ಹೆಬ್ರಿ: ತಾಲ್ಲೂಕಿನ ಕಬ್ಬಿನಾಲೆ ಪೀತುಬೈಲು ಎನ್‌ಕೌಂಟರ್‌ನಲ್ಲಿ ಹತನಾದ ವಿಕ್ರಂ ಗೌಡ ಕಬ್ಬಿನಾಲೆ ಮತ್ತಾವುನಲ್ಲಿ ಪೊಲೀಸರ ಮೇಲೆ ನಕ್ಸಲರು ನಡೆಸಿದ್ದ ಬಾಂಬ್, ಗ್ರೆನೇಡ್ ದಾಳಿ, ಸಾರ್ವಜನಿಕರಿಗೆ ಕರಪತ್ರ ಹಂಚಿಕೆ, ಆಗುಂಬೆಯ ಬರ್ಕಣ ಬಳಿ ಸರ್ಕಾರಿ ಬಸ್ ಸುಟ್ಟ ಪ್ರಕರಣ, ಪೊಲೀಸರ ಮಾಹಿತಿದಾರ ಎಂಬ ಕಾರಣಕ್ಕೆ ಈದು ಸದಾಶಿವ ಗೌಡ ಹತ್ಯೆ, ಶಿಕ್ಷಕ ಸೀತಾನದಿ ಬೋಜ ಶೆಟ್ಟಿ, ಸುರೇಶ ಶೆಟ್ಟಿ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ.
ವಿಕ್ರಂ ಗೌಡ ನೇತೃತ್ವದ ನಕ್ಸಲರ ತಂಡ ಸ್ಥಳೀಯರಿಂದ ರೇಷನ್ ಸಹಿತ ಆಹಾರ ಸಾಮಾಗ್ರಿ ಸಂಗ್ರಹಿಸಲು ಬರುತ್ತದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ.
ಸ್ಥಗಿತಗೊಂಡಿದ್ದ ಚಲನವಲನ:
ಹಲವು ವರ್ಷಗಳಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರ ಚಲನವಲನ, ನಕ್ಸಲ್ ಚಟುವಟಿಕೆ ಬಹುತೇಕ ಸ್ಥಗಿತವಾಗಿತ್ತು. ನಕ್ಸಲರು ಕೇರಳ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಇತ್ತು. ನಕ್ಸಲರಿಂದ ಹಲವಾರು ಮಂದಿಯ ಭೀಕರ ಹತ್ಯೆ ನಡೆದಾಗ ಸಾರ್ವಜನಿಕರು ಅವರಿಗೆ ಸಹಕಾರ ನೀಡುವುದು ಸಂಪೂರ್ಣ ಬಂದ್ ಆಗಿತ್ತು. ನಕ್ಸಲರ ಬಗ್ಗೆ ಪೊಲೀಸರ ಮಾಹಿತಿದಾರ ಎಂಬ ಕಾರಣಕ್ಕೆ ಕಬ್ಬಿನಾಲೆಯ ತಿಂಗಳಮಕ್ಕಿ ದಟ್ಟಾರಣ್ಯದಲ್ಲಿ ಈದು ಸದಾಶಿವ ಗೌಡ ಎಂಬುವರನ್ನು ಮರಕ್ಕೆ ಕಟ್ಟಿ ಹಾಕಿ ನಕ್ಸಲರು ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಇಂತಹ ದೊಡ್ಡ ಘಟನೆಗಳು ಸಂಭವಿಸಿಲ್ಲ. ಇದೀಗ ಸುಮಾರು 10 ವರ್ಷಗಳ ಬಳಿಕ ಗುಂಡಿನ ಸದ್ದು ಕೇಳಿದೆ.
ಅದೇ ಹೊತ್ತಿಗೆ ಮಲೆನಾಡು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಅರಣ್ಯದಂಚಿನಲ್ಲಿ ಬದುಕು ಕಟ್ಟಿಕೊಂಡವರನ್ನು ಒಕ್ಕಲೆಬ್ಬಿಸುತ್ತಾರೆ ಎಂಬ ಹುಯಿಲು ಜೋರಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ತಂಡವೊಂದು ಕಬ್ಬಿನಾಲೆ, ನಾಡ್ಪಾಲು, ಮುಟ್ಲುಪಾಡಿ ಸೇರಿದಂತೆ ವಿವಿಧೆಡೆ ತಿರುಗಾಡಿ ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ಜನ ಸಂಘಟನೆ ನಡೆಸುತ್ತಿದ್ದರು. ಅದೇ ಹೊತ್ತಿಗೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊಂದಿದ್ದ ವಿಕ್ರಂ ಗೌಡನೂ ಸಕ್ರಿಯನಾಗಿದ್ದ.
‘ಮನೆ ಬಿಟ್ಟು ಹೋದ ಮಗ ಮತ್ತೆ ಮನೆಗೆ ಬಂದಿಲ್ಲ. ನಕ್ಸಲ್ ಚಟುವಟಿಕೆ ಬಿರುಸುಗೊಂಡ ಬಳಿಕ ಮನೆಗೆ ಪೊಲೀಸರು ಬಂದು ವಿಚಾರಿಸುವಾಗಲೇ ನಮಗೆ ಮಗ ನಕ್ಸಲ್ ಆಗಿರುವುದು ತಿಳಿದದ್ದು’ ಎಂದು ಕಳೆದ 4 ವರ್ಷಗಳ ಹಿಂದಿನವರೆಗೂ ವಿಕ್ರಂ ಗೌಡನ ತಾಯಿ ವೃದ್ಧೆ ಗುಲಾಬಿ ಗೌಡ ಕಣ್ಣೀರಾಗುತ್ತಿದ್ದರು. 15 ವರ್ಷಗಳಿಗೂ ಹೆಚ್ಚು ಕಾಲ ಪೊಲೀಸರು ನಿತ್ಯವೂ ಎಂಬಂತೆ ಮನೆಗೆ ಬಂದು ವಿಚಾರಣೆ ನಡೆಸುವುದರಿಂದ ರೋಸಿ ಹೋಗಿದ್ದರು. ಒಂದು ಕಡೆ ಪೊಲೀಸರು, ಇನ್ನೊಂದೆಡೆ ನಕ್ಸಲರು ಇದರಿಂದ ಕುಟುಂಬ ಮೌನಕ್ಕೆ ಶರಣಾಗಿತ್ತು. ಸಾಮಾನ್ಯ ಹುಡುಗ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿ ತನ್ನೂರಿನಲ್ಲೇ ಹಲವು ಭಯಾನಕ ಕೃತ್ಯ ನಡೆಸಿದ್ದ. ಹಂತ ಹಂತವಾಗಿ ಬೆಳೆದು 15 ವರ್ಷಗಳಿಂದ ನಾಯಕನಾಗಿ ನಕ್ಸಲರ ತಂಡ ಮುನ್ನಡೆಸುತ್ತಿದ್ದನು. ವಿಕ್ರಂ ಗೌಡ ನಕ್ಸಲರೊಂದಿಗೆ ಸೇರಿದ ಕಾರಣದಿಂದಲೇ ಹೆಬ್ರಿ, ಕಾರ್ಕಳ ಸೇರಿ ಉಡುಪಿ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಾಂಬ್, ಗ್ರೆನೇಡ್ ದಾಳಿ 2004ರಲ್ಲಿ ಹೆಬ್ರಿಯ ಕಬ್ಬಿನಾಲೆ ಮತ್ತಾವಿನಲ್ಲಿ ನಡೆದಿತ್ತು.
ಮನೆ ಬಿಟ್ಟು ಬಂದ ಸಹೋದರ ಸುರೇಶ ಗೌಡ:
ವಿಕ್ರಂ ಗೌಡ ಮನೆ ಬಿಟ್ಟು ಹೋದ ಬಳಿಕ 15 ವರ್ಷಗಳಿಗೂ ಹೆಚ್ಚು ಕಾಲ ಪೊಲೀಸರು ಮನೆಗೆ ಬಂದು ವಿಚಾರಣೆ ನಡೆಸುತ್ತಿದ್ದರು. ನಿತ್ಯವೂ ನೋವು, ಭಯದ ನಡುವೆ ಬದುಕಬೇಕು. ಯಾವ ಹೊತ್ತಿಗೆ ಏನಾಗುತ್ತದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಕಾಡು ಉತ್ಪತ್ತಿಯನ್ನು ಹುಡುಕಿ ತಂದು ಬದುಕುವ ಕುಟುಂಬ. ಸಣಕಲು ಜೀವದ ಗುಲಾಬಿ ಗೌಡ ತನ್ನೆಲ್ಲಾ ಮಕ್ಕಳನ್ನು ಕಷ್ಟದಲ್ಲಿ ಸಾಕಿ ಸಲಹಿದ್ದರು. ಹಿರಿಯ ಮಗ ಮನೆ ಬಿಟ್ಟು ನಕ್ಸಲನಾದ. ಹೆಂಡತಿ, ಮಕ್ಕಳು, ತಂಗಿ, ತಂಗಿಯ ಮಕ್ಕಳು ಎಲ್ಲರನ್ನೂ ನೋಡುವ ದೊಡ್ಡ ಹೊಣೆ ಕಿರಿಯ ಮಗ, ವಿಕ್ರಂ ಸಹೋದರ ಸುರೇಶ ಗೌಡನ ಮೇಲೆ ಬಿತ್ತು. ಪೊಲೀಸ್, ನಕ್ಸಲ್ ಭಯದ ನಡುವೆ ಬದುಕುತ್ತಿದ್ದ ಸುರೇಶ ಗೌಡ ಕೊನೆಗೆ ಮನೆ ತೊರೆದು ಹೊರಬಂದು ಹೆಬ್ರಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ತಾಯಿ ಗುಲಾಬಿ ಗೌಡ ನಿಧನರಾಗಿದ್ದಾರೆ.
ನಕ್ಸಲ್ ಚಟುವಟಿಕೆಗೆ ಹಿನ್ನಡೆ:
ನಾಯಕ ಕೂಡ್ಲು ವಿಕ್ರಂ ಗೌಡ ಹತನಾಗಿರುವುದರಿಂದ ತಂಡ ಮುನ್ನಡೆಸುವ ಮುಖ್ಯಸ್ಥನ ಕೊರತೆ ನಕ್ಸಲರ ತಂಡಕ್ಕೆ ಎದುರಾಗಿದ್ದು, ನಕ್ಸಲರ ಚಟುವಟಿಕೆಗೆ ಸಂಪೂರ್ಣ ಹಿನ್ನಡೆಯಾಗುವ ಸಾಧ್ಯತೆ ಕಾಣುತ್ತಿದೆ. 15 ವರ್ಷಗಳಿಗೂ ಹೆಚ್ಚು ಕಾಲ ನಡೆದ ಹತ್ಯೆ, ಹಲವು ಭಯಾನಕ ಘಟನೆಗಳು ವಿಕ್ರಂ ಗೌಡನ ಮುಂದಾಳತ್ವದಲ್ಲೇ ನಡೆದಿತ್ತು. ಇದೀಗ ಆತ ಹತನಾಗಿರುವುದು ತಂಡಕ್ಕೆ ಬಹುದೊಡ್ಡ ಹಿನ್ನಡೆ ಎನ್ನಲಾಗುತ್ತಿದೆ.
ಎದೆಗೆ ಗುಂಡು
ನಕ್ಸಲ್ ನಿಗ್ರಹ ದಳದ ಜೊತೆಗೆ ನಡೆದ ಗುಂಡಿನ ಚಕಮಕಿಯ ವೇಳೆ ನಕ್ಸಲ್ ಮುಖಂಡ ವಿಕ್ರಂ ಗೌಡನ ಎದೆಗೆ ಗುಂಡುಗಳು ತಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.