ADVERTISEMENT

ಕುಂದಾಪುರ: ಆರಿದ್ರಾ ಮಳೆಯ ಆರ್ಭಟಕ್ಕೆ ಹೈರಾಣಾದ ಜೀವ ಜಗತ್ತು

ಕುಂದಾಪುರ, ಬೈಂದೂರು ತಾಲ್ಲೂಕಿನಲ್ಲಿ ನೆರೆ, ಕೊಲ್ಲೂರಿನಲ್ಲಿ ಗುಡ್ಡ ಜರಿದು ಮಹಿಳೆ ಸಾವು

ಕೆ.ಸಿ.ರಾಜೇಶ್‌
Published 5 ಜುಲೈ 2024, 4:15 IST
Last Updated 5 ಜುಲೈ 2024, 4:15 IST
ಕುಂದಾಪುರ ಸಮೀಪದ ಸೇನಾಪುರ ಗ್ರಾಮದ ತೆಂಗಿನಗುಂಡಿ ಎಂಬಲ್ಲಿ ಗುರುವಾರ ಮಳೆಯಿಂದಾಗಿ ಕೃಷಿ ತೋಟಗಳಲ್ಲಿ ನೀರು ತುಂಬಿಕೊಂಡಿದೆ.
ಕುಂದಾಪುರ ಸಮೀಪದ ಸೇನಾಪುರ ಗ್ರಾಮದ ತೆಂಗಿನಗುಂಡಿ ಎಂಬಲ್ಲಿ ಗುರುವಾರ ಮಳೆಯಿಂದಾಗಿ ಕೃಷಿ ತೋಟಗಳಲ್ಲಿ ನೀರು ತುಂಬಿಕೊಂಡಿದೆ.   

ಕುಂದಾಪುರ: ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಗುರುವಾರವೂ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಹಲವು ಗ್ರಾಮಗಳ ತಗ್ಗು ಪ್ರದೇಶಗಳಲ್ಲಿ ನೆರೆ ನೀರು ನಿಂತಿದ್ದು ಕೃಷಿ ಚಟುವಟಿಕೆಗಳು ಬಹುತೇಕ ನಿಂತಿದೆ. ಕೊಲ್ಲೂರಿನಲ್ಲಿ ಗುಡ್ಡ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಉಭಯ ತಾಲ್ಲೂಕಿನಲ್ಲಿ ಹರಿಯುತ್ತಿರುವ ಪ್ರಮುಖ ನದಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೆ ಏರಿಕೆಯಾಗುತ್ತಿದ್ದು, ನದಿ ತೀರ ಪ್ರದೇಶದಲ್ಲಿನ ಹಲವು ಗ್ರಾಮಗಳಲ್ಲಿ ನೆರೆ ಕಾಣಿಸಿಕೊಂಡಿದ್ದು, ಇನ್ನೂ ಕೆಲವು ಗ್ರಾಮಗಳಲ್ಲಿ ನೆರೆಯ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ನಿರಂತರ ವರ್ಷಧಾರೆಯಿಂದಾಗಿ ಕೃಷಿ ಗದ್ದೆಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿರುವ ನೀರು, ತೋಟಗಳಲ್ಲಿ, ಮನೆಯ ಹಿತ್ತಲು ಹಾಗೂ ಅಂಗಳಗಳಲ್ಲಿ ನಿಂತು ಆತಂಕಗಳನ್ನು ಸೃಷ್ಟಿಸುತ್ತಿದೆ.

ಬೈಂದೂರು ತಾಲ್ಲೂಕಿನ ನಾವುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲ್ಬುಡ, ಕುದ್ರು, ಬಾಂಗ, ಅರೆಹೊಳೆ, ಮರವಂತೆ, ನಾಡಾ ಗುಡ್ಡೆಯಂಗಡಿ ಬಡಾಕೆರೆ, ಚಿಕ್ಕಳ್ಳಿ, ಹಡವು, ಅತ್ತಿಕೋಣೆ, ಕಡಿಕೆ ಕಂಬಳಗದ್ದೆ, ಕೆಂಬೈಲು, ಸಂಸಾಡಿ, ಕುರು ಮುಂತಾದ ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಂಡಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಈ ಭಾಗದಲ್ಲಿನ ಸಾವಿರಾರು ಎಕರೆ ಕೃಷಿ ಭೂಮಿಗಳು ನೀರಿನಲ್ಲಿ ಮುಳುಗಿದ್ದು, ಜಾನುವಾರುಗಳ ರಕ್ಷಣೆಗಾಗಿ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಕುಂದಾಪುರ ತಾಲ್ಲೂಕಿನ ಗುಲ್ವಾಡಿ ಗ್ರಾಮದ

ADVERTISEMENT

ಸೌಕೂರು ಗ್ರಾಮದಲ್ಲಿ ವಾರಾಹಿ ನದಿ ಉಕ್ಕಿ ಹರಿದ ಪರಿಣಾಮ ಸೌಕೂರು, ಕುದ್ರು, ಕುಚ್ಚಟ್ಟು ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. 15ಕ್ಕೂ ಅಧಿಕ‌ ಮನೆಗಳಿ ಹಾನಿಯಾಗಿದೆ, ಕೃಷಿ ಗದ್ದೆ, ತೋಟಗಳು ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜನಜೀವನ‌ ಅಸ್ತವ್ಯಸ್ತಗೊಂಡಿದೆ. ಸೌಕೂರು ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪುನರ್ವಸತಿ‌ ಕೇಂದ್ರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರನ್ನು ರಕ್ಷಣೆ ಮಾಡಲಾಗುತ್ತಿದೆ. ಬೇಳೂರು ಗ್ರಾಮದ ದೇವಸ್ಥಾನಬೆಟ್ಟು ಎಂಬಲ್ಲಿ ವಾರಾಹಿ ಕಾಲುವೆಯ ನೀರು ಉಕ್ಕೇರಿದ ಪರಿಣಾಮವಾಗಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.

ಯಳೂರು, ಬಟ್ಟೆ ಕುದ್ರು, ಕಟ್ಟು, ಕುರು, ಮುವತ್ತುಮುಡಿ, ಉಪ್ಪಿನಕುದ್ರು ಬಳ್ಕೂರು, ಹಾಲಾಡಿ, ಕೋಣಿ, ಆನಗಳ್ಳಿ, ಕಂದಾವರ, ಬ್ರಹ್ಮಾವರ ತಾಲ್ಲೂಕಿನ ಉಪ್ಲಾಡಿ, ಬನ್ನಾಡಿ, ಕಾವಡಿ, ಅಚ್ಲಾಡಿ ಪ್ರದೇಶಗಳಲ್ಲಿಯೂ ನೆರೆ ಕಾಣಿಸಿಕೊಂಡಿದ್ದು, ನೀರಿನ ಮಟ್ಟ ಹೆಚ್ಚಾಗುತ್ತಿರುವುದು ಸ್ಥಳೀಯರ ಆತಂಕ ಹೆಚ್ಚು ಮಾಡಿದೆ.

ಘಟ್ಟದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಈ ಭಾಗದ ಪ್ರಮುಖ ನದಿಗಳಾಗಿರುವ ಸೌಪರ್ಣಿಕ, ಕುಬ್ಜಾ, ವಾರಾಹಿ ಮುಂತಾದ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ನದಿ ನೀರು ಕೆಂಪನೆಯ ಕೆಸರು ಬಣ್ಣಕ್ಕೆ ತಿರುಗಿದೆ. ಕೊಂಕಣ ರೈಲ್ವೆ ಹಳಿಗಳ ಕಾರಣದಿಂದಾಗಿ ನೀರಿನ ಸುಗಮ ಸಂಚಾರಕ್ಕೆ ತೊಡಕಾಗಿರುವ ಪ್ರದೇಶಗಳಲ್ಲಿಯೂ ಕೃತಕ ನೆರೆ ಉಂಟಾಗಿದೆ. ಉಭಯ ತಾಲ್ಲೂಕುಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯೊಂದಿಗೆ ಗಾಳಿಯೂ ಸೇರಿಕೊಂಡಿದ್ದು ಮರ-ಗಿಡಗಳು ಧರಶಾಹಿಯಾಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳಿಗೂ ಹಾನಿಯುಂಟಾಗಿದೆ. ಸಂಜೆ ವೇಳೆ ಮಳೆರಾಯನ ಆರ್ಭಟ ಕಮ್ಮಿಯಾಗಿದ್ದು, ರಾತ್ರಿ ಮತ್ತೆ ಗಾಳಿ-ಮಳೆ ಹೆಚ್ಚಾದಲ್ಲಿ ನದಿ ತೀರ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಅಪಾಯದ ಮಟ್ಟವೂ ಹೆಚ್ಚಾಗಲಿದೆ.

ನೆರೆ ಪೀಡಿತ ಪ್ರದೇಶಗಳಿಗೆ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್‌.ಆರ್, ತಹಶೀಲ್ದಾರ್ ಎಚ್‌.ಎಸ್ ಶೋಭಾಕ್ಷ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ, ತಹಶೀಲ್ದಾರ್ ಪ್ರದೀಪ್, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಕರಣಿಕ ಪ್ರಕಾಶ್ ನಾಯ್ಕ್, ಪಂಚಾಯಿತಿ ಪಿಡಿಒ ವನಿತಾ ಶೆಟ್ಟಿ, ಗುಲ್ವಾಡಿ ಗ್ರಾಮ ಪಂಚಾಯಿತಿ ಸದಸ್ಯ ಸುದೀಶ್ ಶೆಟ್ಟಿ, ಸುರೇಂದ್ರ, ಹಂಝಾ ಮುಂತಾದವರು ಭೇಟಿ ನೀಡಿದ್ದಾರೆ. ಪೊಲೀಸ್, ಕಂದಾಯ, ಅಗ್ನಿಶಾಮಕ, ಪಂಚಾಯಿತಿ, ಗ್ರಹ ರಕ್ಷಕಾ ಸಿಬ್ಬಂದಿ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಿರಿಯಡಕ ಪರಿಸರದಲ್ಲಿ ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಪೆರ್ಡೂರು ಹರಿಖಂಡಿಗೆ ಸಂಪರ್ಕಿಸುವ ಅಣ್ಣಾಲು ಸೇತುವೆ, ಕಲ್ಲಂಗಳ ಸೇತುವೆ ಸೇರಿದಂತೆ ಸುತ್ತ ಮುತ್ತಲಿನ ಅನೇಕ ಕೃಷಿ ಭೂಮಿಗಳು ಜಲಾವೃತಗೊಂಡವು. ಗುರುವಾರ ಮಧ್ಯಾಹ್ನದ ಬಳಿಕ ಮಳೆ ಕಡಿಮೆಯಾಗಿದ್ದು, ನೀರಿನ ಹರಿವು ಕಡಿಮೆಯಾಗಿದೆ.

ಗುಡ್ಡ ಕುಸಿದು ಮಹಿಳೆ ಸಾವು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಲ್ಲೂರಿನ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಅಡಿಗ ಎನ್ನುವವರ ಮನೆಯ ಹಿಂಭಾಗದಲ್ಲಿ ಅಂದಾಜು 60 ಅಡಿ ಎತ್ತರದ ಗುಡ್ಡ ಕುಸಿದ ಪರಿಣಾಮ ಅಡಿಗರ ಮನೆಯ ಕೆಲಸಕ್ಕೆಂದು ಬಂದಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುವ ದಾರಿಯಲ್ಲಿ ಸೊಸೈಟಿ ಗುಡ್ಡೆ ಎಂಬಲ್ಲಿ ಇರುವ ವಿಶ್ವನಾಥ ಅಡಿಗ ಎನ್ನುವವರ ಮನೆಗೆ ಸಮೀಪದ ಹಳ್ಳಿ ಬೇರು ಗ್ರಾಮದ ಪುಟ್ಟ ಎನ್ನುವವರ ಪತ್ನಿ ಅಂಬಾ (48) ಎನ್ನುವ ಮಹಿಳೆಯೊಬ್ಬರು ಮನೆಕೆಲಸಕ್ಕೆ ಬರುತ್ತಿದ್ದರು. ಗುರುವಾರವೂ ಮನೆ ಕೆಲಸ ಹಾಗೂ ಊಟವನ್ನು ಮುಗಿಸಿದ್ದ ಅವರು, ಸುಮಾರು 3.15 ರ ವೇಳೆಗೆ ಮನೆಯ ಹಿಂಭಾಗಕ್ಕೆ ತೆರಳಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಗುಡ್ಡ ಕುಸಿದ ಪರಿಣಾಮ ಮಣ್ಣಿನ ರಾಶಿಯಲ್ಲಿ ಹೂತು ಹೋಗಿದ್ದರು.

ವಿಷಯ ತಿಳಿದ ಕೊಲ್ಲೂರಿನ ಟ್ಯಾಕ್ಸಿ ಹಾಗೂ ಜೀಪ್ ಚಾಲಕ ಅಸೋಸಿಯೇಷನ್ ಸದಸ್ಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರು. ಸಂಘದ ಸದಸ್ಯ ಡ್ರೈವರ್ ಅನಿ ಅವರ ಪ್ರಯತ್ನದಿಂದ ಮಹಿಳೆಯನ್ನು ರಕ್ಷಣೆ ಮಾಡಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪ್ರಯೋಜನವಾಗಿಲ್ಲ. ಮೃತ ಮಹಿಳೆಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರದ ಉಪ ವಿಭಾಗಾಧಿಕಾರಿ ರಶ್ಮಿ ಎಸ್‌.ಆರ್, ಡಿವೈಎಸ್‌ಪಿ ಕೆ.ಯು.ಬೆಳ್ಳಿಯಪ್ಪ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸವಿತ್ರತೇಜ, ತಹಶೀಲ್ದಾರ್ ಪ್ರದೀಪ್, ಕೊಲ್ಲೂರು ಠಾಣಾಧಿಕಾರಿ ಜಯಶ್ರೀ ಭೇಟಿ ನೀಡಿದ್ದಾರೆ.

ಕುಂದಾಪುರ ಸಮೀಪದ ನಾವುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲ್ಬುಡ ಎಂಬಲ್ಲಿ ವಾಸ್ತವ್ಯ ಮನೆ ಸುತ್ತ ನಿಂತಿರುವ ನೆರೆ ನೀರಿನಿಂದಾಗಿ ಸಂಪರ್ಕ ಕಡಿತಗೊಂಡಿದೆ
ಕುಂದಾಪುರ ಸಮೀಪದ ಗುಲ್ವಾಡಿ ಗ್ರಾಮ ಪಂಚಾಯಿತಿಯ ಸೌಕೂರಿನ ನೆರೆ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಉಪವಿಭಾಗಾಧಿಕಾರಿ ರಸ್ಮೀ ಎಸ್‌.ಆರ್ ಹಾಗೂ ತಹಶೀಲ್ದಾರ್ ಹೆಚ್‌.ಎಸ್‌.ಶೋಭಾಲಕ್ಷ್ಮೀ ಪರಿಶೀಲನೆ ನಡೆಸಿದರು.
ಕುಂದಾಪುರ ಸಮೀಪದ ಕೊಲ್ಲೂರಿನಲ್ಲಿ ಸೊಸೈಟಿ ಗುಡ್ಡೆ ಎಂಬಲ್ಲಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿರುವುದು
ಕುಂದಾಪುರ ಸಮೀಪದ ನಾವುಂದ ಸಾಲ್ಬುಡ ಎಂಬಲ್ಲಿ ವಾಸ್ತವ್ಯ ಮನೆ ಸುತ್ತ ನೆರೆ ನೀರು ನಿಂತಿದೆ
ಕಾರ್ಕಳ ತಾಲ್ಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿಯ ಅಂಗನವಾಡಿ ಕೇಂದ್ರದ ಮೇಲೆ ಮರ ಬಿದ್ದು ಕಟ್ಟಡ ಹಾನಿಯಾಗಿದೆ
ಕುಂದಾಪುರ ಸಮೀಪದ ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಗುಂಡಿ ವಾಟೆಗುಂಡಿಯ ಜನರ ಸಂಪರ್ಕ ಕೊಂಡಿಯಾಗಿರುವ ಬೆಳ್ಕಲ್ ಶಾಲೆಯ ಮುಂಭಾಗದ ಕಿರು ಸೇತುವೆ ಕುಸಿಯುವ ಭೀತಿ ಕಾಡುತ್ತಿದೆ
ಹಿರಿಯಡಕ ಪರಿಸರದಲ್ಲಿ ಸುರಿಯುತ್ತಿರುವ ಮಳೆಗೆ ಪೆರ್ಡೂರು ಹರಿಖಂಡಿಗೆ ಸಂಪರ್ಕಿಸುವ ಅಣ್ಣಾಲು ಸೇತುವೆ ಜಲಾವೃತಗೊಂಡಿದೆ

ಹಲವು ಗ್ರಾಮಗಳಲ್ಲಿ ನೆರೆ; ಕೃಷಿ ಗದ್ದೆಗಳು ಜಲಾಮಯ ವಾಸ್ತವ್ಯ ಮನೆಗಳಿಗೆ ಹಾನಿ ಕಡಲ್ಕೊರೆತದ ಆತಂಕ

ಬೇಡಿಕೆ ಇದ್ದಲ್ಲಿ ದೋಣಿ ವ್ಯವಸ್ಥೆ

ನೆರೆ ನೀರು ಕಾಣಿಸಿಕೊಂಡಿರುವ ಪ್ರದೇಶದ ಜನರಿಗೆ ಅಗತ್ಯ ಮುನ್ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಅಲ್ಲಿನ ನಿವಾಸಿಗಳನ್ನು ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುತ್ತದೆ‌. ದೋಣಿ ಬೇಡಿಕೆ ಇದ್ದಲ್ಲಿ ಅದರ ವ್ಯವಸ್ಥೆಯನ್ನು ಮಾಡಲಾಗುತ್ತದೆ. ರಕ್ಷಣಾ ಕಾರ್ಯಕ್ಕಾಗಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್‌.ಆರ್‌. ಹೇಳಿದರು.

ಕಾರ್ಕಳ: ಸಿಡಿಲು ಮಳೆಗೆ ಅಲ್ಲಲ್ಲಿ ಹಾನಿ

ಕಾರ್ಕಳ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಸಿಡಿಲು ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ತಾಲ್ಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿಯ ಅಂಗನವಾಡಿ ಕೇಂದ್ರದ ಮೇಲೆ ಮರ ಬಿದ್ದು ಕಟ್ಟಡಕ್ಕೆ ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನಾ ಗ್ರಾಮದ ಮಠದಕೆರೆಯ ನಿವಾಸಿ ಸುರೇಶ ಮೂಲ್ಯ ಅವರ ಮನೆ ಮೇಲೆ ಮರ ಬಿದ್ದು ₹20ಸಾವಿರ ನಷ್ಟ ಕಣಜಾರು ಗ್ರಾಮದ ಚೆನ್ನಮ್ಮ ಅವರ ಮನೆಹೆ ಹಾನಿಯಾಗಿದ್ದು ₹10ಸಾವಿರ ರೆಂಜಾಳ ಗ್ರಾಮದ ಅಂಗಡಿ ಬಾಕ್ಯಾರಿನ ನಿವಾಸಿ ಸುಪ್ರಿಯಾ ದೇವಾಡಿಗ ಅವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ₹25 ಸಾವಿರ ತಾಲ್ಲೂಕಿನ ನಿಟ್ಟೆ ಗ್ರಾಮದ ಮರಿಪರಪು ಪಾದೆ ಎಂಬಲ್ಲಿ ಸರೋಜಿನಿ ಎಂಬವರ ಮನೆಗೆ ಹಾನಿಯಾಗಿ ₹2ಲಕ್ಷ ನಷ್ಟ ಸಂಭವಿಸಿದೆ. ಭಾನುಮತಿ ಎಂಬವರ ಮನೆಗೆ ಹಾನಿಯಾಗಿ ₹20ಸಾವಿರ ಹಿಂಸಾ ಎಂಬವರ ಮನೆಗೆ ಹಾನಿಯಾಗಿ ₹10ಸಾವಿರಟ ಬೇಬಿ ಎಂಬವರ ಮನೆಗೆ ಹಾನಿಯಾಗಿ ₹10 ಸಾವಿರ ಲೀಲಾ ಮೂಲ್ಯ ಅವರ ಮನೆಯ ಮೇಲೆ ಮರ ಬಿದ್ದು ₹30ಸಾವಿರ ನಷ್ಟ ಸಂಭವಿಸಿದೆ.

ಕೊಲ್ಲೂರು: ಬೆಳ್ಕಲ್ ಶಾಲಾ ಸಂಪರ್ಕ ಸೇತುವೆ ಕುಸಿಯುವ ಭೀತಿ!

ಕುಂದಾಪುರ: ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಗುಂಡಿ ವಾಟೆಗುಂಡಿಯ ಜನರ ಸಂಪರ್ಕ ಕೊಂಡಿಯಾಗಿರುವ ಬೆಳ್ಕಲ್ ಶಾಲೆಯ ಮುಂಭಾಗದ ಕಿರು ಸೇತುವೆ ಮಳೆಗಾಲದ ನೀರಿನ ರಭಸಕ್ಕೆ ಕುಸಿಯುವ ಭೀತಿ ಕಾಡುತ್ತಿದೆ. 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶಗಳಿಂದ ಹರಿದು ಬಂದ ನೀರಿನ ರಭಸಕ್ಕೆ ಸೇತುವೆಯ ಅಡಿಪಾಯ ಕೊಚ್ಚಿ ಹೋಗಿದ್ದು ಕಂಬಗಳು ವಾಲಿಕೊಂಡಿದೆ. ಸೇತುವೆಯ ಮೇಲ್ಬಾಗದಲ್ಲಿಯೂ ಅನೇಕ ಕಡೆ ಬಿರುಕು ಬಿಟ್ಟಿದ್ದು ಕುಸಿದು ಬೀಳುವ ಹಂತದಲ್ಲಿದೆ. ದಿನನಿತ್ಯ ಬೆಳ್ಕಲ್ ಶಾಲೆ ಅಂಗನವಾಡಿಗೆ ಹೋಗುವ ಮಕ್ಕಳಿಗೆ ಹಾಗೂ ಕೆಲಸ ಕಾರ್ಯಗಳಿಗಾಗಿ ತಿರುಗಾಡುವ ಸ್ಥಳೀಯರಿಗೆ ಇದೇ ಪ್ರಮುಖ ಸಂಪರ್ಕ ಸೇತುವೆಯಾಗಿದ್ದು ಸೇತುವೆ ಮಳೆಯ ರಭಸಕ್ಕೆ ಕುಸಿದುಬಿದ್ದಲ್ಲಿ ಜನಸಂಪರ್ಕಕ್ಕೆ ತೊಡಕಾಗುವ ಸಾಧ್ಯತೆಗಳಿದೆ. ದಶಕಗಳ ಹಿಂದೆ ಶೇಡಿಗುಂಡಿಯ ಭಾಗದ ಜನರಿಗೆ ಸಂಪರ್ಕ ಬೆಸೆಯುವ ಏಕೈಕ ಮಾರ್ಗ ಇದಾಗಿತ್ತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಹೋರಾಟದ ಫಲವಾಗಿ ನಿರ್ಮಾಣಗೊಂಡ ಸೇತುವೆ ಈ ಭಾಗದ ಜನರ ಸಂಪರ್ಕ ಕೊಂಡಿಯಾಗಿದೆ. ಇದಕ್ಕೆ ಅಪಾಯ ಉಂಟಾದಲ್ಲಿ ಸ್ಥಳೀಯರಿಗೆ ಭಾರಿ ತೊಂದರೆಯಾಗುತ್ತದೆ. ಸೇತುವೆಯ ದುರಸ್ತಿ ಪರ್ಯಾಯ ವ್ಯವಸ್ಥೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರು ವಾಸುದೇವ ಮುದೂರು ಆಗ್ರಹಿಸಿದ್ದಾರೆ. ಶಾಲೆಯ ಮುಂಭಾಗದಲ್ಲಿಯೇ ಹರಿದು ಹೋಗುವ ನದಿಗೆ ಹೊಂದಿಕೊಂಡಂತೆ ಬಿರುಕುಗಳು ಕಾಣಿಸಿಕೊಂಡಿದ್ದು ಇದರಿಂದ ಮುಂದಿನ ದಿನಗಳಲ್ಲಿ ಶಾಲೆಗೂ ಕೂಡ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಜಡ್ಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸತೀಶ್ ತೋಳಾರ್ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.