ADVERTISEMENT

ಉಡುಪಿ | ಡೆಂಗಿ: ಇನ್ನೂ ದೂರವಾಗಿಲ್ಲ ಆತಂಕ

ಮಳೆ ನೀರು ಸಂಗ್ರಹವಾಗುವಲ್ಲಿ ಸೊಳ್ಳೆಗಳ ಉತ್ಪತ್ತಿ ಸಾಧ್ಯತೆ: ಆರೋಗ್ಯ ಇಲಾಖೆಯಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 6:45 IST
Last Updated 3 ಆಗಸ್ಟ್ 2024, 6:45 IST
   

ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದರೂ ನಗರ ಪ್ರದೇಶ ಸೇರಿದಂತೆ ಹಲವೆಡೆ ಡೆಂಗಿ ಜ್ವರದ ಆತಂಕ ಇನ್ನೂ ದೂರವಾಗಿಲ್ಲ.

ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಆಗಸ್ಟ್‌ವರೆಗೆ 353 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲೂ ಮಣಿಪಾಲ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ವರ್ಷ ಮಣಿಪಾಲದಲ್ಲಿ 29 ಪ್ರಕರಣಗಳು ದಾಖಲಾಗಿವೆ ಎನ್ನುತ್ತವೆ ಆರೋಗ್ಯ ಇಲಾಖೆಯ ಮೂಲಗಳು.

ಎಲಿಸಾ ಪರೀಕ್ಷೆಯ ಮೂಲಕ ಡೆಂಗಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆ ಮತ್ತು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ. ಈಚೆಗೆ ಜಿಲ್ಲೆಯಲ್ಲಿ ಒಂದೇ ದಿನ 10 ಡೆಂಗಿ ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ಜಿಲ್ಲೆಯ 70 ಆರೋಗ್ಯ ಕೇಂದ್ರಗಳ ಪೈಕಿ 52 ಕೇಂದ್ರಗಳ ವರದಿಯ ಆಧಾರದಲ್ಲಿ ಜಿಲ್ಲೆಯ 132 ಹಳ್ಳಿಗಳಲ್ಲೂ ಡೆಂಗಿ ಪ್ರಕರಣಗಳು ದಾಖಲಾಗಿದೆ. ಈ ವರ್ಷದ ಜನವರಿಯಿಂದ ಜೂನ್ ಅಂತ್ಯದವರೆಗೆ ಒಟ್ಟು 3,683 ಮಂದಿಯನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

ಜನವರಿಯಿಂದ ಆಗಸ್ಟ್‌ 2ರ ವರೆಗೆ ಕಾರ್ಕಳ ತಾಲ್ಲೂಕಿನಲ್ಲಿ 49, ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ 58,
ಉಡುಪಿ ನಗರದಲ್ಲಿ 102 ಮತ್ತು ಉಡುಪಿ ಗ್ರಾಮೀಣದಲ್ಲಿ 144 ಪ್ರಕರಣಗಳು ದಾಖಲಾಗಿದ್ದವು ಎಂದಿವೆ.

ಡೆಂಗಿಯಲ್ಲಿ ಒಟ್ಟು ನಾಲ್ಕು ಸೆರೋಟೈಪ್‌ಗಳಿದ್ದು, ಡೆಂಗಿ ಜ್ವರವು ಒಮ್ಮೆ ಬಾಧಿಸಿದ ವ್ಯಕ್ತಿಗೆ ಮತ್ತೆಯೂ ಬಾಧಿಸಬಹುದು. ಸೆರೋಟೈಪ್ 1 ಬಾಧಿಸಿದ ವ್ಯಕ್ತಿಗೆ ಮತ್ತೊಮ್ಮೆ ಸೆರೋಟೈಪ್ 1 ಬಾಧಿಸಿದರೆ ತೊಂದರೆ ಇಲ್ಲ. ಇತರ ಸಿರೋಟೈಪ್‌ಗಳು ಬಾಧಿಸಿದರೆ ಅಪಾಯವಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡಾದ್‌.

ಜನರು ತಮ್ಮ ಮನೆಯ ವಠಾರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಡೆಂಗಿ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹರಡುವ ಪ್ರಮಾಣವು ಹೆಚ್ಚಾಗಿರುತ್ತದೆ. ದೊಡ್ಡ ದೊಡ್ಡ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಟ್ಯಾಂಕ್‌ಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು, ಇಲ್ಲದಿದ್ದರೆ ಡೆಂಗಿ ಹರಡುವ ಸೊಳ್ಳೆಗಳು ಅದರಿಂದ ಉತ್ಪತ್ತಿಯಾಗುತ್ತವೆ ಎಂದು ಅವರು ಹೇಳಿದರು.

ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಮನೆ ಮಾಲಕರದ್ದೇ ಎನ್ನುವ ಸಿವಿಕ್‌ ಬೈಲಾ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅದು ಜಾರಿಯಾದರೆ ಮನೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ, ಮನೆ ಮಾಲೀಕನಿಗೆ ದಂಡ ವಿಧಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಈಗಲೂ ದಿನಕ್ಕೆ ಐದಕ್ಕಿಂತಲೂ ಹೆಚ್ಚು ಡೆಂಗಿ ಪ್ರಕರಣಗಳು ದೃಢಪಡುತ್ತಿವೆ. ಬಿಟ್ಟು ಬಿಟ್ಟು ಮಳೆ ಬಂದರೆ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಜನರು ಎಚ್ಚರಿಕೆ ವಹಿಸಬೇಕು
–ಡಾ. ಐ.ಪಿ.ಗಡಾದ್‌ ಜಿಲ್ಲಾ ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.