ್ಯ ವೈಖರಿ, ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ವಿಶ್ವಾಸವಿಟ್ಟು ಬಿಜೆಪಿಗೆ ಬಂದಿದ್ದೇನೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಪಕ್ಷ ಸೂಚಿಸಿದ ವಿಧಾನಸಭಾ ಕ್ಷೇತ್ರ ಹಾಗೂ ವಿಶೇಷವಾಗಿ ಮೀನುಗಾರರು ಹೆಚ್ಚಾಗಿ ಇರುವಂತಹ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
2018ರಲ್ಲಿ ಸಚಿವನಾಗಿದ್ದಾಗ ಬಿಜೆಪಿ ಸೇರಲು ಆಹ್ವಾನ ಬಂದಾಗ ನೀಡಿದ ಹೇಳಿಕೆಯನ್ನು ಈಗ ವೈರಲ್ ಮಾಡಲಾಗುತ್ತಿದೆ. ಪ್ರಸ್ತುತ ನಾನು ಅಧಿಕಾರದಲ್ಲಿ ಇಲ್ಲ, ಜನಪ್ರತಿನಿಧಿಯೂ ಅಲ್ಲ. ಹಾಗಾಗಿ ಪಕ್ಷಾಂತರ ನಿಷೇಧ ಕಾಯ್ದೆಯೂ ಅನ್ವಯ ವಾಗುವುದಿಲ್ಲ. ಸ್ವತಂತ್ರವಾಗಿ ಬಿಜೆಪಿ ಸೇರುವ ತೀರ್ಮಾನ ಮಾಡಿದ್ದೇನೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ಹಿತಕರವಾಗಿರಲಿಲ್ಲ. ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ವಿತ್ತು. ಈ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡಿದ್ದರೂ ಸರಿಪಡಿಸಲು ಮುಂದಾಗದ ಕಾರಣಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ವಿರೋಧ ಪಕ್ಷದಲ್ಲಿ ಇರುವಾಗ ಆಡಳಿತ ಪಕ್ಷವನ್ನು ಟೀಕೆ ಮಾಡುವುದು ಕರ್ತವ್ಯ. 1978ರಲ್ಲಿ ಇಂಧಿರಾಗಾಂಧಿ ವಿರುದ್ಧ ವೀರೇಂದ್ರ ಪಾಟೀಲ್ ಸ್ಪರ್ಧಿಸಿ ಟೀಕಿಸಿದ್ದರು. ಬಳಿಕ 2 ವರ್ಷಗಳಲ್ಲೇ ಇಂಧಿರಾಗಾಂಧಿ ಸಂಪುಟದಲ್ಲಿ ಸಚಿವರಾದರು. ವಿರೋಧ ಪಕ್ಷದಲ್ಲಿ ಇದ್ದಾಗ ಟೀಕೆಗಳು ಸಹಜ ಎಂದು ಮಧ್ವರಾಜ್ ಸಮರ್ಥನೆ ನೀಡಿದರು.
ನನ್ನ ಬೆಂಬಲಿಗರು ಬಿಜೆಪಿ ಸೇರಲು ಆಸಕ್ತಿ ತೋರಿದ್ದಾರೆ. ಬಿಜೆಪಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ, ಸ್ಥಳೀಯ ಮುಖಂಡರ ಮನವೊಲಿಸಿ ಒಪ್ಪಿಗೆ ಪಡೆದು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.